in

ಪೌರಕಾರ್ಮಿಕರ ಖಾಯಂ ಮಾಡಲು ಸರ್ಕಾರಕ್ಕೆ ಶಿಫಾರಸ್ಸು : ಎಂ.ಶಿವಣ್ಣ

suddione whatsapp group join

ಚಿತ್ರದುರ್ಗ, (ಏ.28) : ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ, ನೇರಪಾವತಿ ಹಾಗೂ ಕ್ಷೇಮಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಖಾಯಂ ಮಾಡಲು ಸರ್ಕಾರಕ್ಕೆ ಆಯೋಗದಿಂದ ಶಿಫಾರಸ್ಸು ಮಾಡಲಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪೌರಕಾರ್ಮಿಕರು ಹಾಗೂ ಗುರುತಿಸಲ್ಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪೌರಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಪರಿಗಣಿಸುವ ಬೇಡಿಕೆಗೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಶೇ.60ರಷ್ಟು ಪೌರಕಾರ್ಮಿಕರಿಗೆ ಅನುಕೂಲವಾಗಲಿದೆ

ಪೌರಕಾರ್ಮಿಕರ ಸಮಸ್ಯೆಗಳ ಅರಿತ ಮುಖ್ಯಮಂತ್ರಿಗಳು ಪೌರಕಾರ್ಮಿಕರಿಗಾಗಿ ರೂ.2000/-ಗಳ ಸಂಕಷ್ಟ ಭತ್ಯೆಯನ್ನು ಮಂಜೂರು ಮಾಡಿದ್ದಾರೆ. ಆಯೋಗವು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಕ್ರಮಗಳ ಕುರಿತು ಸರ್ಕಾರಕ್ಕೆ 22 ಅಂಶಗಳ ಸುಧಾರಣಾ ವರದಿಯನ್ನು ನೀಡಿದೆ. ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ, ಆಸ್ಪತ್ರೆ, ಬಸ್‍ನಿಲ್ದಾಣ, ರೆಸ್ಟೋರೆಂಟ್, ಲಾಡ್ಜ್ ಸೇರಿದಂತೆ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರ ಮಾಹಿತಿ ಪಡೆಯಲು ರಾಜ್ಯಾದ್ಯಂತ ಸರ್ವೇ ಕಾರ್ಯ ಕೈಗೊಳ್ಳಲಾಗುವುದು. ನ್ಯಾಷನಲ್ ಲಾ ಕಾಲೇಜು ವತಿಯಿಂದ ಮೈಸೂರು, ಕೊಪ್ಪಳ ಹಾಗೂ ಬಾಗಲಕೋಟೆಯಲ್ಲಿ ಪ್ರಾಯೋಗಿಕವಾಗಿ ಸರ್ವೇ ಕಾರ್ಯಕೈಗೊಳ್ಳಲಾಗಿದೆ.

ಸರ್ವೇ ಕಾರ್ಯದ ನಂತರ ಸ್ವಚ್ಛತಾ ಕಾರ್ಮಿಕರ ನಿಖರವಾದ ಅಂಕಿಅಂಶಗಳು ಲಭ್ಯವಾಗಲಿವೆ. ಅಂದಾಜು 5 ಲಕ್ಷ ಸ್ವಚ್ಛತಾ ಕಾರ್ಮಿಕರು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಗದಿಂದ 130 ಮಂದಿ ಪೌರಕಾರ್ಮಿಕರನ್ನು ಗುರುತಿಸಿ ರೂ.50 ಸಾವಿರ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಗಿದೆ ಎಂದರು.

