in ,

ನಮ್ಮೂರು ನಮ್ಮ ಹೆಮ್ಮೆ : ಹೊಳಲ್ಕೆರೆ ತಾಲ್ಲೂಕು ಅರೇಹಳ್ಳಿ ಗ್ರಾಮ ದರ್ಶನ

suddione whatsapp group join

 

ವಿಶೇಷ ಲೇಖನ : ಡಾ.ಸಂತೋಷ. ಕೆ.ವಿ.

ಹೊಳಲ್ಕೆರೆ, ಮೊ : 9342466936

ಹೊಳಲ್ಕೆರೆ ತಾಲೂಕು ಕಸಬಾ ಹೋಬಳಿಯ ಅರೇಹಳ್ಳಿ  ಗ್ರಾಮದ ಪರಿಚಯ.

ಅರೇಹಳ್ಳಿ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಹೊಳಲ್ಕೆರೆಯಿಂದ 5
ಕಿಲೋಮೀಟರ್ ದೂರ ಪಶ್ಚಿಮಕ್ಕೆ,
ಹೊಳಲ್ಕೆರೆ- ಚನ್ನಗಿರಿ ರಾಷ್ಟ್ರೀಯ ಹೆದ್ದಾರಿ 13 ರಲ್ಲಿದೆ. ಹೊಳಲ್ಕೆರೆ ಪಟ್ಟಣದಿಂದ ಕೂಗಳತೆಯ ದೂರದಲ್ಲಿರುವ ಅರೇಹಳ್ಳಿಯು ಮುಂದಿನ ಕೆಲ ವರ್ಷಗಳಲ್ಲಿ ಹೊಳಲ್ಕೆರೆ ಪಟ್ಟಣದ ಹೊರವಲಯದ ಬಡಾವಣೆ ಆಗಲಿದೆ.

ಹೆಸರಿನ ಮೂಲ: ಅರೆ ಎಂದರೆ ಕಣಶಿಲೆಗಳ ನೆಲ ಅಥವಾ ಬಂಡೆಗಳಿರುವ ಪ್ರದೇಶವೆಂಬ ಅರ್ಥವಿದೆ. ಗ್ರಾಮದ ಹಳೇಗ್ರಾಮ (ಹಳೆಯೂರು/ ಹಾಳೂರು) ನಿವೇಶನವು ಗ್ರಾಮದಿಂದ ದಕ್ಷಿಣಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿದ್ದು, ಅದು ಕಣಶಿಲೆಗಳ ಬೃಹತ್ ಬಂಡೆಗಳಿರುವ ನೆಲವಾಗಿದೆ.ಗ್ರಾಮಕ್ಕೆ ಹೆಸರು ಬರಲು ಇಲ್ಲಿನ ನೆಲದ ಭೌಗೋಳಿಕ ಲಕ್ಷಣಗಳೇ ಕಾರಣವಾಗಿದೆ.
ಹಾಗಾಗಿ ಅರೇಹಳ್ಳಿ ಎಂದರೆ ಬಂಡೆಗಳಿರುವ ಊರು ಎಂಬ ಅರ್ಥವಿದೆ.
ಅಲ್ಲಿಂದ ಈಗಿರುವ ಜಾಗಕ್ಕೆ ಗ್ರಾಮವು ಸ್ಥಳಾಂತರಗೊಂಡಿದೆ.
ಹಳೆ ಊರು ನಿವೇಶನದಲ್ಲಿ ಇಂದಿಗೂ ಭಗ್ನಾವಶೇಷಗಳು ಕಂಡುಬರುತ್ತವೆ.
ಗ್ರಾಮವು ಐತಿಹಾಸಿಕ ಸ್ಥಳವಾಗಿದ್ದರೂ ಈಗಿನ  ಗ್ರಾಮದಲ್ಲಿ ಯಾವುದೇ ಐತಿಹಾಸಿಕ ಕುರುಹುಗಳು ಕಂಡು ಬರುವುದಿಲ್ಲ.

ಅರೇಹಳ್ಳಿ ಗ್ರಾಮವು  2 ಭಾಗದಲ್ಲಿದೆ. ಅರೇಹಳ್ಳಿಹಟ್ಟಿ ಹಾಗೂ ಹೊಳಲ್ಕೆರೆ ರೈಲ್ವೇ ನಿಲ್ದಾಣ(ಅರೇಹಳ್ಳಿ ). ಅರೇಹಳ್ಳಿಹಟ್ಟಿಯು ಮೂಲ ಗ್ರಾಮವಾಗಿದ್ದು, ರೈಲ್ವೆ ನಿಲ್ದಾಣದ ಅಕ್ಕಪಕ್ಕದಲ್ಲಿ ನಿರ್ಮಾಣಗೊಂಡ ಜನವಸತಿ ಪ್ರದೇಶವು ಹೊಳಲ್ಕೆರೆ ರೈಲು ನಿಲ್ದಾಣ /ಅರೇಹಳ್ಳಿಯಾಗಿದೆ. ಇದನ್ನು ಸಂಕ್ಷಿಪ್ತವಾಗಿ ( ಊರಿನ ಹೆಸರನ್ನೇ )ಸ್ಟೇಷನ್ ಎನ್ನಲಾಗುತ್ತದೆ. ಅರೇಹಳ್ಳಿ ಹೆಸರಿನ ಗ್ರಾಮಗಳು ಕರ್ನಾಟಕ ರಾಜ್ಯದಲ್ಲಿ ಮೂವತ್ತಕ್ಕೂ ಅಧಿಕವಾಗಿವೆ.

