ಅಭ್ಯರ್ಥಿ ಹೈಜಾಕ್ ಮಾಡುವ ಅಗತ್ಯ ನಮಗಿಲ್ಲ: ಡಿ.ಕೆ. ಶಿವಕುಮಾರ್

suddionenews
1 Min Read

ಬೆಂಗಳೂರು: ಮನಗೂಳಿ ಅವರು ನಮ್ಮನ್ನು ಬಂದು ಭೇಟಿ ಮಾಡಿದ್ದು ನಿಜ. ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಸ್ಥಿತಿ ಕಾಂಗ್ರೆಸ್ ಗೆ ಬಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಬೇಡ ಎನ್ನುವುದಿಲ್ಲ. ಕುಮಾರಸ್ವಾಮಿ ಅವರು ನೋವಿನಿಂದ ಮಾತನಾಡಿದ್ದು, ಅವರ ಮಾತಿಗೆ ನಾನು ಬೇಸರಿಸುವುದಿಲ್ಲ ಎಂದರು.

ಸಿಂದಗಿ ಉಪಚುನಾವಣೆಯಲ್ಲಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಚಾರವಾಗಿ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, ಅಶೋಕ್ ಅವರು ನಮ್ಮ ಅಭ್ಯರ್ಥಿ. ಮನಗೂಳಿ ಅವರು ಬಂದು ನನ್ನನ್ನು ಭೇಟಿ ಮಾಡಿ ಮಾತನಾಡಿದ ವಿಚಾರ ನನಗೆ ಮನಗೂಳಿ ಹಾಗೂ ಅವರ ಪುತ್ರ ಅಶೋಕ್ ಗೆ ಗೊತ್ತಿದೆ. ನಾನು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದು, ಗೌಪ್ಯವಾಗಿ ಹೇಳಿಲ್ಲ. ನಾನು ಮಾತ್ರವಲ್ಲ ಸಿದ್ದರಾಮಯ್ಯನವರು ಕೂಡ ಈ ಪ್ರಸ್ತಾಪಿಸಿದ್ದಾರೆ.

ನಾವು ಈ ವಿಚಾರದಲ್ಲಿ ಯಾಕೆ ಸುಳ್ಳು ಹೇಳಬೇಕು? ಅದರ ಅಗತ್ಯ ನಮಗೇನಿದೆ? ಬೇಕಿದ್ದರೆ ಅಶೋಕ್ ಮನಗೂಳಿ ಅವರನ್ನೇ ಕೇಳಿ.15 ದಿನಗಳ ಹಿಂದೆ ಭೇಟಿ ಮಾಡಿದ್ದರು ಅಂದರೆ ಕ್ಯಾಲೆಂಡರ್ ತೆಗೆದುಕೊಂಡು ಲೆಕ್ಕಹಾಕಿ ಹೇಳಿಲ್ಲ. ಅವರು ಸಾಯುವ ಸ್ವಲ್ಪ ದಿನಗಳ ಮೊದಲು ಭೇಟಿ ಮಾಡಿದ್ದರು. ತಮ್ಮ ಪಕ್ಷದಲ್ಲಿದ್ದವರು ಕಾಂಗ್ರೆಸ್ ಗೆ ಹೋಗಿದ್ದಾರಲ್ಲ ಎಂಬ ನೋವು ಕುಮಾರಣ್ಣ ಅವರಿಗಿದೆ.‌ಆ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ನಾವು ಯಾರನ್ನೂ ಹೈಜಾಕ್ ಮಾಡುವುದಿಲ್ಲ. ನಮ್ಮಲ್ಲಿ ಸಾಕಷ್ಟು ಸಂಖ್ಯಾಬಲ ಇದೆ. ನಮ್ಮ ಪಕ್ಷಕ್ಕೆ ಸ್ವ ಇಚ್ಛೆಯಿಂದ ಬರುವವರನ್ನು ನಾವು ಬೇಡ ಎನ್ನುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *