in

ಕೋವಿಡ್ ಬಗ್ಗೆ ಉತ್ತರ ಕೇಳದೆ ಪಲಾಯನ ಮಾಡಿದ ಕಾಂಗ್ರೆಸ್: ಸಚಿವ ಡಾ.ಕೆ.ಸುಧಾಕರ್

suddione whatsapp group join

ಬೆಂಗಳೂರು: ವಿಧಾನಸಭೆಯ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕೋವಿಡ್ ಕುರಿತು ಸರ್ಕಾರದ ಉತ್ತರ ಕೇಳದೆ ಪಲಾಯನ ಮಾಡಿರುವ ಕಾಂಗ್ರೆಸ್ ನ ನಡೆ, ಜನರ ಆರೋಗ್ಯದ ಬಗ್ಗೆ ಪಕ್ಷಕ್ಕೆ ಇರುವ ಕಾಳಜಿ ಮತ್ತು ಬದ್ಧತೆಯನ್ನು ಬಟಾಬಯಲು ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಕೋವಿಡ್ ಕುರಿತು ದೀರ್ಘ ಚರ್ಚೆ ನಡೆದಿತ್ತು. ಶುಕ್ರವಾರ ಸಚಿವ ಡಾ.ಕೆ.ಸುಧಾಕರ್ ಅವರು ಉತ್ತರ ನೀಡಲು ಮುಂದಾದಾಗ ಕಾಂಗ್ರೆಸ್ ಸದಸ್ಯರು ಉತ್ತರವನ್ನು ಕೇಳದೆ ಸಭಾತ್ಯಾಗ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಡಾ.ಕೆ.ಸುಧಾಕರ್, ಕೋವಿಡ್ ನಿರ್ವಹಣೆ ಕುರಿತು ಸದನದಲ್ಲಿ 5 ಗಂಟೆ ರಾಜಕೀಯ ಭಾಷಣ ಮಾಡಿದ ವಿಪಕ್ಷಗಳಿಗೆ ಇಂದು ಸರ್ಕಾರದ ಉತ್ತರ ಕೇಳುವ ಆಸಕ್ತಿಯೂ ಇಲ್ಲ, ಧೈರ್ಯವೂ ಇಲ್ಲ. ಸತ್ಯವನ್ನು ಕೇಳದೆ ಅವರು ಪಲಾಯನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸದಸ್ಯರು, ತಾವು ಮಾಡಿರುವ ಎಲ್ಲ ಆರೋಪ ಸತ್ಯಕ್ಕೆ ದೂರವಾದುದು, ರಾಜಕೀಯ ಪ್ರೇರಿತ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ನಡೆ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕೋವಿಡ್ ಸಾವಿನಲ್ಲೂ ರಾಜಕೀಯ ಮಾಡಲು ಹೊರಟಿರುವ ಕಾಂಗ್ರೆಸ್ ನ ಕೀಳು ಸಂಸ್ಕೃತಿಯನ್ನು ರಾಜ್ಯದ ಜನರು ಗಮನಿಸಿದ್ದಾರೆ. ಸಾವಿನ ಮನೆಯಲ್ಲೂ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ ನ ನೀಚ ರಾಜಕೀಯವನ್ನು ಜನರು ಕ್ಷಮಿಸುವುದಿಲ್ಲ ಎಂದು ಸಚಿವರು ಆಕ್ರೋಶ ಹೊರಹಾಕಿದ್ದಾರೆ.

