ಭಾರತದಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ–1969ಕ್ಕೆ 2023ರಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ಇದೀಗ ಮತ್ತೊಮ್ಮೆ ಹೊಸ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ.ಜುಲೈ 27ರಂದು ಕೇಂದ್ರ ಸಚಿವ ಸಂಪುಟವು ಈ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದ್ದು, ನಾಗರಿಕ ನೋಂದಣಿ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
2 ವರ್ಷಕ್ಕಿಂತ ಹಳೆಯ ನೋಂದಣಿಗೆ ಕಠಿಣ ನಿಯಮ
ಹೊಸ ತಿದ್ದುಪಡಿ ಪ್ರಕಾರ, ಜನನ ಅಥವಾ ಮರಣ ಸಂಭವಿಸಿ 2 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದ ಬಳಿಕ ನೋಂದಣಿ ಮಾಡಬೇಕಾದರೆ ಕಠಿಣ ಪರಿಶೀಲನೆ ಮತ್ತು ನ್ಯಾಯಾಂಗ ಅನುಮೋದನೆ ಕಡ್ಡಾಯವಾಗಲಿದೆ. ಇದರಿಂದ ನಕಲಿ ದಾಖಲೆಗಳು, ವಂಚನೆ ಹಾಗೂ ತಪ್ಪು ನೋಂದಣಿಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ.
ಈಗಿರುವ ನಿಯಮವೇನು?
ಪ್ರಸ್ತುತ ಜಾರಿಯಲ್ಲಿರುವ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ–1969ರ ಪ್ರಕಾರ, ಒಂದು ವರ್ಷಕ್ಕಿಂತ ಹೆಚ್ಚು ವಿಳಂಬವಾದ ನೋಂದಣಿಗೆ ಜಿಲ್ಲಾಧಿಕಾರಿ (DM), ಉಪ ವಿಭಾಗಾಧಿಕಾರಿ (SDM) ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಅನುಮತಿ ಅಗತ್ಯವಿದೆ.

ಹೊಸ ತಿದ್ದುಪಡಿಯಲ್ಲಿ ಏನಿದೆ?
ಪ್ರಸ್ತಾಪಿತ ತಿದ್ದುಪಡಿ ಪ್ರಕಾರ, 2 ವರ್ಷಕ್ಕಿಂತ ಹೆಚ್ಚು ತಡವಾದ ನೋಂದಣಿಗಳನ್ನು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಆದೇಶದ ಮೇರೆಗೆ ಮಾತ್ರ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಅಂದರೆ, ಈ ಅಧಿಕಾರವನ್ನು ಕಾರ್ಯನಿರ್ವಾಹಕ ಅಧಿಕಾರಿಗಳಿಂದ ನ್ಯಾಯಾಂಗದ ವ್ಯಾಪ್ತಿಗೆ ವರ್ಗಾಯಿಸುವ ಪ್ರಸ್ತಾವನೆ ಮಾಡಲಾಗಿದೆ.
ಏಕೆ ಈ ಬದಲಾವಣೆ?
ದೇಶದ ನಾಗರಿಕ ನೋಂದಣಿ ವ್ಯವಸ್ಥೆಯನ್ನು ಇನ್ನಷ್ಟು ವಿಶ್ವಾಸಾರ್ಹಗೊಳಿಸುವುದು, ನಕಲಿ ದಾಖಲೆಗಳಿಗೆ ತಡೆ ಹಾಕುವುದು ಹಾಗೂ ಜನನ-ಮರಣದ ನಿಖರ ಅಂಕಿಅಂಶಗಳನ್ನು ಸಂಗ್ರಹಿಸುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.
ಜನನ ಪ್ರಮಾಣಪತ್ರ ಏಕೆ ಮುಖ್ಯ?
ಜನನ ಪ್ರಮಾಣಪತ್ರವು ವ್ಯಕ್ತಿಯ ಮೊದಲ ಅಧಿಕೃತ ಗುರುತಿನ ದಾಖಲೆಯಾಗಿದೆ. ಶಾಲಾ ಪ್ರವೇಶ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ನೋಂದಣಿ, ಉತ್ತರಾಧಿಕಾರ ಹಕ್ಕು, ಸರ್ಕಾರಿ ಯೋಜನೆಗಳ ಪ್ರಯೋಜನ ಸೇರಿದಂತೆ ಹಲವು ಕಾನೂನು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಇದು ಅತ್ಯಗತ್ಯ ದಾಖಲೆಯಾಗಿದೆ.










