ಚಿತ್ರದುರ್ಗ: ಫೆ.10 : ಎಸ್ಸಿ ಪಟ್ಟಿಯಿಂದ ಎಕೆ, ಎಡಿ ಹೆಸರು ತೆಗೆದು ಮೂಲ ಜಾತಿ ಹೆಸರಲ್ಲಿ ಪ್ರಮಾಣ ಪತ್ರ ನೀಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕೂಡಲೇ ಶಿಫಾರಸ್ಸು ಮಾಡುವಂತೆ ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಇವುಗಳಲ್ಲಿ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಎಂಬ ಒಂದೇ ಹೆಸರಿನಲ್ಲಿ ಜಾತಿ ಸೂಚಕ ಪ್ರಮಾಣ ಪತ್ರವನ್ನು ಮಾದಿಗರು, ಛಲವಾದಿಗರು ಪಡೆಯುತ್ತಿದ್ದಾರೆ. ಇದು ಬಹಳಷ್ಟು ಗೊಂದಲ ಉಂಟು ಮಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವೆಂದರೇ ಪರಿಶಿಷ್ಟ ಜಾತಿ ಪಟ್ಟಿಯಿಂದ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಹೆಸರುಗಳನ್ನು ತೆಗೆದುಹಾಕಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ನೀಡುವಂತೆ 30 ವರ್ಷಗಳ ಕಾಲದಿಂದಲೂ ಮಾದಿಗ ಸಮುದಾಯ ಹಾಗೂ ವಿವಿಧ ಸಂಘಟನೆಗಳು ಹೋರಾಟ ನಡೆಸಿವೆ. ಇದರ ಫಲವಾಗಿ ಎಂಪೋರಿಯರ್ ಡೇಟಾ ಸಂಗ್ರಹಿಸಿ ಗುಂಪುಗಳನ್ನು ವರ್ಗೀಕರಿಸಿ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಮಾದಿಗರಿಗೆ ಹಾಗೂ ಸಂಬಂಧಿತ ಜಾತಿಯವರಿಗೆ ವರವಾಗಿದೆ ಎಂದರು.
ಒಳಮೀಸಲಾತಿ ಜಾರಿಗೆ ತಕ್ಷಣ ಸ್ಪಂದಿಸಿರುವ ಸಾಮಾಜಿಕ ನ್ಯಾಯದ ಹರಿಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೀಸಲು ಹಂಚಿಕೆಗೆ ಯಾವ ರೀತಿ ಕ್ರಮಕೈಗೊಳ್ಳಬೇಕೆಂಬ ಕುರಿತು ವರದಿ ನೀಡುವಂತೆ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚಿಸಿ ನಿಗದಿತ ಸಮಯದಲ್ಲಿ ವರದಿ ಸಲ್ಲಿಸುವಂತೆ ಗಡುವು ನೀಡಿದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು, ಇದರಲ್ಲಿ 1 ಸಾವಿರದಿಂದ 1 ಲಕ್ಷದ ಜನಸಂಖ್ಯೆಯೊಳಗೆ ಇರುವ ಸಣ್ಣ ಪ್ರಮಾಣದ 80 ಜಾತಿಗಳು ಇವೆ. ಉಳಿದಂತೆ ಬಹುಸಂಖ್ಯಾತ ಮಾದಿಗ, ಛಲವಾದಿ, ಲಂಬಾಣಿ, ಭೋವಿ, ಬಳಿಕ ಸ್ಥಾನದಲ್ಲಿ ಕೊರಚ, ಕೊರಮರು ಇದ್ದಾರೆ ಎಂದರು.