“ನಿಂದಿಸುವನೊಬ್ಬ, ಸ್ತುತಿಸುವನೊಬ್ಬ,
ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ.
ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ,
ಕೂಡಲಸಂಗಮದೇವಾ, ನಿಮ್ಮ ಶರಣರು ನಿತ್ಯಮುಕ್ತರು” ಎಂದು ಜಗದ್ಗುರು ಬಸವಣ್ಣನವರು ಹೇಳಿದ್ದಾರೆ. ಅದೇ ರೀತಿ ಪ್ರತಿಪಕ್ಷಗಳು ನಿಂದನೆ ಮಾಡುವುದು ಹೊಸ ವಿಚಾರವಲ್ಲ. ಆದರೆ ಕಾಂಗ್ರೆಸ್ ನವರಂತೆ ರಾಜಕೀಯ ಭಾಷಣ ಮಾಡಬಾರದು.ಇದು ಶತಮಾನದ ಅತೀ ದೊಡ್ಡ ಸಾಂಕ್ರಾಮಿಕವಾಗಿದ್ದು, ಸ್ವತಂತ್ರ ಭಾರತ ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲಾಗಿದೆ. ಸ್ವಾತಂತ್ರ್ಯ ಬಂದ ನಂತರ ನಡೆದ ಎಲ್ಲ ಯುದ್ಧಗಳಲ್ಲಿ ನಾವು ಎಷ್ಟು ಜನರನ್ನು ಕಳೆದುಕೊಂಡಿದ್ದೆವೆಯೋ ಪ್ರಾಯಶಃ ಅದಕ್ಕಿಂತ ಹೆಚ್ಚು ಜನರನ್ನು ಈ ಸಾಂಕ್ರಾಮಿಕದಲ್ಲಿ ಕಳೆದುಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ವಿಪಕ್ಷಗಳಿಂದ ಜನತೆ ನಿರೀಕ್ಷಿಸುವುದು ಆಪಾದನೆ ಅಲ್ಲ, ಸಂವೇದನೆ ಎಂಬುದನ್ನು ಅರಿಯಬೇಕು. ಸಂಘರ್ಷ ಅಲ್ಲ ಸಹಕಾರ, ಪ್ರತಿಷ್ಠೆ ಅಲ್ಲ ಪ್ರಾಮಾಣಿಕತೆ, ರಾಜಕಾರಣ ಅಲ್ಲ ಅಂತಃಕರಣ ಎಂಬುದನ್ನು ತಿಳಿಯಬೇಕು ಎಂದು ಸಚಿವರು ಹೇಳಿದ್ದಾರೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಬೇರೆ ಬೇರೆ ಇರಬಹುದು. ಆದರೆ ಆಡಳಿತ ಹಾಗೂ ವಿರೋಧ ಪಕ್ಷಗಳ ಗುರಿ ಒಂದೇ ಆಗಿರಬೇಕು. ನಮ್ಮ ದೃಷ್ಟಿ ಸದಾ ಜನಹಿತದ ಕಡೆ ಇದ್ದು, ಸದಾ ಜನ ಕಲ್ಯಾಣದ ಗುರಿ ಇರಬೇಕು. ಆದರೆ ಇಂದು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರದ ದೃಷ್ಟಿ ಜನಹಿತದ ಮೇಲಿದ್ದರೆ, ವಿಪಕ್ಷಗಳ ದೃಷ್ಟಿ ಅಧಿಕಾರದ ಕುರ್ಚಿಯ ಮೇಲಿದೆ. ಸರ್ಕಾರದ ಕಾರ್ಯಗಳು ಜನರ ಜೀವ ಉಳಿಸುವ, ಜನಕಲ್ಯಾಣದ ಕಡೆಗೆ ಇದ್ದರೆ, ವಿಪಕ್ಷಗಳ ಚಟುವಟಿಕೆಗಳು ಸಾವಿನ ಮನೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಡೆ ಇದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರೆವಣಿಗೆ: ರಸ್ತೆ  ಸಂಚಾರ ಮಾರ್ಗ ಬದಲಾವಣೆ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

ಕೊರೊನಾ ಸಾವಿನ ಅಂಕಿ ಅಂಶ ಮುಚ್ಚಿಟ್ಟಿಲ್ಲ : ಸಚಿವ ಸುಧಾಕರ್