ಚಿತ್ರದುರ್ಗ : ಸೇವೆಯಿಂದ ನಿವೃತ್ತರಾದ ಪೊಲೀಸರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿ.ಭೀಮ ರೆಡ್ಡಿ ತಿಳಿಸಿದರು.
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ, ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ದಾವಣಗೆರೆ, ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಶಿವಮೊಗ್ಗ, ಕೇವಾ ಡಿಜಿಟಲ್ ವಲ್ರ್ಡ್ ಸಹಯೋಗದೊಂದಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸೋಮವಾರ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಕಲ್ಯಾಣಿಯಲ್ಲಿ ಏರ್ಪಡಿಸಲಾಗಿದ್ದ ಹೃದಯ, ಗ್ಯಾಸ್ಟ್ರೋಲಜಿ, ಕೀಲು ಮತ್ತು ಮೂಳೆ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಿವೃತ್ತರಾದ ಮೇಲೆ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದು ಸಹಜ. ಅದಕ್ಕಾಗಿ ಇಂತಹ ತಪಾಸಣಾ ಶಿಬಿರಗಳ ಪ್ರಯೋಜನ ಪಡೆದುಕೊಂಡು ಅಗತ್ಯವಿದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.
ಡಾ.ರಾಕೇಶ್ ತಿಲಕ್ ಮಾತನಾಡಿ ಪೊಲೀಸರು ನಿವೃತ್ತರಾದಾಗ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ನಿರ್ಲಕ್ಷೆ ಮಾಡದೆ ಹೃದಯ ಮತ್ತು ರಕ್ತದೊತ್ತಡ, ಶುಗರ್ ತಪಾಸಣೆ ಮಾಡಿಸಿಕೊಂಡಾಗ ಮಾತ್ರ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಗಮನಿಸಿ ಚಿಕಿತ್ಸೆ ಪಡೆದುಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಕೇವಾ ಡಿಜಿಟಲ್ ವಲ್ರ್ಡ್‍ನ ದಾದಾಪೀರ್ ಮಾತನಾಡುತ್ತ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡದ ಜೀವನ ನಡೆಸುತ್ತಿದ್ದಾರೆ. ವಿಶೇಷವಾಗಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಹೆಚ್ಚು ಸಮಯ ನಿಂತುಕೊಂಡೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಸಾಮಾನ್ಯವಾಗಿ ಕಾಲುನೋವು ಕಾಣಿಸಿಕೊಳ್ಳುತ್ತದೆ. ಸೇವಿಸುವ ಆಹಾರ, ಗಾಳಿ, ನೀರು ಎಲ್ಲವೂ ಕಲುಷಿತವಾಗಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವ ಅನಿವಾರ್ಯತೆಯಿದೆ. ಅದಕ್ಕಾಗಿಯಾದರೂ ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ ಎಂದು ವಿನಂತಿಸಿದರು.
ಡಾ.ಪ್ರಭು, ಡಾ.ಸುನೀಲ್, ಸಹಾಯಕರುಗಳಾದ ವತ್ಸಲ, ಅನುಸೂಯ ಇವರುಗಳು ವೇದಿಕೆಯಲ್ಲಿದ್ದರು.
ಬಾಲಾಜಿ ಪ್ರಾರ್ಥಿಸಿದರು, ನಿವೃತ್ತ ಡಿ.ವೈ.ಎಸ್ಪಿ. ಯೂಸೂಫ್ ಸ್ವಾಗತಿಸಿದರು. ನಿವೃತ್ತ ಡಿ.ವೈ.ಎಸ್ಪಿ. ಸೈಯದ್ ಇಸಾಖ್ ವಂದಿಸಿದರು.
ನಿವೃತ್ತ ಡಿ.ವೈ.ಎಸ್ಪಿ.ಗಳಾದ ಟಿ.ಹೆಚ್.ರಾಜಪ್ಪ, ಬಸವರಾಜ್ ಈ ಸಂದರ್ಭದಲ್ಲಿದ್ದರು.