ಕೊಪ್ಪಳ: ಅದೆಷ್ಟೋ ಬಾರಿ ಇಂಥ ಸುದ್ದಿಯನ್ನ ಕೇಳಿದ್ದೇವೆ. ಪೊಲೀಸರ ಸೋಗಿನಲ್ಲಿ ಬಂದು ಹಣ ಕಸಿದ ಸುದ್ದಿ, ಪೊಲೀಸರೆಂದು ಹೇಳಿಕೊಂಡು ಮೋಸ ಮಾಡಿದ ವಿಚಾರ. ಖದೀಮರು ಪೊಲೀಸರ ಹೆಸರೇಳಿಕೊಂಡೆ ಕಳ್ಳತನದ ಹಾದಿಯನ್ನ ಸುಲಭ ಮಾಡಿಕೊಂಡಿದ್ದಾರೆ. ಇದೀಗ ಅಂಥದ್ದೇ ಸುದ್ದಿಯೊಂದು ವರದಿಯಾಗಿದೆ.

ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಸಂಜಯ ಕೊಪ್ಪದ ಹಾಗೂ ಸಂಜು ಛಲವಾದಿ ಬಂಧಿತ ಆರೋಪಿಗಳು.
ಕೊಪ್ಪಳದ ಹೊರ ವಲಯದಲ್ಲಿ ಪೊಲೀಸರಂತೆ ವಾಹನಗಳನ್ನ ತಡೆದು ತಪಾಸಣೆ ಮಾಡುತ್ತಿದ್ದರು. ಸಿಕ್ಕ ಸಿಕ್ಕವರ ಬಳಿ ಹಣ ವಸೂಲಿ ಮಾಡ್ತಾ ಇದ್ರು. ಆಗಸ್ಟ್ 15 ರಂದು ಭೀಮೇಶ್ ಎಂಬುವವರ ಗಾಡಿಯನ್ನ ತಪಾಸಣೆ ನೆಪದಲ್ಲಿ ತಡೆದಿದ್ದಾರೆ. ಅದು ಇದು ಹೇಳಿ ಒಂದು ಸಾವಿರ ಹಣ ವಸೂಲಿ ಮಾಡಿದ್ದಾರೆ. ಅಷ್ಟಕ್ಕೆ ಬಿಡದ ಈ ಇಬ್ಬರು ಆತನಿಂದ ಎಟಿಎಂ ಕಾರ್ಡ್, ಪಿನ್ ನಂಬರ್ ತೆಗೆದುಕೊಂಡು 1,500 ಹಣ ಡ್ರಾ ಮಾಡಿಕೊಂಡಿದ್ದಾರೆ.
ಇದಾದ ಬಳಿಕ ಭೀಮೇಶ್ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ತನಿಖೆ ಬಳಿಕ ಇವರಿಬ್ಬರ ಮೋಸ ಬಯಲಾಗಿದೆ. ಸದ್ಯ ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಈ ಇಬ್ಬರನ್ನ ಬಂಧಿಸಿದ್ದಾರೆ.

