in

ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಉಯೋಗಕ್ಕೆ ಕಡಿವಾಣ ಹಾಕಿ : ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ

suddione whatsapp group join

ಚಿತ್ರದುರ್ಗ, .ಮೇ.07: ಜಿಲ್ಲೆಯಾದ್ಯಂತ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಉಪಯೋಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನುಷ್ಠಾನದ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜುಲೈ 2022 ರಿಂದ ಅನ್ವಯವಾಗುವಂತೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ , ಆಮದು , ಸಂಗ್ರಹಣೆ , ವಿತರಣೆ , ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊರಡಿಸಿದ ಮಾರ್ಗಸೂಚಿ ಪ್ರಕಾರ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಮಾರಾಟದಲ್ಲಿ ತೊಡಗಿರುವವರಿಗೆ ಪ್ರತಿ ಟನ್‌ಗೆ ರೂ .5000 ದಂಡ ವಿಧಿಸಲಾಗುವುದು.

ಏಕ ಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳಿಂದ ಪರಿಸರ, ಜಲಚರಗಳು ಸೇರಿದಂತೆ ಎಲ್ಲಾ ಜೀವ ರಾಶಿಗಳಿಗೆ ಹಾನಿಯಾಗುತ್ತಿದೆ. ರಾಜ್ಯ ಸರ್ಕಾರ 2016 ರಿಂದ ರಾಜ್ಯಾದ್ಯಂತ ಪ್ಲಾಸ್ಟಿಕ್‌ ಉತ್ಪನ್ನಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ , ಬ್ಯಾನರ್‌ಗಳು , ಬಂಟಿಂಗ್ಸ್ , ಪ್ಲೆಕ್ಸ್ , ಪ್ಲೇಟ್‌ಗಳು , ಧ್ವಜಗಳು , ಕಪ್‌ಗಳು , ಸ್ಪೂನ್‌ಗಳು , ಅಂಟಿಕೊಳ್ಳುವ ಫಿಲ್ಮಂಗಳು , ಎಲ್ಲಾ ದಪ್ಪದ ಡೈನಿಂಗ್ ಟೇಬಲ್‌ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು , ಸ್ಟ್ರಾಗಳು , ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳನ್ನು ನಿಷೇಧಿಸಿದೆ. ಈ ಕುರಿತು ವ್ಯಾಪಕ ಪ್ರಚಾರಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ನಗರ ಹಾಗೂ ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಘನತಾಜ್ಯ ನಿರ್ವಹಣೆ ನಿಯಮಾನುಸಾರ ಕೈಗೊಳ್ಳಬೇಕು. ಮನೆ ಮನೆಗಳಿಂದ ಹಸಿ ಹಾಗೂ ಒಣಕಸಗಳನ್ನು ಬೇರ್ಪಡಿಸಿ ಸಂಗ್ರಹಿಸಬೇಕು. ಘನತಾಜ್ಯಗಳ ಮರುಬಳಕೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಸೇರಿದಂತೆ ಹಲವು ರೀತಿಯ ಘನತ್ಯಾಜ್ಯಗಳು ಸಿಮೆಂಟ್ ತಯಾರಿಯಲ್ಲಿ ಬಳಕೆಯಾಗುತ್ತವೆ. ಹಸಿ ತ್ಯಾಜ್ಯದಿಂದ ರಸಗೊಬ್ಬರ ತಯಾರಿಸಬಹುದು.

ಹೊಸದುರ್ಗ ಪಟ್ಟಣ ಪಂಚಾಯಿತಿ ಘನತ್ಯಾಜ್ಯ ಸಂಗ್ರಹಣೆ, ಮರುಬಳಕೆಯಲ್ಲಿ ಮಾದರಿ ಎನಿಸುವಂತೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಉಳಿದ ನಗರ ಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೊಸದುರ್ಗ ಘನತ್ಯಾಜ್ಯ ವಿಲೇವಾರಿ ಘಟಕ್ಕೆ ಭೇಟಿ ನೀಡಿ ಮಾದರಿಯನ್ನು ಅಳವಡಿಸಿಕೊಳ್ಳಿ. ಕಟ್ಟಡ ತ್ಯಾಜ್ಯಗಳ ಮರುಬಳಕೆ ಹಾಗೂ ವಿಲೇವಾರಿಗೆ ಸ್ಥಳಗಳನ್ನು ಗುರುತಿಸಿ. ಜಲಕಾಯ್ದೆ ಅನುಸಾರ ಎಲ್ಲಾ ಸ್ಥಳೀಯ ಸಂಸ್ಥೆಗಳು ನೀರಿನ ಮೂಲಗಳಿಗೆ ಕೊಳಚೆ ನೀರು ಸೇರಿದಂತೆ ನೋಡಿಕೊಳ್ಳಬೇಕು. ಕೊಳಚೆ ನೀರು ಶುದ್ಧೀಕರಣ ಘಟಕಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಸಭೆ ನಡೆಸಬೇಕು. ಎಲ್ಲಾ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ವಾರ್ಷಿಕ ವರದಿಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಪ್ರಚಾರದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಪ್ರಕಾಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎನ್.ಸ್ವಾಮಿ, ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಸಭೆಯ ಸದಸ್ಯ ವಕೀಲ ವಿಶ್ವನಾಥ್ ಸೇರಿದಂತೆ ಎಲ್ಲಾ ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಭಕ್ತಿಯ ಪರಾಕಾಷ್ಠೆ  ಮನಮನಗಳಲ್ಲಿ ಮತ್ತು ಮನೆಮನೆಗಳಲ್ಲಿ ತುಂಬಿಕೊಂಡಿದೆ : ತಹಶೀಲ್ದಾರ್ ಎನ್. ರಘುಮೂರ್ತಿ

ದಿವ್ಯಾ ಹಾಗರಗಿ ಸುಖಾ ಸುಮ್ಮನೆ ರಾಜಕಾರಣಿಗಳ ಜೊತೆ ಫೋಟೋ ತೆಗೆಸಿಕೊಂಡಿರಲಿಲ್ಲ.. ಅದರ ಹಿಂದೆ ಇತ್ತು ಕರಾಳ ಯೋಜನೆ..!