ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ಸಕಾಲದಲ್ಲಿ ಒದಗಿಸಿ: ಜೆ. ಮಂಜುನಾಥ್

suddionenews
1 Min Read

ಬೆಂಗಳೂರು ನಗರ: ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ಸಕಾಲದಲ್ಲಿ ಒದಗಿಸಿದಾಗ ಮಾತ್ರಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಹಾಗಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಕಗ್ಗಲಿಪುರ ಗ್ರಾಮದ ಹುಸ್ಕೂರು ಗ್ರಾಮಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ನಿರ್ದೇಶನದಂತೆ ಕೋವಿಡ್ ಸಂಬಂಧ ಸ್ಥಗಿತಗೊಂಡಿದ್ದ ಕಾರ್ಯಕ್ರಮವನ್ನು ಮುಂದುವರಿಸಲು ಸೂಚಿಸಲಾಗಿದೆ ಹಾಗಾಗಿ ಕಾರ್ಯಕ್ರಮವನ್ನು ಪುನಾರಂಭ ಮಾಡಲಾಗಿದೆ ಎಂದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು ಎಂದರು.

ಪಿಎಂ ಕಿಸಾನ್ ಯೋಜನೆಯಡಿ 10 ಸಾವಿರ ಧನಸಹಾಯವನ್ನು ನೀಡಲಾಗುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳಲು ರೈತರಿಗೆ ನೋಂದಣಿಮಾಡಿಸಿಕೊಳ್ಳುವಂತೆ ಅರಿವು ಮೂಡಿಸಿ ಎಂದರು.
ರೈತರು ಫ್ರೂಟ್ಸ್ ಪೊರ್ಟಲ್ ನಲ್ಲಿ ಬ್ಯಾಂಕ್ ವಿವರಗಳನ್ನು ಜೋಡಣೆ ಮಾಡಿಸಿಕೊಳ್ಳಿ. ಫ್ರೂಟ್ಸ್ ಪೋರ್ಟಲ್ ನಲ್ಲಿ ಆನೇಕಲ್ ತಾಲ್ಲೂಕಿನ ಶೇ.46 ರಷ್ಟು ರೈತರು ನಮೂದಿಸಿಕೊಂಡಿದ್ದು, ಉಳಿದ ರೈತರ ವಿವರ ಕೂಡ ಶೀಘ್ರವಾಗಿ ನಮೂದಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು .

ಇದೇ ಸಂದರ್ಭದಲ್ಲಿ 6 ಜನ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಯೋಜನೆ, 4 ಜನ ಫಲಾನುಭವಿಗಳಿಗೆ ನಿರ್ಗತಿಕ ವಿಧವಾ ವೇತನ ಮತ್ತು ಇಂದಿರಾ ಗಾಂಧಿ ವೃದ್ಧಾಪ್ಯ ವೇತನ ಹಾಗೂ ಮನಸ್ವಿನಿ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು‌.

ಕಾರ್ಯಕ್ರಮದಲ್ಲಿ ಆನೇಕಲ್ ತಾಲೂಕಿನ ತಹಶೀಲ್ದಾರರಾದ ದಿನೇಶ್ ಪಿ., ಮುಖ್ಯ ಅಭಿಯಂತರರಾದ ಲಕ್ಷ್ಮೀನಾರಾಯಣ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಾಪಮ್ಮ, ಉಪಾಧ್ಯಕ್ಷರಾದ ಮುನಿರತ್ನಮ್ಮ.ಎನ್, ಸದಸ್ಯರುಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *