Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ನೀಲಕಂಠೇಶ್ವರ ದೇಗುಲದ ಐತಿಹಾಸಿಕ ಹಿನ್ನೆಲೆ

Facebook
Twitter
Telegram
WhatsApp

 

ಬರಮಣ್ಣನಾಯಕ ನಿರ್ಮಿಸಿದ ದೇವಾಲಯ
ಜೀರ್ಣೋದ್ಧಾರದಲ್ಲಿ ಶ್ರಮಿಸಿದ್ದಾರೆ ಅನೇಕ ಮಹನೀಯರು

ಚಿತ್ರದುರ್ಗ | ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯ ಪರಂಪರೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ.
ಈ ದೇವಾಲಯಗಳು ಪ್ರಾಚೀನ ಸಮುದಾಯದ ಸಾಂಸ್ಕೃತಿಕ ಕೇಂದ್ರಗಳಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿವೆ.
ಸಮಾಜವನ್ನು ಒಗ್ಗೂಡಿಸುವ ಕ್ರಿಯಾತ್ಮಕ ಚಟುವಟಿಕೆಗಳನ್ನು ನಿರ್ದೇಶಿಸುವ ಸ್ಥಳವಾಗಿ ಸಮಾಜವನ್ನು ಅಭಿವೃದ್ಧಿಗೊಳಿಸುವ ದಿಕ್ಕಿನಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ಅಂತಹ ದೇವಾಲಯಗಳಲ್ಲಿ ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿ ಪೇಟೆಯಲ್ಲಿರುವ ನೀಲಕಂಠೇಶ್ವರ ದೇಗುಲವು ಚಿತ್ರದುರ್ಗದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದೆ.

ಈ ದೇವಸ್ಥಾನವು ಅಂದಾಜು 300 ವರ್ಷಗಳ ಹಿಂದೆ ದುರ್ಗದ ಪ್ರಸಿದ್ಧ ದೊರೆ ದೈವಭಕ್ತ ಭರಮಣ್ಣನಾಯಕನಿಂದ ವ್ಯಯ ಸಂವತ್ಸರದಲ್ಲಿ (ಕ್ರಿ. ಶ.1607) ಪೇಟೆಯಲ್ಲಿ ನಿರ್ಮಾಣ ಮಾಡಲ್ಪಟ್ಟಿತು. ಆಗ ಈ ಶಿವ ದೇವಾಲಯ ಕೇವಲ ಗರ್ಭಗುಡಿ ಮತ್ತು ಸಣ್ಣ ನವರಂಗ ಹೊಂದಿತ್ತೆಂದು ಕಾಣುತ್ತದೆ.  ಶಿವನ ಇನ್ನೊಂದು ಹೆಸರು ನೀಲಕಂಠೇಶ್ವರ ಹಾಗೂ ವಿಷಕಂಠೇಶ್ವರ ಎಂದು. ಇದಕ್ಕೆ ಸಂಬಂಧಿಸಿದ ಸಮುದ್ರ ಮಥನದ ಪೌರಾಣಿಕ ಕಥೆ ಎಲ್ಲರಿಗೂ ತಿಳಿದಿದೆ. ಈ ಹೆಸರಿನಿಂದ ನಿರ್ಮಾಣವಾಗಲು ಕಾರಣವೇನೆಂಬುದಕ್ಕೆ ಲೇಖಕ ಕೊ.ಶ. ಬಸವಲಿಂಗಪ್ಪನವರು ಮೌಖಿಕವಾದ ಕಥೆಯೊಂದನ್ನು ಹೇಳುತ್ತಾರೆ. ಅದು ಹೀಗಿದೆ. 300 ವರ್ಷಗಳ ಹಿಂದೆ ನೀಲಕಂಠೇಶ್ವರಸ್ವಾಮಿಗಳೆಂಬ ಗುರುಗಳು ಸಂಚಾರ ಮಾಡುತ್ತ ಚಿತ್ರದುರ್ಗಕ್ಕೆ ಬಂದರು. ಈಗ ದೇವಸ್ಥಾನ ಇರುವ ಜಾಗದಲ್ಲಿ ಇದ್ದ ಮರದ ಕಟ್ಟೆಯ ಮೇಲೆ ಮರದ ನೆರಳಿನಲ್ಲಿ ಆಶ್ರಯ ಪಡೆದು ಭಿಕ್ಷಾಟನೆ ಮಾಡಿಕೊಂಡು ಸಂತೆಗೆ ಬರುವ ಹೋಗುವ ಜನರಿಗೆ ಆಧ್ಯಾತ್ಮಿಕ ಬೋಧನೆ ಮಾಡಿಕೊಂಡು ಅಲ್ಲಿಯೇ ಒಂದು ಶಿವಲಿಂಗ ಸ್ಥಾಪನೆ ಮಾಡಿ ಪೂಜೆ ಮಾಡಿಕೊಂಡಿದ್ದರಂತೆ. ಅವರು ದೈವಾಧೀನರಾದ ಎಷ್ಟೋ ಕಾಲದ ನಂತರ ಈ ದೇವಾಲಯ ಆಗಿರಬೇಕೆಂದು ಹಿರಿಯರು ಹೇಳುತ್ತಾರೆಂದು ಬರೆದಿದ್ದಾರೆ.

ಆಗ ನೀಲಕಂಠೇಶ್ವರ ದೇಗುಲವು ಸಣ್ಣದಿದ್ದರೂ ಸುತ್ತಲೂ ವಿಶಾಲವಾದ ಜಾಗವಿದ್ದಿತು. ಆಗ ಮಾರುಕಟ್ಟೆ ಇಲ್ಲದ ಕಾರಣ ವ್ಯಾಪಾರಕ್ಕೆ ಬರುವ ಜನ ತಮ್ಮ ಮಾರುವ ವಸ್ತುವಿನೊಡನೆ ಇಲ್ಲಿ ಬಂದು ತಂಗುತ್ತಿದ್ದರು. ನಂತರದಲ್ಲಿ ಚಿತ್ರದುರ್ಗಕ್ಕೆ ಜಿನ್ನಿಂಗ್ ಪ್ಯಾಕ್ಟರಿ ಬಂದಿತು. ಹತ್ತಿ ಕೊಳ್ಳಲು ಕೆಲವರು ದಲ್ಲಾಲಿಗಳು, ಖರೀದಿದಾರರು ಬರುತ್ತಿದ್ದರು. ದಲ್ಲಾಲಿಗಳು ಎತ್ತಿನಗಾಡಿಗಳಲ್ಲಿ ಹತ್ತಿಯನ್ನು ಖರೀದಿದಾರರಿಗೆ ತೋರಿಸಿ ವ್ಯಾಪಾರ ಕುದುರಿಸಲು ಈ ಸ್ಥಳವನ್ನು ಬಳಸಿಕೊಂಡರು. ನಂತರದಲ್ಲಿ ಅಲ್ಲಿಯೇ “ನೀಲಕಂಠೇಶ್ವರ ಕಾಟನ್ ಮಾರ್ಕೆಟ್ ಸಮಿತಿ” ಸ್ಥಾಪನೆಯಾಯಿತು. ಆಗ ಯಜಮಾನ್ ಸಾಟಿ ಹಾಲಪ್ಪನವರು ಸಮಿತಿಯ ಅಧ್ಯಕ್ಷರಾಗಿ ನೇಮಕವಾದರು. ಖರೀದಿದಾರರು ಮಾರಾಟಗಾರರಿಂದ ಸುಂಕ ವಸೂಲಿ ಮಾಡಿ ಸಮಿತಿಗೆ ಆದಾಯ ಬರುವಂತೆ ಮಾಡಿದರು. ಪಟ್ಟಣದ ಮುರಿಗೆಪ್ಪ, ತುಂಬಿಗೆರೆ ಮಠದ ವೀರಬಸಯ್ಯ, ಅಧ್ಯಕ್ಷರಾದಾಗ ಗರ್ಭಗುಡಿ ಮಾತ್ರವೇ ಇದ್ದು, ಸ್ವಚ್ಛತೆ ಇಲ್ಲದೆ ಅವ್ಯವಸ್ಥಿತವಾಗಿದ್ದ, ದೊಡ್ಡ ಪ್ರಾಂಗಣ ಹೊಂದಿದ್ದ ಆ ಜಾಗವನ್ನು ಸಮಾಜದ ದಾನಿಗಳ ನೆರವಿನಿಂದ ಬಿ.ಕೆ.ತಿಪ್ಪಣ್ಣ, ಎಂ.ಕೊಟ್ರಯ್ಯ ಮತ್ತು ಕಂಟ್ರಾಕ್ಟರ್ ನಂಜುಂಡಯ್ಯ ಮುಂತಾದ ವೀರಶೈವ ಸಮಾಜದ ಮುಖಂಡರು ದೇವಾಲಯದ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮಾಡಿ ನಂದಿ ವಿಗ್ರಹ ಪ್ರತಿಷ್ಠಾಪಿಸಿ ದೇವಾಲಯಕ್ಕೆ ಬಾಗಿಲುಗಳನ್ನು ಮಾಡಿಸಿ ಪ್ರತಿದಿನ ಪೂಜೆ, ಪ್ರಸಾದ, ರುದ್ರಾಭಿಷೇಕಕ್ಕೆ ವ್ಯವಸ್ಥೆ ಮಾಡಿದರು. ಹಾಗೆಯೇ ದೇವಾಲಯದ ಹಿಂದೆ ಒಂದು ಹೂವಿನ ತೋಟವನ್ನು ಮಾಡಿಸಿದರು.

