ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ವಿಚಾರ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಸಿಎಂಗೆ ಪತ್ರ ಬರೆದ ಬೆನ್ನಲ್ಲೇ, ವಿಧಾನಸೌಧದಲ್ಲಿ ಹಿರಿಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆದಿದೆ. ಸಿ ಸಿ ಪಾಟೀಲ್, ಬೈರತಿ ಬಸವರಾಜ್, ಶಿವರಾಂ ಹೆಬ್ಬಾರ್, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತಿಯಿದ್ದರು. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಜಂಟಿ ಸುದ್ದಿಗೋಷ್ಟಿಯಿಂದ ದೂರ ಉಳಿದಿದ್ದರು. ಈ ಸುದ್ದಿಗೋಷ್ಟಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದ್ದು, ಪಠ್ಯ ಪುಸ್ತಕ ಪರಿಷ್ಕರಣೆ ಇಷ್ಟೊಂದು ಚರ್ಚೆ, ವಾದ-ವಿವಾದ, ಇತಿಹಾಸದಲ್ಲಿ ಯಾವತ್ತೂ ಆಗಿರಲಿಲ್ಲ. ಕೆಲವು ಸಾಹಿತಿಗಳಿಗೆ ಹಿಡನ್ ಅಜೆಂಡಾ ಇರುತ್ತೆ ಎಂದಿದ್ದಾರೆ.
ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಈ ಹಿಂದೆ ಪಠ್ಯಪರಿಷ್ಕರಣೆ ಆಗಿತ್ತು. ಅಲ್ಪಸಂಖ್ಯಾತರ ಓಲೈಕೆಗಾಗಿ ಪರಿಷ್ಕರಣೆ ಮಾಡಿದ್ದರು. ಹಿಂದೂ ಅನ್ನೋ ಪದಗಳನ್ನ ತೆಗೆದು ಹಾಕಿದ್ದಾರೆ. ರಾಮ, ಶಿವನ ಹೆಸರು ತೆಗದುಹಾಕಿದ್ದರು. ಮೈಸೂರು ರಾಜ ಒಡೆಯರನ್ನು ಸಿದ್ದರಾಮಯ್ಯ ಕಡೆಗಣನೆ ಮಾಡಲಾಗಿತ್ತು.
ಟಿಪ್ಪು ಕಂಡರೆ ಸಿದ್ದರಾಮಯ್ಯರವರಿಗೆ ಅದೇನು ಪ್ರೀತಿನೋ. ಟಿಪ್ಪು ಅಂದ್ರೆ ಸಾಕು ಸಿದ್ದರಾಮಯ್ಯಗೆ ಮೈಮೇಲೆ ಬಂದಾಂಗೆ ಆಡ್ತಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ೬ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕ್ರೈಸ್ತ,ಮುಸ್ಲಿಂ ಆರಾಧನಾ ಸ್ಥಳಗಳನ್ನ ಉಳಿಸಿಕೊಂಡು, ದೇವಾಲಯದ ಚಿತ್ರಗಳನ್ನ ಕೈ ಬಿಟ್ಟಿದ್ದರು. ಹಿಂದೂಗಳ ಕಡೆಗಣನೆ ಮಾಡಿ ಮುಸಲ್ಮಾನರ ಓಲೈಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಶಿವಾಜಿಯನ್ನ ಕಡೆಗಣಿಸಲಾಗಿತ್ತು. ರಜಪೂತರ ಗುಣ ಧರ್ಮಗಳನ್ನ
ಕಡೆಗಣಿಸಿದ್ರು. ಮೊಘಲರ ಇತಿಹಾಸಕ್ಕೆ ಹೆಚ್ಚು ಗಮನ ಕೊಟ್ಟು ರಜಪೂತರ ಬಗ್ಗೆ ಇದ್ದ ವಿವರಗಳನ್ನ ಬರಗೂರು ಸಮಿತಿ ಕಡಿತಗೊಳಿಸಿತ್ತು.
ಡಿ ಕೆ ಶಿವಕುಮಾರ್ ಪುಸ್ತಕ ಹರಿದುಹಾಕಿದ್ದರು. ಕೆಂಪೇಗೌಡ ಇತಿಹಾಸ ಇರುವ ಪುಸ್ತಕ ಹರಿದು ಹಾಕಿದ್ದರು. ನಾವು ಕೆಂಪೇಗೌಡ ಇತಿಹಾಸ ಹಾಕಿದ್ದೇವೆ. ಅದನ್ನ ಹರಿದು ಹಾಕಿದ್ದು ಎಷ್ಟು ಸರಿ ಎಂದು ಡಿ ಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ನಾರಾಯಣ ಗುರು, ಭಗತ್ ಸಿಂಗ್ ಪಠ್ಯವನ್ನ ಕೈಬಿಟ್ಟಿಲ್ಲ. ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ. ನಮ್ಮ ದೇಶದ ಸಂಸ್ಕೃತಿಯನ್ನ ಪಠ್ಯಪುಸ್ತಕದಲ್ಲಿ ಸೇರಿಸಿದ್ದೇವೆ ಎಂದು ಹೇಳಿದ್ದಾರೆ.