ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 05 : ರಾಜ್ಯ ಸರ್ಕಾರ ಈ ಬಾರಿ ಮಂಡಿಸಲಿರುವ ಬಜೆಟ್‍ನಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಹಣ ಮೀಸಲಿಡುವಂತೆ ಅಲೆಮಾರಿ, ಅರೆಅಲೆಮಾರಿ ಎಸ್ಸಿ, ಎಸ್ಟಿ, ಬುಡಕಟ್ಟು ಮಹಾಸಭಾ ಅಧ್ಯಕ್ಷ ಕೆ.ಎಂ.ನಾಗರಾಜ್ ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಲೆಮಾರಿ, ಅರೆಅಲೆಮಾರಿಗಳು ಇಂದಿಗೂ ಚಿಂದಿ ಆಯುವ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ವಾಸಿಸಲು ಮನೆಯಿಲ್ಲ. ಟೆಂಟ್‍ಗಳನ್ನು ಹಾಕಿಕೊಂಡು ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ನಿಕೃಷ್ಠವಾಗಿ ಬದುಕುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್‍ನಲ್ಲಿ ನಾಲ್ಕು ನೂರು ಕೋಟಿ ರೂ.ಗಳನ್ನು ಮೀಸಲಿಡುವಂತೆ ಮನವಿ ಮಾಡಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ 2016-17 ರಲ್ಲಿ ರಾಜ್ಯ ಸರ್ಕಾರ ಬಜೆಟ್‍ನಲ್ಲಿ 130 ಕೋಟಿ ರೂ.ಗಳನ್ನು ಘೋಷಿಸಿದ್ದನ್ನು ಬಿಟ್ಟರೆ ಇಲ್ಲಿಯವರೆಗೂ ಅಲೆಮಾರಿ, ಅರೆಅಲೆಮಾರಿಗಳಿಗೆ ಹಣ ಮೀಸಲಿಟ್ಟಿಲ್ಲ. ರಾಜ್ಯದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಹಾಗಾಗಿ ಅಲೆಮಾರಿ, ಅರೆಅಲೆಮಾರಿಗಳ ಪುನಶ್ಚೇತನಕ್ಕಾಗಿ ಬಜೆಟ್‍ನಲ್ಲಿ ಪ್ರತ್ಯೇಕ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿದರು.
ಬುಡ್ಗ ಜಂಗಮ ಜನಾಂಗದ ಅಧ್ಯಕ್ಷ ವಸಂತಕುಮಾರ್, ಚನ್ನದಾಸ ಜನಾಂಗದ ನಾಗರಾಜ್, ಸುಡುಗಾಡು ಸಿದ್ದ ಸಮುದಾಯದ ಬಾಬು ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.


