ಸುದ್ದಿಒನ್,ಬೆಂಗಳೂರು,ಮೇ.17: ರಾಜ್ಯದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ಅಸ್ಮಿತೆ, ಪ್ರಾದೇಶಿಕ ಹೆಮ್ಮೆ ಹಾಗೂ ದೇಶಭಕ್ತಿಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕರ್ನಾಟಕದ ನಾಡಗೀತೆಯಾದ “ಜಯ ಭಾರತ
ಜನನಿಯ ತನುಜಾತೆ”ಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ಇಲಾಖೆ ಖಡಕ್ ಆದೇಶ ಹೊರಡಿಸಿದೆ.ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ, ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತೀವ್ರ ಎಚ್ಚರಿಕೆ ನೀಡಲಾಗಿದೆ.
ಶಿಕ್ಷಣ ಇಲಾಖೆ ಹೊರಡಿಸಿರುವ ಪ್ರಮುಖ ಮಾರ್ಗಸೂಚಿಗಳು:
ವಿದ್ಯಾರ್ಥಿಗಳು ನಾಡಗೀತೆಯನ್ನು ಕೇವಲ ಯಾಂತ್ರಿಕವಾಗಿ ಹಾಡದೆ, ಅದರ ಭಾವನೆಯನ್ನು ಅರಿತು ಗೌರವಪೂರ್ವಕವಾಗಿ ಹಾಡಲು ಅನುಕೂಲವಾಗುವಂತೆ ಇಲಾಖೆಯು ಕೆಲವು ಪ್ರಮುಖ ನಿಯಮಗಳನ್ನು ರೂಪಿಸಿದೆ:
ದಿನಚರಿಯ ಅಂಗವಾಗಿ ಗಾಯನ: ಪ್ರತಿದಿನ ಶಾಲೆಯ ಬೆಳಗಿನ ಪ್ರಾರ್ಥನಾ ಸಮಯದಲ್ಲಿ ನಾಡಗೀತೆಯನ್ನು ಸಾಮೂಹಿಕವಾಗಿ, ಲಯಬದ್ಧವಾಗಿ ಮತ್ತು ಸರಿಯಾದ ಉಚ್ಚಾರಣೆಯೊಂದಿಗೆ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಹಾಡಬೇಕು.
ವಿಶೇಷ ತರಬೇತಿ: ವಿದ್ಯಾರ್ಥಿಗಳು ಶುದ್ಧ ಕನ್ನಡದಲ್ಲಿ, ಸರಿಯಾದ ಸ್ವರ ಹಾಗೂ ಲಯದೊಂದಿಗೆ ನಾಡಗೀತೆ ಹಾಡುವುದನ್ನು ಕಲಿಯಲು ಶಾಲೆಯ ಸಂಗೀತ ಶಿಕ್ಷಕರ ಮೂಲಕ ಸೂಕ್ತ ತರಬೇತಿ ನೀಡಲು ಸೂಚಿಸಲಾಗಿದೆ.

ಅರ್ಥದ ಅರಿವು ಮೂಡಿಸುವುದು: ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಭಾವಪೂರ್ಣವಾಗಿ ಹಾಡಲು ಅನುವಾಗುವಂತೆ, ಕನ್ನಡ ಭಾಷಾ ಶಿಕ್ಷಕರು ನಾಡಗೀತೆಯ ಸಂಪೂರ್ಣ ಅರ್ಥ ಮತ್ತು ಅದರ ಮಹತ್ವವನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು.
ವಿಶೇಷ ದಿನಗಳಲ್ಲೂ ಕಡ್ಡಾಯ: ಕೇವಲ ದಿನನಿತ್ಯದ ಪ್ರಾರ್ಥನೆ ಅಷ್ಟೇ ಅಲ್ಲದೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ ಎಲ್ಲಾ ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳು, ಶಾಲಾ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಅಧಿಕೃತ ಕಾರ್ಯಕ್ರಮಗಳಲ್ಲೂ ನಾಡಗೀತೆಯನ್ನು ಕಡ್ಡಾಯವಾಗಿ ಹಾಡತಕ್ಕದ್ದು.
ಶಿಸ್ತು ಮತ್ತು ಗೌರವಕ್ಕೆ ಮೊದಲ ಆದ್ಯತೆ
ನಾಡಗೀತೆ ಹಾಡುವಾಗ ವಿದ್ಯಾರ್ಥಿಗಳಲ್ಲಿ ಶಿಸ್ತು, ಗೌರವ ಮತ್ತು ಐಕ್ಯತೆಯ ಭಾವನೆ ಮೂಡುವುದು ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿಗಳು ಯಾವುದೇ ಬಾಹ್ಯ ಒತ್ತಡವಿಲ್ಲದೆ ಗೌರವಪೂರ್ವಕವಾಗಿ ಹಾಡುವಂತಹ ಪೂರಕ ವಾತಾವರಣವನ್ನು ಶಾಲೆಗಳಲ್ಲಿ ಸೃಷ್ಟಿಸಬೇಕು. ಈ ಸುತ್ತೋಲೆಯನ್ನು ಶಾಲೆಯ ನೋಟಿಸ್ ಬೋರ್ಡ್ನಲ್ಲಿ ಪ್ರದರ್ಶಿಸುವುದರ ಜೊತೆಗೆ, ಇದರ ಹಿನ್ನೆಲೆಯನ್ನು ಪೋಷಕರಿಗೂ ತಲುಪಿಸಬೇಕು” ಎಂದು ಶಾಲಾ ಶಿಕ್ಷಣ ಇಲಾಖೆಯ (ಪ್ರಾಥಮಿಕ ಶಿಕ್ಷಣ) ನಿರ್ದೇಶಕರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