ಮಾದಿಗ ಸಂಬಂಧಿತ 16 ಜಾತಿಗಳಿವೆ. ಚಮ್ಮಾರ್, ಸಮಗಾರ, ಮೋಚಿ, ಡೋರ್, ದಕ್ಕಲಿಗ ಮತ್ತಿತರ ಜಾತಿಗಳು ಎಡಗುಂಪಿಗೆ ಸೇರಿವೆ. ಈ ಜಾತಿಗಳು ಜಾತಿ ಸೂಚಕ ಪ್ರಮಾಣಪತ್ರ ಪಡೆಯುವಾಗ ಮೂಲ ಜಾತಿ ಹೆಸರಲ್ಲಿ ಪಡೆಯದೆ ಆದಿಕರ್ನಾಟಕ ಎಂದು ಗುರುತಿಸಿಕೊಂಡಿವೆ. ರಾಜ್ಯದ ಅರ್ಧಭಾಗದಷ್ಟು ಜಿಲ್ಲೆಗಳಲ್ಲಿ ಮಾದಿಗ ಮತ್ತು ಛಲವಾದಿ ಈ ಎರಡು ಸಮುದಾಯದವರು ಬಹುತೇಕ ಆದಿಕರ್ನಾಟಕ (ಎಕೆ), ಕೆಲವೆಡೆ ಆದಿದ್ರಾವಿಡ (ಎಡಿ) ಎಂದು ಗುರುತಿಸಿಕೊಂಡಿದ್ದಾರೆ ಎಂದರು.
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಲ್ಲಿ ಮಾದಿಗರು ಮತ್ತು ಛಲವಾದಿಗರು ಆದಿಕರ್ನಾಟಕ ಎಂಬ ಒಂದೇ ಹೆಸರಿನಲ್ಲಿ ಜಾತಿ ಸೂಚಕ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮಾದಿಗರು ಆದಿಕರ್ನಾಟಕವೆಂದು ಮತ್ತು ಛಲವಾದಿಗಳು ಆದಿದ್ರಾವಿಡ ಎಂದು ಜಾತಿ ಸೂಚಕ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದು ಎರಡು ಜಾತಿಗಳಲ್ಲಿ ಯಾವ್ಯಾವ ಜಾತಿಗಳು ಎಷ್ಟು ಸಂಖ್ಯೆಯಲ್ಲಿ ಇವೆ ಎಂದು ನಿಖರವಾಗಿ ಹೇಳಲು ಕಷ್ಟ ಸಾಧ್ಯವಾಗಿದೆ. ಉಳಿದಂತೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗಗಳಲ್ಲಿ ಮಾದಿಗರು ಮಾದಿಗರೆಂದು, ಹೊಲೆಯರು ಹೊಲೆಯರೆಂದು ಮತ್ತು ಛಲವಾದಿಗರೆಂದು ಜಾತಿ ಸೂಚಕ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಇಲ್ಲಿ ಯಾವ ಗೊಂದಲವು ಇಲ್ಲ ಎಂದರು.
ಇದಕ್ಕೆಲ್ಲ ಪರಿಹಾರವೆಂಬಂತೆ ನ್ಯಾ.ಸದಾಶಿವ ಆಯೋಗ ಮನೆ ಮನೆ ಸಮೀಕ್ಷೆ ನಡೆಸಿ ಯಾವ ಯಾವ ಜಾತಿಯವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಮತ್ತು ಹಿಂದುಳಿವಿಕೆಯನ್ನು ದಾಖಲಿಸಿ, ಒಳಮೀಸಲಾತಿ ವರ್ಗೀಕರಣಕ್ಕೆ ವರದಿ ಸಿದ್ಧಪಡಿಸಿದೆ. ಈ ವರದಿಯನ್ನೇ ಆಧಾರವಾಗಿಟ್ಟುಕೊಂಡು ಎಂಪೋರಿಯರ್ ಡೇಟಾ ಪಡೆದು ಒಳಮೀಸಲಾತಿ ವರ್ಗೀಕರಣಕ್ಕೆ ನ್ಯಾ.ನಾಗಮೋಹನ್ ದಾಸ್ ಮುಂದಾಗಬೇಕೆಂಬುದು ನಮ್ಮ ಆಗ್ರಹ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವರದಿ ಪರಿಶೀಲನೆಗೆ ಆಯೋಗಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ನ್ಯಾ.