ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಡಿ.26): ಜೆಡಿಎಸ್.ನ ಪಂಚರತ್ನ ರಥಯಾತ್ರೆ ಫೆ.26 ಕ್ಕೆ ಚಿತ್ರದುರ್ಗ ಜಿಲ್ಲೆಗೆ ಆಗಮಿಸಲಿದ್ದು, ಸಣ್ಣಪುಟ್ಟ ವೈಮನಸ್ಸು ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಕಾರ್ಯಕರ್ತರಿಗೆ ವೀಕ್ಷಕ ಶರಣಪ್ಪ ಕುಂಬಾರ್ ಕರೆ ನೀಡಿದರು.
ಪಂಚರತ್ನ ರಥಯಾತ್ರೆಯನ್ನು ಯಶಸ್ವಿಗೊಳಿಸುವುದಕ್ಕಾಗಿ ಜೆಡಿಎಸ್.ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಪೂರ್ವಭಾವಿ ಸಿದ್ದತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶರಣಪ್ಪ ಕುಂಬಾರ್ ಪಂಚರತ್ನ ರಥಯಾತ್ರೆ ರಾಜ್ಯಾದ್ಯಂತ ಜನರ ಮನಕ್ಕೆ ಮುಟ್ಟಬೇಕೆಂಬುದು ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೆಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿರವರ ಆಸೆಯಾಗಿದೆ. ಅದಕ್ಕೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳ ಸಹಕಾರ ಬೇಕು. ಪಂಚರತ್ನ ರಥಯಾತ್ರೆಯಿಂದ ವಿರೋಧಿಗಳಿಗೆ ನಡುಕ ಉಂಟಾಗಿದೆ. ನಾಡಿನ ಜನ ಸಂಕಷ್ಟದಲ್ಲಿರುವುದರಿಂದ ರಾಜ್ಯದಲ್ಲಿ ಈ ಬಾರಿ ಜೆಡಿಎಸ್.ಅಧಿಕಾರ ಹಿಡಿಯಬೇಕಾಗಿದೆ.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನ, ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ಮುಂದೆ ರೈತರಿಗೆ ತ್ರೀಫೇಸ್ ವಿದ್ಯುತ್ ನೀಡುವ ಚಿಂತನೆಯಿದೆ. ಇವೆಲ್ಲವನ್ನು ಪ್ರತಿ ಮನೆ ಮನೆಗೆ ತಲುಪಿಸುವಲ್ಲಿ ಶ್ರಮಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಮತ್ತೊಬ್ಬ ವೀಕ್ಷಕ ಪಾತಣ್ಣ ಮಾತನಾಡುತ್ತ ಕೋಲಾರದಿಂದ ಪಂಚರತ್ನ ರಥಯಾತ್ರೆ ಆರಂಭಗೊಂಡಿದೆ. 2023 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್.ಪಕ್ಷ ಅಧಿಕಾರಕ್ಕೆ ಬರುವುದರಿಂದ ಟಿಕೇಟ್‍ಗಾಗಿ ಬೇಡಿಕೆ ಜಾಸ್ತಿಯಿದೆ. ಅಭ್ಯರ್ಥಿಗಳಾಗಬೇಕಾದರೆ ಮೊದಲು ಪಕ್ಷದ ಸದಸ್ಯತ್ವ ಪಡೆದುಕೊಂಡು ಐದತ್ತು ವರ್ಷಗಳ ಕಾಲ ದುಡಿದಿರಬೇಕು.
ಅಂತಹವರನ್ನು ಗುರುತಿಸಿ ವರಿಷ್ಠರು ಟಿಕೇಟ್ ನೀಡುತ್ತಾರೆ. ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ ಯಾವುದೇ ಗೊಂದಲ ಬೇಡ. ಪಕ್ಷಕ್ಕೆ ಕಂಕಣಬದ್ದರಾಗಿ ದುಡಿದವರಿಗೆ ಆದ್ಯತೆ ನೀಡಲಾಗುವುದು. ಬಿಜೆಪಿ. ಕಾಂಗ್ರೆಸ್ ಪಕ್ಷಗಳು ಏನು ಮಾಡಿವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ 123 ಸೀಟುಗಳನ್ನು ಗೆಲ್ಲಬೇಕೆಂದು ವರಿಷ್ಠರು ಪಣತೊಟ್ಟಿದ್ದಾರೆ. ಅದಕ್ಕಾಗಿ ಪಕ್ಷ ಸಂಘಟನೆಗೆ ಒತ್ತು ಕೊಡಿ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.
ವೀಕ್ಷಕಿ ಶ್ರೀಮತಿ ತಹೆರ ಖುಲ್ಸುಂ ಮಾತನಾಡುತ್ತ ಜೆಡಿಎಸ್.ನ ಜನತಾ ಜಲಧಾರೆ ಈಗಾಗಲೆ ರಾಜ್ಯದಲ್ಲಿ ಯಶಸ್ವಿಯಾಗಿದೆ. ಪಂಚರತ್ನ ರಥಯಾತ್ರೆ ಹಳ್ಳಿ ಹಳ್ಳಿಗೆ ಸಂಚರಿಸುತ್ತಿದ್ದು. ಫೆಬ್ರವರಿ ತಿಂಗಳಿನಲ್ಲಿ ಜಿಲ್ಲೆಗೆ ಆಗಮಿಸಲಿದೆ. ಚುನಾವಣೆಯಲ್ಲಿ ಟಿಕೇಟ್ ಹಂಚಿಕೆ ವಿಚಾರದಲ್ಲಿ ಕಾರ್ಯಕರ್ತರು ಗೊಂದಲಕ್ಕೀಡಾಗುವುದು ಬೇಡ. ಸಮಸ್ಯೆಗಳಿದ್ದಲ್ಲಿ ನಮಗೆ ತಿಳಿಸಿ ವರಿಷ್ಠರ ಗಮನಕ್ಕೆ ತರುತ್ತೇವೆ. ವಸತಿ, ಶಿಕ್ಷಣ, ಮಹಿಳಾ ಸಬಲೀಕರಣ, ರೈತರ ಸಮಸ್ಯೆ ನಿವಾರಣೆ ಇವುಗಳು ಜೆಡಿಎಸ್.ಮುಂದಿರುವ ಸವಾಲುಗಳು ಎಂದು ತಿಳಿಸಿದರು.
ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ ಕೋಮುವಾದಿ ಬಿಜೆಪಿ. ಕುಟುಂಬ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷಗಳ ವೈಫಲ್ಯವನ್ನು ಇದುವರೆವಿಗೂ ನೀವುಗಳು ನೋಡಿದ್ದೀರ. ರಾಜ್ಯ, ರಾಷ್ಟ್ರಕ್ಕೆ ಸಮರ್ಥ ನಾಯಕತ್ವ ನೀಡಿದ್ದು, ಜೆಡಿಎಸ್. ಎನ್ನುವುದನ್ನು ಯಾರು ಮರೆಯುವಂತಿಲ್ಲ. ಪಂಚರತ್ನ ರಥಯಾತ್ರೆಯಿಂದ ವಿರೋದಿಗಳಿಗೆ ನಡುಕ ಉಂಟಾಗಿದೆ. ಜಿಲ್ಲೆಗೆ ಆಗಮಿಸುವ ಯಾತ್ರೆಯನ್ನು ಯಶಸ್ವಿಗೊಳಿಸುವುದಕ್ಕಾಗಿ ಈಗಿನಿಂದಲೆ ಸಿದ್ದತೆ ಮಾಡಿಕೊಳ್ಳಬೇಕಿದೆ. ಇನ್ನು ಎರಡು ಮೂರು ತಿಂಗಳಲ್ಲಿ ಚುನಾವಣೆ ಘೋಷಣೆಯಾಗಬಹುದು. ವರಿಷ್ಠರು ನಮ್ಮ ಜಿಲ್ಲೆಯಲ್ಲಿ ಯಾರನ್ನೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಎಲ್ಲಿಯೂ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಜೆಡಿಎಸ್.ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಜೆ.ಬಿ.ಶೇಖರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಗೀತ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ತಿಮ್ಮಣ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಜಯಣ್ಣ, ತಿಪ್ಪೇಸ್ವಾಮಿ, ಹನುಮಂತರಾಯ, ಶಂಕರಮೂರ್ತಿ, ಬ್ಯಾಲಹಾಳ್ ಶರಣಪ್ಪಗೌಡ, ಪರಮೇಶ್ವರಪ್ಪ, ಗಣೇಶ್‍ಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ಓ.ಪ್ರತಾಪ್‍ಜೋಗಿ, ನ್ಯಾಯವಾದಿ ಅಶೋಕ್‍ಬೆಳಗಟ್ಟ, ನಗರಸಭೆ ಸದಸ್ಯ ಎನ್.ಚಂದ್ರಶೇಖರ್, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ನೇತ್ರಾವತಿ ದೇವರಾಜ್, ಹಿರಿಯೂರು ತಾಲ್ಲೂಕು ಅಧ್ಯಕ್ಷೆ ರಾಧ ಜಿ. ಇವರುಗಳು ವೇದಿಕೆಯಲ್ಲಿದ್ದರು.