ಆದರೆ, ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ನಿರಂತರವಾದ ಶಾಶ್ವತವಾದ ಆದಾಯ ಇರಲಿಲ್ಲ, ಆಗ ವೀರಶೈವ ಸಮಾಜದ ಮುಖಂಡರು ದೇಗುಲದ ಅಕ್ಕಪಕ್ಕದ ಜಾಗಗಳಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿ ಆದಾಯ ಬರುವಂತೆ ಮಾಡಿದರು. ನಂತರದಲ್ಲಿ ವೀರಶೈವ ಬಂಧುಗಳು, ಇತರೆ ಭಕ್ತರ ಸಹಾಯದಿಂದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿ ಸಂಜೆ ಪುರಾಣ, ಪ್ರವಚನ, ಶ್ರಾವಣ ಮಾಸದ ಪ್ರವಚನ, ಆರಾಧನೆ, ಪ್ರಸಾದ ಏರ್ಪಡಿಸಿ ಪ್ರತಿವರ್ಷ ಆ ಕಾರ್ಯ ಮುಂದುವರಿಸಿಕೊಂಡು ಬಂದು ಗೌರಿ ಗಣೇಶ ವಿಗ್ರಹ ಇರಿಸಿ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಬರುವಂತೆ ಮಾಡಿದರು.
ನಂತರದಲ್ಲಿ ನವರಂಗದ ಮುಂದಿನ ದೊಡ್ಡ ಆವರಣವನ್ನು ಸಭಾಂಗಣವನ್ನಾಗಿ ಮೇಲೆ ಷೀಟ್ ನ ಮೇಲ್ಚಾವಣಿ ಹಾಕಿಸಿ, ಸಭೆ ಸಮಾರಂಭ ಆರಂಭಿಸಿದರು. ಹಾಗೆಯೇ ಬಸವ ಜಯಂತಿ ಉತ್ಸವ ಆರಂಭಿಸಿ ಉಪನ್ಯಾಸಕರನ್ನು ಕರೆಸಿ ಶರಣರ ಬಗ್ಗೆ ಭಾಷಣಗಳನ್ನು ಏರ್ಪಡಿಸಿದರು. ಪ್ರವಚನಕ್ಕೆ ಪ್ರಖ್ಯಾತ ನಟ ಹಾಗೂ ಗಾಯಕ ಹೊನ್ನಪ್ಪ ಭಾಗವತರು ವಿಮಲಾನಂದದಾಸ್, ಜನಪದ ವಿದ್ವಾಂಸ, ಗಾಯಕ ಮತ್ತು ವಕೀಲ ತರೀಕೆರೆ ಲಿಂಗಪ್ಪ ಮುಂತಾದ ಪ್ರಸಿದ್ಧರನ್ನು ಕರೆಯಿಸುತ್ತಿದ್ದರು.

ಸ್ವಲ್ಪ ಕಾಲದ ಮೇಲೆ ಸಮಿತಿಯು ದಾನಿಗಳ ಸಹಾಯದಿಂದ ದೇವರುಗಳ ಉತ್ಸವ ಮೂರ್ತಿ ಪೂಜಾ ವಸ್ತುಗಳು ಇವೆಲ್ಲವನ್ನು ಬೆಳ್ಳಿಯಲ್ಲಿ ಮಾಡಿಸಿದರು. ಮಠದ ವೀರಬಸವಯ್ಯ, ಬಿ.ಎಂ. ಬಸವಣ್ಣೆಪ್ಪ, ಇಟಗಿ ಕೊಟ್ಟಬಸಪ್ಪ, ಕೊಟ್ರಯ್ಯ, ಎನ್.ಸಿದ್ದಪ್ಪ, ಕೆ.ವೀರಭದ್ರಪ್ಪ, ಎಸ್.ಬಿ. ವೀರಪ್ಪ, ರಾಗಿಮುರುಗೆಪ್ಪ,
ಎಂ. ಕೊಟ್ರಯ್ಯ ಇತರರು ದೇವಾಲಯಕ್ಕೊಂದು ಸ್ವರೂಪ ಕೊಟ್ಟರು. ಗುಗ್ಗುಳಕ್ಕೆ ಬಂದ ದೇಣಿಗೆಯಿಂದ ವೀರಭದ್ರಸ್ವಾಮಿಗೆ ಬೆಳ್ಳಿಯ ಹಲಗೆಯನ್ನು ಮಾಡಿಸಿದರು. ಆಮೇಲೆ ಶಿವರಾತ್ರಿ ಉತ್ಸವ ವೀರಭದ್ರಸ್ವಾಮಿಗಳ ಗುಗ್ಗುಳವನ್ನು ಆರಂಭಿಸಿದರು. ವೀರಗಾಸೆ, ಒಡಪು ಮೆರವಣಿಗೆ ಕರಡೆಮಜಲು ಇರುತ್ತಿದ್ದವು. ಅಲ್ಲಿ ನಡೆಯುವ ಎಲ್ಲಾ ಕಾರ್ಯಗಳು ಜಾತ್ರೆ ಸ್ವರೂಪ ಪಡೆದುಕೊಂಡು ಇಂದಿಗೂ ಸಂಭ್ರಮದಿಂದ ನಡೆದುಕೊಂಡು ಬಂದಿವೆ..
ಹಾಗೆಯೇ ಹಿಂದೆ ಭಕ್ತರ ಪ್ರವಾಸ, ಮದುವೆ, ನಾಮಕರಣ, ನಿಶ್ಚಯಕಾರ್ಯ ಮುಂತಾದ ಶುಭ ಕಾರ್ಯಕ್ರಮಗಳಿಗೆ ಶುಭಾರಂಭ ಇಲ್ಲಿಂದಲೇ ಆಗುತ್ತಾ ಬಂತು. ಹಾಗೆಯೇ ಮುರುಘಾ ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಕಾಲದಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮ ಕೆಲವು ವರ್ಷಗಳು ಇಲ್ಲಿಯೇ ನಡೆಯುತ್ತಿತ್ತು. ಸಂತೆಗಾಗಿ ಬಂದವರಿಗೆ, ಯಾತ್ರೆಗಾಗಿ ಬಂದವರಿಗೆ, ವ್ಯಾಪಾರಕ್ಕಾಗಿ ಬಂದವರಿಗೆ, ಸ್ವಾಮಿಯ ದೇವಾಲಯ ಬಡವ ಬಲ್ಲಿದ ಭೇದವಿಲ್ಲದೆ ಜಾತಿಮತ ವ್ಯತ್ಯಾಸ ಮಾಡದೆ ಸರ್ವರಿಗೂ ಆಶ್ರಯ ನೀಡಿದೆ.

ನಂತರ 20ನೇ ಶತಮಾನದ ಮಧ್ಯದಲ್ಲಿ 2ನೇ ಹಂತದ ಜೀರ್ಣೋದ್ಧಾರ ಕೈಗೊಂಡಾಗ ಎಂ.ಕೊಟ್ರಯ್ಯ, ಎಸ್.ಬಿ. ವೀರಪ್ಪ ಇವರು ಮುಖ್ಯವಾಗಿ ರಾಮೇಶ್ವರ ಜಯಣ್ಣ, ಎಸ್. ಬಿ. ವೀರಪ್ಪ ಕಾರ್ಯದರ್ಶಿ, ಅಧ್ಯಕ್ಷರಾಗಿ ಮತ್ತೊಂದು ಬದಿಯ ವಾಣಿಜ್ಯ ಸಂಕೀರ್ಣ ನಿರ್ಮಿಸಿದರು.  ರಾಮೇಶ್ವರ ಜಯಣ್ಣ ದೇವಾಲಯಕ್ಕೆ ಎತ್ತರವಾದ ಕಬ್ಬಿಣದ ಗೇಟುಗಳನ್ನು ತಮ್ಮ ತಂದೆ ತಾಯಿ ಹೆಸರಲ್ಲಿ ಹಾಕಿಸಿ ಕೊಟ್ಟಿದ್ದರು. ಡಾ. ಎಸ್. ಶಿವನಪ್ಪ ವೀರಭದ್ರೇಶ್ವರ ದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿಸಿದರು. ನಂತರ ವೀರಶೈವ ಸಮಾಜದವರು ನವರಂಗದ ಮುಂದಿನ ಸಭಾಂಗಣಕ್ಕೆ  ಆರ್.ಸಿ.ಸಿ. ಹಾಕಿಸಿದರು. ಮುಂದೆ ಕೆ.ವಿ. ಪ್ರಭಾಕರ್ ಅವರು ಅಧ್ಯಕ್ಷರಾದಾಗ ಗೋಪುರ ನಿರ್ಮಾಣ, ಹೊಸ ನಂದಿಯ ವಿಗ್ರಹ ಕಳಸ ಪ್ರತಿಷ್ಠಾಪನೆ, ದೇವಾಲಯದ ಎಡಪಕ್ಕದಲ್ಲಿ ನೀಲಕಂಠೇಶ್ವರ ಸಮುದಾಯ ಭವನ, ವ್ಯಾಪಾರಿ ಮಳಿಗೆಗಳು ಮುಂತಾದವು ನಿರ್ಮಾಣಗೊಂಡು ದೇವಸ್ಥಾನವು ವೀರಶೈವ ಸಮುದಾಯದ ಒಂದು ಸಾಂಸ್ಕೃತಿಕ ಕೇಂದ್ರವಾಗಿದೆ. ಪ್ರತಿಷ್ಟಾಪನೆಯ ಸಂದರ್ಭದಲ್ಲಿ “ನೀಲಕಂಠಸಿರಿ” ಎಂಬ ಸ್ಮರಣ ಸಂಚಿಕೆ ಪ್ರಕಟವಾಯಿತು. ಹಾಗೆಯೇ ಪೇಟೆಯ ಸುತ್ತಮುತ್ತ ಇರುವ ಅನೇಕ ಮಾರವಾಡಿ ಜೈನರು ಈ ದೇವಾಲಯಕ್ಕೆ ಪೂಜೆ ಸಲ್ಲಿಸುತ್ತಾ ಬಂದಿರುವುದು ವಿಶೇಷ ಎನ್ನಬಹುದಾಗಿದೆ. ಎಲ್ಲಾ ಸಮುದಾಯದ ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ.

ಮುಂದೆ ಅಧ್ಯಕ್ಷರಾಗಿ ಜೆ.ಎಂ.ಜಯಕುಮಾರ್, ಎನ್. ಜಯಣ್ಣ, ಕೆ.ಇ.ಬಿ. ಷಣ್ಮುಖಪ್ಪ, ಪ್ರಸ್ತುತದಲ್ಲಿ ಎಲ್.ಬಿ.ರಾಜಶೇಖರ್  ಅವರು ಅಭಿವೃದ್ಧಿ ಕಾರ್ಯ ಮುಂದುವರೆಸಿಕೊಂಡು ಬಂದಿದ್ದಾರೆ. ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಮಹಾಪೋಷಕರಾಗಿದ್ದಾರೆ. ಚಿತ್ರದುರ್ಗದ ವೀರಶೈವ ಸಮಾಜದ ಕಚೇರಿಯು ದೇವಾಲಯದ ಕಟ್ಟಡದಲ್ಲಿ ನೆಲೆಗೊಂಡಿದೆ.
ಹೀಗೆ ಈ ದೇವಾಲಯವು ಹಲವು ಹಂತಗಳಲ್ಲಿ ಜೀರ್ಣೋದ್ಧಾರಗೊಳ್ಳುತ್ತಾ ದಾನಿಗಳ ನೆರವಿನಿಂದ ಸಮಾಜ ಸೇವಾಕರ್ತರ ಸಹಕಾರದಿಂದ ಸುಂದರವಾಗಿ ಕಾಣುತ್ತಿದೆ. ನೀಲಕಂಠೇಶ್ವರ ಸ್ವಾಮಿಯ ಗರ್ಭಗುಡಿಯಲ್ಲಿ ಎಡ ಬಲಗಳಲ್ಲಿ ಪಾರ್ವತಿ ಗಣಪತಿ ಮೂರ್ತಿಗಳು, ಎದುರಿಗೆ ನಂದೀಶ್ವರ ವಿಗ್ರಹ,  ವೀರಭದ್ರೇಶ್ವರ ಪ್ರತಿಮೆ, ನವಗ್ರಹಗಳು, ಹಿಂದೆ ಹೂವಿನ ತೋಟ, ಹೀಗೆ ಶೋಭಾಯಮಾನವಾಗಿ ಕಂಗೊಳಿಸುತ್ತದೆ. ಸಮಾಜದ ಅನೇಕ ಉತ್ಸವ, ಹಬ್ಬ, ಪ್ರವಚನ ಉಪನ್ಯಾಸಗಳು ಜಾತ್ರೆಯ ಸ್ವರೂಪದಲ್ಲಿ ನಡೆಯುತ್ತಿವೆ. ಹಾಗಾಗಿ ಬೇರೆಲ್ಲಾ ದೇವಾಲಯಗಳಿಗಿಂತ ಇದು ವಿಶೇಷವಾಗಿದೆ.

ಈ ದೇಗುಲ ಸ್ವಾತಂತ್ರ್ಯ ಚಳವಳಿಗಾರರ ಕೇಂದ್ರ ಸ್ಥಾನ :
ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರಿಗೆ ನೀಲಕಂಠೇಶ್ವರ ದೇವಾಲಯದ ಬಗ್ಗೆ ವಿಶೇಷ ಪ್ರೀತಿಯಿತ್ತು. ಅದಕ್ಕೆ ಕಾರಣ ಅದು ದೇವಾಲಯ ಎಂದಲ್ಲ. ಅದು ಹಿಂದೊಮ್ಮೆ ಸ್ವಾತಂತ್ರ್ಯ ಹೋರಾಟಗಾರರು ಸೇರುವ ಕೇಂದ್ರ ಸ್ಥಳವಾಗಿತ್ತು. ಚಳುವಳಿಯ ಯೋಜನೆಗಳು ಅಲ್ಲಿ ರೂಪುಗೊಳ್ಳುತ್ತಿದ್ದವು. ಹೋರಾಟದ ಪ್ರಭಾತ್ ಫೇರಿ ಅಲ್ಲಿಂದಲೇ ಪ್ರಾರಂಭವಾಗುತ್ತಿದ್ದವು. ಈ ದೇವಾಲಯಕ್ಕೆ ಸ್ವಾತಂತ್ರ್ಯ ಹೋರಾಟದ ಭಾಷಣಕ್ಕಾಗಿ ರಾಷ್ಟ್ರ ನಾಯಕರಾದ ಅಶೋಕ ಮೆಹ್ತಾ, ಬಳ್ಳಾರಿ ಸಿದ್ದಮ್ಮ, ಹರ್ಡೇಕರ್ ಮಂಜಪ್ಪ ಅಂತಹ ಅನೇಕ ನಾಯಕರು ಇಲ್ಲಿಗೆ ಬಂದಿದ್ದರು. ಆ ರೋಮಾಂಚಕ ನೆನಪಿನಿಂದ ನಿಜಲಿಂಗಪ್ಪನವರು ಪುಳಕಿತರಾಗುತ್ತಿದ್ದರು. ಅದೆಲ್ಲದರ ಸ್ಮರಣೆಯಾಗಿ ಗಾಂಧೀಜಿಯ ಪುತ್ಥಳಿ ಇಲ್ಲಿದೆ. ನಿಜಲಿಂಗಪ್ಪನವರು ದೇವಾಲಯದ ಎರಡನೇ ಹಂತದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಾಗ ದೇವಾಲಯದ ನೆಲಹಾಸುಗೆಗೆ ಬೇಕಾದ ಎಲ್ಲಾ ಟೈಲ್ಸ್ ಗಳನ್ನು ಮುರುಡೇಶ್ವರ ಸಿರಾಮಿಕ್ಸ್ ಮಾಲಿಕ ಪ್ರಸಿದ್ಧ ಉದ್ಯಮಿ ಆರ್.ಎನ್.ಶೆಟ್ಟಿಯವರಿಂದ ಉಚಿತವಾಗಿ ಕೊಡಿಸಿದ್ದರು.

ಲೇಖಕರು :
ಡಾ.ಪಿ.ಯಶೋದ ರಾಜಶೇಖರಪ್ಪ
ಕನ್ನಡ ಸಹ ಪ್ರಾಧ್ಯಾಪಕರು (ನಿವೃತ್ತ)
ಚಿತ್ರದುರ್ಗ. ಮೊ.ನಂ: 8095503141

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

error: Content is protected !!