ಏಕರೂಪದ ವಸ್ತ್ರ ಹಾಗೂ ಪರಿಕರ: ರಾಜ್ಯಾದ್ಯಂತ ಪೌರಕಾರ್ಮಿಕರಿಗೆ ಏಕರೂಪದ ವಸ್ತ್ರ ಹಾಗೂ ಗುಣಮಟ್ಟದ ಸುರಕ್ಷತಾ ಪರಿಕರಗಳನ್ನು ನೀಡಲು ಯೋಜನೆ ಜಾರಿ ಮಾಡಲಾಗುವುದು ಎಂದು ಹೇಳಿದ ಅವರು, ಪೌರಕಾರ್ಮಿಕರಿಗೆ ಉಪಹಾರಕ್ಕಾಗಿ ಪ್ರತಿ ವ್ಯಕ್ತಿಗೆ ರೂ.35/-ಗಳನ್ನು ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ವಿಶ್ರಾಂತಿ ಗೃಹ ನಿರ್ಮಾಣ: ಪೌರಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಡ್ಡಾಯವಾಗಿ ವಿಶ್ರಾಂತಿ ಗೃಹ ನಿರ್ಮಾಣ ಮಾಡುವಂತೆ ಸ್ಥಳೀಯ ಆಡಳಿತಗಳಿಗೆ ನಿರ್ದೇಶನ ನೀಡಲಾಗಿದೆ. ಚಿತ್ರದುರ್ಗ ನಗರದಲ್ಲಿ ನಾಲ್ಕು ಕಡೆ ಮಸ್ಟರಿಂಗ್ ಸ್ಥಳಗಳಿದ್ದು, ಮಸ್ಟರಿಂಗ್ ಸ್ಥಳಗಳಲ್ಲಿಯೇ ವಿಶ್ರಾಂತಿ ಗೃಹ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ಆಯೋಜನೆ: ಸಫಾಯಿ ಕರ್ಮಚಾರಿಗಳಿಗೆ ವಿವಿಧ ಇಲಾಖೆಗಳಡಿ ದೊರೆಯುವ ಸೌಲಭ್ಯ ಮತ್ತು ಸವಲತ್ತುಗಳ ಮಾಹಿತಿ ನೀಡಲು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ಪೌರಕಾರ್ಮಿಕರ ಆರೋಗ್ಯ ರಕ್ಷಣೆ ಕುರಿತಾಗಿ ನಾಟಕಗಳ ಮೂಲಕ ಅರಿವು ಮೂಡಿಸಲು ಕ್ರಮವಹಿಸಲಾಗುವುದು ಎಂದರು.

ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ: ಸುಪ್ರಿಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರವು ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದೆ. 2013ರ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ ಉಲ್ಲಂಘನೆಯಡಿ ಪ್ರಕರಣಗಳನ್ನು ದಾಖಲಿಸಿ, ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸಲಾಗುತ್ತಿದೆ. ರಾಜ್ಯದಲ್ಲಿ 5080 ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗುರುತಿಸಲ್ಪಟ್ಟಿದ್ದಾರೆ.

ಮನೆ, ಉದ್ಯೋಗ, ಕೌಶಲ್ಯ ತರಬೇತಿ ಸೇರಿದಂತೆ ಇವರ ಪುನರ್ವಸತಿಗಾಗಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ತಡೆಗಟ್ಟಲು ರೂ.35 ಲಕ್ಷ ವೆಚ್ಚದಲ್ಲಿ ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಯಂತ್ರೋಪಕರಣಗಳನ್ನು ಬಳಸಲಾಗುವುದು ಎಂದರು.

ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ, ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆರ್ಥಿಕಾಭಿವೃದ್ಧಿ ನಿಗಮದಿಂದ ರೂ.70 ಕೋಟಿ ಸಾಲಸೌಲಭ್ಯ ತರಲಾಗಿದೆ. ಈ ಹಣದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾರ್ಯನಿರ್ವಹಿಸುತ್ತಿರುವವರಿಗೆ ಸೌಲಭ್ಯ ನೀಡಲಾಗುವುದು. ನಿಗಮದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡಲಾಗಿದೆ. ಸಫಾಯಿ ಕರ್ಮಚಾರಿಗಳು ಸಮಾಜದ ಕಟ್ಟಕಡೆಯ ಸಮುದಾಯವಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಆಯೋಗ ಮತ್ತು ನಿಗಮವು ಶ್ರಮಿಸುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪಿ.ಮಮತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‍ರೆಡ್ಡಿ, ನಗರಸಭೆ ಆಯುಕ್ತರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಸಾರಿಗೆ ನೌಕರರ ಹೋರಾಟ ಮತ್ತೆ ಶುರುವಾಗುತ್ತಾ..? ಕೋಡಿಹಳ್ಳಿ ಏನಂದ್ರು..?

ಗೃಹ ಭಾಗ್ಯ ಯೋಜನೆಯಡಿ ಸಫಾಯಿ ಕರ್ಮಚಾರಿಗಳಿಗೆ ಮನೆ : ಎಂ.ಶಿವಣ್ಣ