ಐಟಿ ದಾಳಿ ನಂತರ ಕೇವಲ ಸಿಎಂ ಮಾತ್ರ ದೆಹಲಿಗೆ ಹೋಗಿಲ್ಲ. ಮಾಜಿ ನೀರಾವರಿ ಮಂತ್ರಿಗಳೂ ಹೋಗಿದ್ದಾರೆ: ಡಿ ಕೆ ಶಿವಕುಮಾರ್

suddionenews
2 Min Read

ಬೆಂಗಳೂರು: ಐಟಿ ದಾಳಿ ಒಂದೆರಡು ದಿನಗಳಲ್ಲಿ ಮಾಡುವ ವಿಚಾರವಲ್ಲ. ಇದರ ಹಿಂದೆ ಪ್ಲಾನ್ ಇರುತ್ತದೆ. ಕೆಲವರನ್ನು ರಕ್ಷಣೆ ಮಾಡುತ್ತಿದ್ದಾರೆ. ನೀರಾವರಿ ಇಲಾಖೆಗೆ ಸಂಬಂಧಿಸಿದ ದಾಳಿ ಎಂದರೆ ಕಳೆದೊಂದು ವರ್ಷದಿಂದ ಏನೇನಾಗಿದೆ ಎಂಬ ಮಾಹಿತಿ ಇರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯೂ ಇದೆ. ತೆರಿಗೆ ಇಲಾಖೆ ದಾಳಿ ನಂತರ ಕೇವಲ ಮುಖ್ಯಮಂತ್ರಿಗಳು ಮಾತ್ರ ದೆಹಲಿಗೆ ಹೋಗಿಲ್ಲ. ಅವರ ಜತೆ ಮಾಜಿ ನೀರಾವರಿ ಮಂತ್ರಿಗಳೂ ಹೋಗಿದ್ದಾರೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಕೇಸರಿಕರಣ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಬೇರೆ ರಾಜ್ಯಗಳಲ್ಲಿ ಜಾರಿಯಾಗದ ಶಿಕ್ಷಣ ನೀತಿ ನಮ್ಮ ರಾಜ್ಯದಲ್ಲಿ ಮಾತ್ರ ತರಾತುರಿಯಲ್ಲಿ ಜಾರಿ ಮಾಡುತ್ತಿರುವುದೇಕೆ? ಈ ವಿಚಾರವಾಗಿ ಪೋಷಕರು, ಮಕ್ಕಳು, ಶಿಕ್ಷಣ ತಜ್ಞರ ಜತೆ ಚರ್ಚೆ ಮಾಡಬೇಕು. ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಏಕಕಾಲಕ್ಕೆ ಬದಲಿಸುತ್ತೇನೆ, ನಿಮ್ಮ ಪದವಿಗೆ ಪ್ರಾಮುಖ್ಯತೆ ಇಲ್ಲ, ಒಂದು ವರ್ಷ ಪದವಿ ಓದಿದರೂ ಪ್ರಮಾಣಪತ್ರ ಕೊಡುತ್ತೇವೆ ಎನ್ನುವುದಾದರೆ ಇವರು ಯಾವ ಸೀಮೆ ಶಿಕ್ಷಣ ವ್ಯವಸ್ಥೆ ತರಲು ಹೊರಟಿದ್ದಾರೆ.

ಗುರುಕುಲ ಸಂಸ್ಕೃತಿ ಎನ್ನುತ್ತಾರಲ್ಲಾ, ಇಷ್ಟು ದಿನ ನಮ್ಮಲ್ಲಿದ್ದ ಶಿಕ್ಷಣ ವ್ಯವಸ್ಥೆ ಏನಾಗಿದೆ? ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಇಡೀ ವಿಶ್ವದ ಆರ್ಥಿಕತೆ ಕುಸಿದುಬಿದ್ದರೂ ಭಾರತದ ಆರ್ಥಿಕತೆ ಬಿದ್ದಿರಲಿಲ್ಲ. ಅಂತಹ ಶಿಕ್ಷಣ ಬೇಡವೇ? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದಿದ ಡಾಕ್ಟರ್, ಇಂಜಿನಿಯರ್ ಗಳು ವಿಶ್ವದೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ. ಅದು ಸರಿ ಇಲ್ಲವೇ? ಇವರು ದಿನಬೆಳಗಾದರೆ ತಮ್ಮ ವಿಚಾರಧಾರೆಯನ್ನು ಮಕ್ಕಳ ತಲೆಗೆ ತುಂಬಲು ಈ ರೀತಿ ಮಾಡುತ್ತಿದ್ದಾರೆ.

ಈ ಶಿಕ್ಷಣ ನೀತಿ ಜಾರಿಗೆ ತರುವುದೇ ಆದರೆ, ಸಂಸತ್ತಿನಲ್ಲಿ ಯಾಕೆ ಚರ್ಚೆಯಾಗಿಲ್ಲ? ವಿಧಾನಮಂಡಲ ಅಧಿವೇಶನದಲ್ಲಿ ಯಾಕೆ ಚರ್ಚೆಯಾಗಿಲ್ಲ? ಈ ವಿಚಾರವಾಗಿ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಪೋಷಕರಲ್ಲಿ ಅರಿವು ಮೂಡಿಸುತ್ತೇವೆ. ನಾನು ರಾಜಕಾರಣಿಯಷ್ಟೇ ಅಲ್ಲ. ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದು, ನಾನು ಇದನ್ನು ಆಳವಾಗಿ ಅಧ್ಯಯನ ಮಾಡಿದ್ದೇನೆ. ಇದರಲ್ಲಿ ಒಂದೆರಡು ಒಳ್ಳೆಯ ಅಂಶಗಳಿರಬಹುದು, ಆದರೆ ಇದು ಸ್ಪಷ್ಟವಾಗಿ ಕೇಸರಿಕರಣದ ಪ್ರಯತ್ನ.

ಇದು ಒಳ್ಳೆಯ ನೀತಿಯಾಗಿದ್ದರೆ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತಿನಲ್ಲಿ ಜಾರಿಗೊಳಿಸಲು ಹೇಳಿ. ಬೇರೆ ರಾಜ್ಯಗಳಲ್ಲಿ ಮಾಡಲಾಗದ್ದನ್ನು ನಮ್ಮಲ್ಲಿ ಮಾಡಿದ್ದೇನೆ ಎಂದು ಹೈಕಮಾಂಡ್ ಓಲೈಸಲು ಹೊರಟಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಬಿಡುವುದಿಲ್ಲ. ಇದರ ವಿರುದ್ಧ ಚಳವಳಿ, ಆಂದೋಲನ ಮಾಡುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *