ಮುಸ್ಲಿಂ ಅಭ್ಯರ್ಥಿ ವಿವಾದ ಆರಂಭಿಸಿದ್ದೇ ಸಿದ್ದರಾಮಯ್ಯ: ಹೆಚ್ ಡಿ ಕುಮಾರಸ್ವಾಮಿ.

suddionenews
1 Min Read

ಕಲಬುರಗಿ: ಸಿದ್ದರಾಮಯ್ಯ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಲು ನನಗೇನು ಬೇರೆ ಕೆಲಸ ಇಲ್ಲವೇ ಮುಸ್ಲಿಂ ಅಭ್ಯರ್ಥಿಗಳ ರಾಜಕೀಯ ವಿವಾದ ಶುರು ಮಾಡಿದ್ದು ಸಿದ್ದರಾಮಯ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಾನಗಲ್‌ ಮತ್ತು ಸಿಂಧಗಿಯಲ್ಲಿ ಜೆಡಿಎಸ್‌ ಪಕ್ಷ ಇಬ್ಬರು ಸುಶಿಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಆದರೆ, ಜೆಡಿಎಸ್‌ ಸೆಕ್ಯುಲರ್‌ ಮತಗಳನ್ನು ವಿಭಜಿಸಿ ಬಿಜೆಪಿಗೆ ಗೆಲ್ಲಲು ಅವಕಾಶ ಮಾಡಿಕೊಡಲು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ ಎಂದು ಸಿದ್ದರಾಮಯ್ಯ ಮೊದಲು ಹುಯಿಲೆಬ್ಬಿಸಿದರು. ಅನಗತ್ಯ ವಿವಾದವನ್ನು ಸೃಷ್ಟಿಸಿ ಗೊಂದಲ ಆರಂಭ ಮಾಡಿದ್ದಾರೆ. ಬಹುಶಃ ಅದಕ್ಕೆ ನಾನೇ ಅಂತ್ಯ ಹಾಡಬೇಕಾಗುತ್ತದೆ, ಅಂಥ ಸ್ಥಿತಿಗೆ ನನ್ನನ್ನು ದೂಡಿದ್ದಾರೆ ಎಂದು ಹೆಚ್‌ಡಿಕೆ ಅವರು ಮಾರ್ಮಿಕವಾಗಿ ತಿಳಿಸಿದರು.

ಕಾಂಗ್ರೆಸ್‌ ಪಕ್ಷವೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಬಹುದಾಗಿತ್ತಲ್ಲವೇ? ಅದನ್ನು ಮಾಡದೇ ಜೆಡಿಎಸ್‌ ಟಿಕೆಟ್‌ ಕೊಟ್ಟಿತು ಕೊರಗುವುದು ಏಕೆ? ಸಿಂಧಗಿಯಲ್ಲಿ ನಮ್ಮ ಪಕ್ಷದ ನಿಷ್ಠಾವಂತ ಕುಟುಂಬಕ್ಕೆ ಟಿಕೆಟ್‌ ಕೊಟ್ಟಿದ್ದೇವೆ. ಪಕ್ಷದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಮರಣ ಹೊಂದಿದ ನಾಯಕರ ಕುಟುಂಬದ ಹೆಣ್ಣು ಮಗಳು ನಾಜಿಯಾ ಶಕೀಲಾ ಅಂಗಡಿ ಅವರಿಗೆ ಟಿಕೆಟ್‌ ನೀಡಿದ್ದೇವೆ. ಇದರ ಬಗ್ಗೆ ಕಾಂಗ್ರೆಸ್‌ಗೆ ಸಂಕಟವೇಕೆ? ಕ್ಷೇತ್ರದಲ್ಲಿ ಪೈಪೋಟಿ ಇರುವುದು ಜೆಡಿಎಸ್-ಬಿಜೆಪಿ ನಡುವೆ ಮಾತ್ರ. ಯಾವ ಚುನಾವಣೆಯ್ಲಲೂ ಕಾಂಗ್ರೆಸ್‌ ಎರಡನೇ ಸ್ಥಾನಕ್ಕೂ ಬಂದಿರಲಿಲ್ಲ. ಹಾಗಿದ್ದ ಮೇಲೆ ಜೆಡಿಎಸ್‌ ವಿರುದ್ಧ ಅಪಪ್ರಚಾರ ಮಾಡುವುದೇಕೆ? ಎಂದು ಹೆಚ್‌ಡಿಕೆ ಕಿಡಿ ಕಾರಿದರು.

ನಾನು ಯಾವುದೇ ಕಾರಣಕ್ಕೂ ಅವರ ತಂಟೆಗೆ ಹೋಗುವುದಿಲ್ಲ, ಅವರೇ ಪದೇಪದೆ ನಮ್ಮ ಸುದ್ದಿಗೆ ಬರುತ್ತಿದ್ದಾರೆ. ನಮಗೆ ಮಾಡಲು ಸಾಕಷ್ಟು ಕೆಲಸಗಳಿವೆ, ಹೇಳಲು ಅನೇಕ ವಿಚಾರಗಳಿವೆ. ಜನರ ಬಳಿ ಮತ ಕೇಳಲು ನಮ್ಮಲ್ಲಿ ಜನರಿಗಾಗಿ ಮಾಡಿದ ಸೇವೆ ಇದೆ. ಕಾಂಗ್ರೆಸ್‌ ಪಕ್ಷದ ಹೆಸರೇಳಿಕೊಂಡು ಮತ ಕೇಳಬೇಕಾದ ಕರ್ಮ ನಮಗಿಲ್ಲ. ಆದರೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಹೆಸರೇಳಿಕೊಂಡೇ ಮತಯಾಚನೆ ಮಾಡುತ್ತಿದ್ದಾರೆಂದು ಅವರು ತರಾಟೆಗೆ ತೆಗೆದುಕೊಂಡರು.

Share This Article
Leave a Comment

Leave a Reply

Your email address will not be published. Required fields are marked *