ಚಿತ್ರದುರ್ಗ. ಜ.24: ಲೋಕಾಯುಕ್ತ ಸಂಸ್ಥೆಯ ಕಾರ್ಯ ಕ್ಷಮತೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದ್ದು, ರಾಜ್ಯದಲ್ಲಿ ಒಟ್ಟು ಸುಮಾರು 29 ಸಾವಿರ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಗುರುವಾರದಂದು ನಡೆಸಿದ ವಿಚಾರಣೆ ಸಂದರ್ಭದಲ್ಲಿ ಲೋಕಾಯುಕ್ತ ಸಂಸ್ಥೆಯ ಕಾರ್ಯವ್ಯಾಪ್ತಿಗೆ ಒಳಪಡುವ ಜಿಲ್ಲೆಯ 53 ವಿವಿಧ ಬಗೆಯ ಪ್ರಕರಣಗಳನ್ನು ದೂರುದಾರರು ಹಾಗೂ ಎದುರುದಾರರ ಸಮಕ್ಷಮದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಲೋಕಾಯುಕ್ತ ಸಂಸ್ಥೆಯಲ್ಲಿ ಇಬ್ಬರು ಉಪಲೋಕಾಯುಕ್ತರಲ್ಲಿ ಸೇರಿದಂತೆ ಸುಮಾರು 21 ಸಾವಿರ ಪ್ರಕರಣಗಳು ಬಾಕಿ ಇವೆ, ಲೋಕಾಯುಕ್ತರಲ್ಲಿ 08 ಸಾವಿರ ಪ್ರಕರಣಗಳು ಇವೆ. ಜನರಲ್ಲಿ ಲೋಕಾಯುಕ್ತ ಸಂಸ್ಥೆಯ ಬಗ್ಗೆ ವಿಶ್ವಾಸ ಮೂಡಿದ್ದು, ಅಹವಾಲು ಕೋರಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಸಂಸ್ಥೆಯ ಕಾರ್ಯ ವ್ಯಾಪ್ತಿಗೆ ಒಳಪಟ್ಟಂತೆ ಚಿತ್ರದುರ್ಗ ಜಿಲ್ಲೆಯ ಸುಮಾರು 400 ದೂರುಗಳು ಇದ್ದವು, ಈ ಪೈಕಿ ನೋಟಿಸ್ ವಿತರಣೆ ಮಾಡಿ, ಪ್ರಾಥಮಿಕ ವರದಿಯ ನಂತರ ಸ್ಥಳದಲ್ಲಿಯೇ ತೀರ್ಮಾನ ಮಾಡಲು ಅವಕಾಶವಿರುವ 73 ಪ್ರಕರಣಗಳನ್ನು ಆರಿಸಿಕೊಂಡು ವಿಚಾರಣೆ ಮಾಡಲಾಗಿ, 53 ಪ್ರಕರಣಗಳು ಸ್ಥಳದಲ್ಲಿಯೇ ತೀರ್ಮಾನವಾಗಿದ್ದು, ಉಳಿದ ಪ್ರಕರಣಗಳನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಲೋಕಾಯುಕ್ತದಲ್ಲಿಯೇ ಮುಂದುವರೆಸಿ ಕಾನೂನು ಪ್ರಕಾರವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜ.22 ರಿಂದ 24 ರವರೆಗೆ ಮೂರು ದಿನಗಳ ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮದಲ್ಲಿ ಜ.22ರಂದು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ್ದು, ಲೋಕಾಯುಕ್ತ ಸಂಸ್ಥೆಯ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿರುವುದರಿಂದಾಗಿ ಜ.23 ರಂದು ಸಹ ಕುಂದುಕೊರತೆ, ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದೆ. ಇದರಿಂದ ಲೋಕಾಯುಕ್ತ ಸಂಸ್ಥೆಗೆ ಭರಪೂರವಾಗಿ ದೂರುಗಳು ಸ್ವೀಕರವಾಗಿದ್ದು, ಸಾರ್ವಜನಿಕರ ಕುಂದುಕೊರತೆಗಳಿಗೆ ಸಂಬಂಧಪಟ್ಟಂತೆ ಒಟ್ಟು 175 ದೂರುಗಳನ್ನು ಸ್ವೀಕಾರ ಮಾಡಿದ್ದು, ಈ ದೂರುಗಳಲ್ಲಿ 65 ಪ್ರಕರಣಗಳು ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಗೆ ಒಳಪಡುವ ಪ್ರಕರಣಗಳಾಗಿದ್ದು, ಇನ್ನುಳಿದ ದೂರುಗಳನ್ನು, ಸಮಸ್ಯೆಗಳನ್ನು ಪರಿಹಾರ ಮಾಡುವ ಸಲುವಾಗಿ ಕಾನೂನಿನ ಸಲಹೆ ನೀಡಲಾಗಿದೆ ಎಂದು ತಿಳಿಸಿದ ಅವರು, ರೂ.03 ಲಕ್ಷಕ್ಕಿಂತ ಆದಾಯ ಕಡಿಮೆ ಇರುವ ವ್ಯಕ್ತಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ಸಲಹೆ, ವಕೀಲರ ನೇಮಕ, ಕಾನೂನಿನ ನೆರವು ನೀಡುವಂತೆ ಸೂಕ್ತ ಮಾರ್ಗದರ್ಶನಕ್ಕಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ. ಇನ್ನೂ ರಿಜಿಸ್ಟರ್ ಮಾಡಿಕೊಳ್ಳಲು ಆಗದೇ ಇರುವ ಪ್ರಕರಣಗಳನ್ನು, (ಸಮಸ್ಯೆ ಇನ್ನೂ ಉದ್ಭವ ಆಗದೇ ಇರುವ ಪ್ರಕರಣಗಳು) ಸಂಬಂಧಪಟ್ಟ ಅಧಿಕಾರಿಗಳಿಗೆ ಜನರಿಂದ ಸ್ವೀಕರಿಸಿರುವ ಅರ್ಜಿಗಳ ಪ್ರತಿಗಳನ್ನು ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ಸಲ್ಲಿಕೆಯಾದ ದೂರು ಅರ್ಜಿಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಸಭೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಹೇಳಿದರು.
ಲೋಕಾಯುಕ್ತ ಸಂಸ್ಥೆಗೆ ಇನ್ನಷ್ಟು ಮಾನವ ಸಂಪನ್ಮೂಲದ ಅಗತ್ಯವಿದ್ದು, ಸಂಸ್ಥೆಯಲ್ಲಿ ಶೇ. 30 ರಷ್ಟು ಹುದ್ದೆಗಳು ಖಾಲಿ ಇವೆ. ಜನಸಂಖ್ಯೆಗೆ ಅನುಗುಣವಾಗಿ, ಇನ್ನಷ್ಟು ಹೆಚ್ಚಿನ ಸಿಬ್ಬಂದಿ ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಸಾರ್ವಜನಿಕರ ಭೇಟಿ ಜೊತೆಗೆ ವಕೀಲರ ಸಂಘಕ್ಕೆ ಭೇಟಿ ನೀಡಿ, ವಕೀಲರೊಂದಿಗೆ ಸಂವಾದ ಕಾರ್ಯಕ್ರಮ, ಜಿಲ್ಲೆಯ ಎಲ್ಲ ನ್ಯಾಯಾಧೀಶರೊಂದಿಗೆ ಸಂವಾದ ನಡೆಸಿ ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆ ಹಾಗೂ ಲೋಕಾಯುಕ್ತ ಕಾಯ್ದೆ ಕುರಿತು ಅರಿವು ಮೂಡಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಜನರನ್ನು ತಲುಪಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ಲೋಕಾಯುಕ್ತ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕುಂದುಕೊರತೆ, ಅಹವಾಲು ಸ್ವೀಕಾರ, ಪ್ರಕರಣಗಳ ವಿಚಾರಣೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಂದ ಕುಂದುಕೊರತೆ, ಅಹವಾಲು ಸ್ವೀಕಾರದಲ್ಲಿ ನಗರಸಭೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯತ್ ಇಒ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ ಅವರು, ಚಿತ್ರದುರ್ಗ ನಗರದ ವಿವಿಧೆಡೆ ಪರಿಶೀಲನೆ ಮಾಡಲಾಗಿದ್ದು, ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಸಮಸ್ಯೆಗಳು ಕಂಡುಬಂದಾಗ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ಸಮಸ್ಯೆ ಪರಿಹಾರ ಆಗುವವರೆಗೂ ಪ್ರಕರಣ ಚಾಲ್ತಿಯಲ್ಲಿರಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿ, ನೌಕರರಿಂದ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅರ್ಜಿ ನಮೂನೆ-1 ಮತ್ತು ನಮೂನೆ-2ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಇದರಲ್ಲಿ ದುರುದ್ದೇಶದ ಕಾರಣ ಇರಬಾರದು. ಇದರಿಂದ ತ್ವರಿತವಾಗಿ ಪ್ರಕರಣ ಇತ್ಯರ್ಥಪಡಿಸಬಹುದಾಗಿದೆ ಎಂದರು.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷಯ ಪ್ರಮಾಣ ಕಡಿಮೆ ಇದೆ. ಭ್ರಷ್ಟಾಚಾರದ ವಿಧಾನ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಜೊತೆ ಜೊತೆಗೆ ಬದಲಾಗುತ್ತಿದೆ. ಹೀಗಾಗಿ ತಾಂತ್ರಿಕವಾಗಿ ತನಿಖೆ ಸಮರ್ಪಕವಾಗಿ ನಡೆಸಲು ಆಗುತ್ತಿಲ್ಲ. ಹೀಗಾಗಿ ಈ ಕುರಿತು ಹೆಚ್ಚಿನ ಸವಲತ್ತು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್, ಜಿಲ್ಲಾಧಿಕಾರಿ ವೆಂಕಟೇಶ್ ಟಿ, ಜಿ.ಪಂ. ಸಿಇಒ ಸೋಮಶೇಖರ್ ಎಸ್.ಜೆ., ಲೋಕಾಯುಕ್ತ ಅಧೀಕ್ಷಕ ವಾಸುದೇವರಾಮ, ಡಿವೈಎಸ್‍ಪಿ ಮೃತ್ಯುಂಜಯ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮತ್ತಿತರರಿದ್ದರು.
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…