ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಮೇ.19): ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಲು ಪೋಷಕರು ಆಸಕ್ತಿವಹಿಸಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ ಕುಮಾರಸ್ವಾಮಿ ಹೇಳಿದರು.
ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 5 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಜಿಲ್ಲಾ ಬಾಲ ಭವನದಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಠಾಣೆ ವೀಕ್ಷಣೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳ ಕೈಗೆ ಮೊಬೈಲ್ ನೀಡುವುದರಿಂದ ಅನೇಕ ಕಾಯಿಲೆಗಳು ಬರಬಹುದು.
ಮಕ್ಕಳಿಗೆ ಕಾನೂನು ಬಗ್ಗೆ ಮಾಹಿತಿ ಬಹಳ ಮುಖ್ಯವಾಗಿ ಬೇಕಾಗಿದೆ. ಅಪರಾಧಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರೆ ಕಾನೂನು ಮತ್ತು ಆರಕ್ಷಕರನ್ನು ಗೌರವಿಸುವ ಗುಣ ಚಿಕ್ಕಂದಿನಲ್ಲಿಯೇ ಬರುತ್ತದೆ.
ಪೊಲೀಸರ ಜೊತೆ ವಿಶ್ವಾಸದಿಂದಿರಲೂ ಮಕ್ಕಳಿಗೆ ಚಿಕ್ಕಂದಿನಲ್ಲಿ ತಿಳಿಸಿದರೆ ಆರಕ್ಷಕ ಇಲಾಖೆಯ ಬಗ್ಗೆ ಗೌರವ ಭಾವನೆ ಮೂಡುತ್ತದೆ. ಇತ್ತೀಚಿನ ದಿನಗಳಲ್ಲಿ ಅಪರಾಧಗ ಕೃತ್ಯಗಳು ನಡೆದ ತಕ್ಷಣ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪತ್ತೆಹಚ್ಚಲಾಗುತ್ತದೆ ಎಂದು ತಿಳಿಸಿದರು. ಯಾವುದೇ ತುರ್ತು ಸಂದರ್ಭದಲ್ಲಿ 112 ಸಹಾಯ ವಾಣಿ ಸಂಪರ್ಕಿಸುವಂತೆ ಸೂಚಿಸಿದರು.
ಮಕ್ಕಳಿಗೆ ಅಪರಾಧ ಪತ್ತೆ ಹಚ್ಚುವ ಬಗ್ಗೆ ಪ್ರಾತ್ಯಕ್ಷಿತೆ ತೋರಿಸಿದರು. ಪೆÇಲೀಸ್ ಸಬ್ ಇನ್ಸ್ಪೆಕ್ಟರ್ ಗಿರಿರಾಜ್ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರೀಕ್ಷಣಾಧಿಕಾರಿ ಮಾರುತಿ, ಜಿಲ್ಲಾ ಬಾಲ ಭವನದ ಕಾರ್ಯಕ್ರಮ ಸಂಯೋಜಕ ಡಿ,ಶ್ರೀಕುಮಾರ, ನಗರ ಠಾಣೆಯ ಪಿಐ ಸಂತೋಷ್ ಕುಮಾರ್, ಬೆರಳಚ್ಚು ವಿಭಾಗದ ಆರಕ್ಷಕ ಉಪ ನಿರೀಕ್ಷಕ ವಿಶ್ವನಾಥ್, ಬಡಾವಣೆಯ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್. ಸಂಜೀವ್ ಕುಮಾರ್, ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.