ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆ ಪೆಟ್ರೋಲ್ ಬಂಕ್ ಮಾಲೀಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಪೆಟ್ರೋಲ್ ಪೂರೈಕೆಯಲ್ಲಿನ ವೈಫಲ್ಯದಿಂದ ತೊಂದರೆಗೆ ಸಿಲುಕಿರುವ ಮಾಲೀಕರು ಪೆಟ್ರೋಲ್ ಖರೀದಿ ನಿಲ್ಲಿಸಿ ಮೇ 31ಕ್ಕೆ ಪ್ರತಿಭಟನೆ ನಡೆಸಲಿದ್ದಾರೆ.
ಈ ಸಂಬಂಧ ಆಕ್ರೋಶ ಹೊರ ಹಾಕಿರುವ ಪೆಟ್ರೋಲ್ ಬಂಕ್ ಮಾಲೀಕರು, 2017ರಿಂದ ಪೆಟ್ರೋಲ್ ಡಿಸೇಲ್ ಮೇಲೆ 1 ರೂಪಾಯಿ ಕಮಿಷನ್ ನೀಡಬೇಕೆಂದು ಮನವಿ ಮಾಡಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೂ ಒಕ್ಕೂಟದ ಬೇಡಿಕೆ ಈಡೇರಿಸಿಲ್ಲ. ಅಂದಿನ ಪೆಟ್ರೋಲ್ ಡಿಸೇಲ್ ಬೆಲೆಯನ್ನು ಹೋಲಿಕೆ ಮಾಡಿದರೆ ಇಂದು ದ್ವಿಗುಣವಾಗಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹಾಗೂ ರಾಜ್ಯದ ಮುಖ್ಯಮಂತ್ರಿಗೂ ಮನವಿ ಮಾಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಸರ್ಕಾರ ಒಮ್ಮೆಲೆ 9 ರೂಪಾಯಿ ಕಡಿಮೆ ಮಾಡಿತ್ತು. ನಾವೂ ಹಿಂದಿನ ದಿನ ದಾಸ್ತಾನು ಮಾಡಿದ್ದ ಪೆಟ್ರೋಲ್ ಅನ್ನು ಮರುದಿನ ಕಡಿಮೆ ಬೆಲೆಯಲ್ಲಿಯೇ ಮಾರಬೇಕಾಯಿತು. ಇದರಿಂದ 3 ರಿಂದ 30 ಲಕ್ಷ ನಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಹಲವು ಬೇಡಿಕೆಗಳನ್ನಿಟ್ಟುಕೊಂಡು ತೈಲ ಖರೀದಿ ನಿಲ್ಲಿಸಿ ನಾಳೆ ಪೆಟ್ರೋಲ್ ಬಂದ್ ಮಾಡಿ, ಮುಷ್ಕರ ನಡೆಸಲಿದ್ದಾರೆ.