ಚಿತ್ರದುರ್ಗ: ಇಂದು ಕೋಟೆನಾಡಿನಲ್ಲಿ SC/ST ಐಕ್ಯತಾ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಪ್ರಮುಖ ನಾಯಕರು ಭಾಗಿಯಾಗಿದ್ದರು. ಇಂಥ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಮುಜುಗರವಾಗುವಂತ ಘಟನೆ ನಡೆದಿದೆ.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಷಣ ಶುರು ಮಾಡಿದ್ದರು. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಹೊರಡಬೇಕಾಗಿತ್ತು. ವಿಮಾನಕ್ಕೆ ತಡವಾಗುತ್ತೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರ ಭಾಷಣವನ್ನು ಆಲಿಸದೆ ಹೊರಟು ಬಿಟ್ಟರು. ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರ ಹಿಂದೆಯೇ ಎಲ್ಲರೂ ಹೋಗುವುದಕ್ಕೆ ಶುರು ಮಾಡಿದರು. ವೇದಿಕೆ ಮೇಲೆ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದರೆ, ವೇದಿಕೆಯ ಮುಂಭಾಗದಲ್ಲಿ ಜನ ಕೂಡ ಖಾಲಿಯಾಗುತ್ತಾ ಇದ್ದರು.
ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ನಡುವೆ, ಇನ್ನೊಮ್ಮೆ ಎಲ್ಲವನ್ನು ಸಂಕ್ಷಿಪ್ತವಾಗಿ ಮಾತನಾಡೋಣಾ ಅಂತ ಹೇಳಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.