ನಾಗಮೋಹನ್ ದಾಸ್ ಅವರು ದಲಿತ ಸಮುದಾಯದ ಪ್ರಗತಿಗೆ ಬದ್ಧರಾಗಿದ್ದು, ಅವರಿಗೆ ನಿಗದಿತ ಅವಧಿಯೊಳಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲು ಮುಂದಾಗಬೇಕು. ನ್ಯಾ.ನಾಗಮೋಹನ್ ದಾಸ್ ವಿಚಾರಣಾ ಆಯೋಗವು, ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಜವಾನ ಹುದ್ದೆಯಿಂದ ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಸೇರಿ ಉನ್ನತ ಹುದ್ದೆಯವರೆಗೆ ಇರುವ ನೌಕರರ ಮಾಹಿತಿ ಸಂಖ್ಯೆ ಎಷ್ಟು. ಈ ನೌಕರರಿಂದ ಮೂಲ ಜಾತಿಯನ್ನು ಸಂಗ್ರಹಿಸಿ ಒಟ್ಟಾರೆ ಎಲ್ಲ ಇಲಾಖೆಗಳಲ್ಲಿ ಸರ್ಕಾರಿ ನೌಕರಿಯಲ್ಲಿ ಯಾವ ಜಾತಿ ಯಾವ ಪ್ರಮಾಣದಲ್ಲಿದ್ದಾರೆಂಬ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಬೇಕು. ಈ ಅಂಶದ ಆಧಾರದ ಮೇಲೆ ಮೀಸಲಾತಿ ಆಧಾರದಡಿ ಸರ್ಕಾರಿ ನೌಕರಿ ಪಡೆಯುವಲ್ಲಿ ಯಾವ ಜಾತಿಗಳಿಗೆ ಅನ್ಯಾಯವಾಗಿದೆ ಎಂಬುದನ್ನು ಒಳಮೀಸಲಾತಿ ನೀಡುವ ಸಂದರ್ಭ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನದ ಹಂಚಿಕೆ ಹಾಗೂ ಎಲ್ಲ ಯೋಜನೆಗಳಲ್ಲೂ ಒಳಮೀಸಲಾತಿ ಕಲ್ಪಿಸಬೇಕು. ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಡಿಪ್ಲೋಮಾ, ನರ್ಸಿಂಗ್, ಐಟಿಐ, ಪ್ಯಾರಾ ಮೆಡಿಕಲ್, ಪ್ರಥಮ ದರ್ಜೆ, ಪಿಯು ಕಾಲೇಜು, ಪ್ರೌಢಶಾಲೆ ಹೀಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ಸರ್ಕಾರಿ ಅನುದಾನ ಮತ್ತು ನಿವೇಶನ ಪಡೆದಿದ್ದಾರೆ. ಪರಿಶಿಷ್ಟ ಗುಂಪಿನಲ್ಲಿರುವವರು ಯಾವ ಯಾವ ಜಾತಿಯವರು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆಂಬ ಮಾಹಿತಿಯನ್ನು ಸಂಗ್ರಹಿಸಬೇಕು. ಹೀಗೆ ಎಲ್ಲ ಕ್ಷೇತ್ರದಲ್ಲಿ ಮಾಹಿತಿ ಸಂಗ್ರಹಿಸಿದರೆ ಯಾವ ಜಾತಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಹೆಚ್ಚು ಹಿಂದುಳಿದಿದೆ ಎಂಬುದು ಸ್ಪಷ್ಟಗೊಳ್ಳಲಿದೆ. ಆಗ ಒಳಮೀಸಲಾತಿ ವರ್ಗೀಕರಣ ವೇಳೆ ಮೀಸಲು ಹಂಚಿಕೆಗೆ ಸಹಕಾರಿಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯರಾದ ಆರ್.ಕೃಷ್ಣಮೂರ್ತಿ, ಆರ್.ನರಸಿಂಹರಾಜು, ವಕೀಲರಾದ ಶರಣಪ್ಪ, ರವೀಂಧ್ರ ಇದ್ದರು.
13 ರಂದು ಮಾದಿಗ ಮತ್ತು ಸಂಬಂಧಿತ ಜಾತಿಗಳ ಸಮನ್ವಯ ಸಭೆ
ಮಾದಿಗ ಮತ್ತು ಸಂಬಂಧಿತ ಜಾತಿಗಳ ಸಮನ್ವಯ ಸಭೆಯನ್ನು ಫೆ.13 ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಭೆ ಕರೆಯಲಾಗಿದೆ.
ಸಮಗಾರ, ಚಮ್ಮಾರ್, ಮೋಚಿ, ಡೋರ್, ದಕ್ಕಲಿಗ ಮತ್ತಿತರ ಜಾತಿಗಳು ಮಾದಿಗ ಸಂಬಂಧಿತ ಎಡಗುಂಪಿನ ಜಾತಿಗಳಾಗಿವೆ. ಈ ಜಾತಿಗಳಲ್ಲಿ ಸಾಮರಸ್ಯ ಮೂಡಿಸಿ ಒಗ್ಗಟ್ಟಾಗಿ ನಮ್ಮ ಸಮಸ್ಯೆಗಳ ಪರಿಹಾರ ಹಾಗೂ ಒಳಮೀಸಲಾತಿ ಪಡೆಯುವ ಹಕ್ಕೋತ್ತಾಯವನ್ನು ಮಂಡಿಸಲು ಸಭೆ ಕರೆಯಲಾಗಿದೆ.
ಅಂದಿನ ಸಭೆಗೆ ನ್ಯಾ. ಎಚ್.ಎನ್.ನಾಗಮೋಹನ್ ದಾಸ್ ಅವರು ಖುದ್ದಾಗಿ ಆಗಮಿಸಿ ಎಲ್ಲರ ಸಮಸ್ಯೆಗಳನ್ನು ಆಲಿಸಿ, ಮನವಿ ಸ್ವೀಕರಿಸಲಿದ್ದಾರೆ. ಈ ಸಭೆಗೆ ಮಾದಿಗ ಮತ್ತು ಸಂಬಂಧಿತ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಮೈಸೂರು: ಕಳೆದ ಕೆಲವು ದಿನಗಳ ಹಿಂದಷ್ಟೇ ದೆಹಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಗೆಲುವು ಕಂಡಿದೆ. ಆದರೆ…
ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ನಿನ್ನೆಯಷ್ಟೇ 35 ರೂಪಾಯಿ ಏರಿಕೆಯಾಗಿತ್ತು. ಇಂದು ನೋಡಿದ್ರೆ 87 ರೂಪಾಯಿ…
ಚಳ್ಳಕೆರೆ : ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಗ್ರಾಮಿಣ ಜಾನಪದ ಶೈಲಿಯ ತಮಟೆ…
ಈ ರಾಶಿಯವರಿಗೆ ಅದೃಷ್ಟದ ಯೋಗಗಳ ಸುರಿಮಳೆ, ಮಂಗಳವಾರದ ರಾಶಿ ಭವಿಷ್ಯ 11 ಫೆಬ್ರವರಿ 2025 ಸೂರ್ಯೋದಯ - 6:48 AM…
ಹಿರಿಯೂರು : ನಗರದ ತಾಲೂಕು ಕಚೇರಿ ಮುಂಭಾಗ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ವತಿಯಿಂದ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ…
ಚಿತ್ರದುರ್ಗ: ವೈದ್ಯರನ್ನು ನಂಬುವಷ್ಟು ಜನ ದೇವರನ್ನು ನಂಬುವುದಿಲ್ಲವೇನೊ. ಇಂಥ ವೈದ್ಯರು ಸಾವು ಬದುಕಿನ ನಡುವೆ ಹೋರಾಡುವ ರೋಗಿಗಳ ಕಡೆ ಗಮನ…