1926 ರಲ್ಲಿ ಈ ಗ್ರಾಮಕ್ಕೆ ಬೀರೂರು -ಹುಬ್ಬಳ್ಳಿ ರೈಲ್ವೆ ಮಾರ್ಗ  ನಿರ್ಮಾಣ ಮಾಡಲಾಯಿತು.
ಇಲ್ಲಿನ ನಿಲ್ದಾಣದಿಂದ ಚಿತ್ರದುರ್ಗ,ಬೆಂಗಳೂರು,
ಹುಬ್ಬಳ್ಳಿಗೆ ನೇರ ರೈಲ್ವೆ ಸಂಪರ್ಕವಿದ್ದು, ಸಾವಿರಾರು ಪ್ರಯಾಣಿಕರಿಗೆ ಪ್ರತಿನಿತ್ಯ ಇಲ್ಲಿಂದ ತೆರಳುತ್ತಾರೆ. ಇದೀಗ ರೈಲ್ವೆ ನಿಲ್ದಾಣವನ್ನು ವಿಸ್ತಾರಗೊಳಿಸಿದ್ದು ನೂತನ ರೈಲ್ವೆ ನಿಲ್ದಾಣ ನಿರ್ಮಿಸಲಾಗಿದೆ.
ಗ್ರಾಮದಲ್ಲಿ ಉತ್ತಮ ರಸ್ತೆ ಸಾರಿಗೆ ಕೂಡ ಲಭ್ಯವಿದ್ದು, ಚನ್ನಗಿರಿ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ ಮಂಗಳೂರಿಗೆ ಗ್ರಾಮದ ಮೂಲಕ  ರಾಷ್ಟ್ರೀಯ ಹೆದ್ದಾರಿ 13 ಸಾಗುತ್ತದೆ.

ಪ್ರತಿವರ್ಷ ಮುಂಗಾರಿನ ಪೂರ್ವದಲ್ಲಿ ಗ್ರಾಮದ ಪ್ರತಿ ಮನೆಯ ಒಬ್ಬ ಸದಸ್ಯರು ಜೊತೆಯಾಗಿ ಚನ್ನಗಿರಿ ತಾಲ್ಲೂಕು ಜೋಳದಹಾಳು ಅಮ್ಮನಗುಡ್ಡಕ್ಕೆ ತೆರಳಿ ವಿಶೇಷ ಪೂಜೆ,ಪ್ರಾರ್ಥನೆ ಮಾಡಿಕೊಂಡು ಬಂದ ನಂತರವಷ್ಟೇ ಇಲ್ಲಿ ಮಳೆ ಬರುವುದೆಂಬ ಪ್ರತೀತಿ ಇದೆ. ಈ ಆಚರಣೆಯನ್ನು ಪ್ರತಿವರ್ಷ ತಪ್ಪದೇ ನಡೆಸಿಕೊಂಡು ಬರಲಾಗುತ್ತದೆ.

ಚಿತ್ರದುರ್ಗ ಸಂಸ್ಥಾನ ಪತನವಾಗಿ ಮದಕರಿನಾಯಕ ಹಾಗೂ ಆತನ ಅಣ್ಣ ಹಿರೇಮದಕರಿ ನಾಯಕನನ್ನು  ಹೈದರಾಲಿಯು ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆದೊಯ್ಯುತ್ತಾನೆ.
ನಂತರ ಅಲ್ಲಿ ಮದಕರಿನಾಯಕನು ಸಾವಿಗೀಡಾಗಿ, ಟಿಪ್ಪು ಸುಲ್ತಾನ್ ಅಧಿಕಾರಕ್ಕೆ ಬಂದು ಆತನೂ ಕೂಡ ಬ್ರಿಟಿಷರಿಂದ ಹತನಾಗಿ ಆಡಳಿತವು ಬ್ರಿಟಿಷ್ ಅಧಿಕಾರಿಗಳ ಕೈಗೆ ಬಂದಾಗ ಅಣ್ಣನಾದ ಹಿರೇಮದಕರಿನಾಯಕನನ್ನು ಮೈಸೂರಿನ ದಿವಾನರಾದ ಪೂರ್ಣಯ್ಯನವರು ಅಧಿಕಾರ ವಾಪಸ್ಸು ಕೊಡದೆ ಪಿಂಚಣಿ ಗೊತ್ತು ಮಾಡಿ ವಾಪಸ್ ಕಳಿಸುತ್ತಾರೆ. ಅಲ್ಲಿಂದ ವಾಪಸ್ ಬಂದ
ಹಿರೇಮದಕರಿ ನಾಯಕನು ಈ ಗ್ರಾಮದಲ್ಲಿ ಕೆಲವು ಕಾಲವಿದ್ದು,ನಂತರ ಚಳ್ಳಕೆರೆ ತಾಲ್ಲೂಕು ದೊಡ್ಡೇರಿಗೆ ಹೋಗಿ ನೆಲೆ ನಿಂತು ನಿಧನನಾಗುತ್ತಾನೆ.
ಇಂದಿಗೂ ಆತನ ವಂಶಸ್ಥರು ಇಲ್ಲಿ ವಾಸವಾಗಿದ್ದಾರೆ.

ಗುಂಡಿಮಡು, ಪುಣಜೂರು, ಮಾಳೇನಹಳ್ಳಿ
..  ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :

1. ಆಂಜನೇಯ ಸ್ವಾಮಿ ದೇವಾಲಯ:
ಗ್ರಾಮದಿಂದ ಗುಂಡಿಮಡುವಿಗೆ ಹೋಗುವ ರಸ್ತೆಯಲ್ಲಿ ಅರ್ಧ ಕಿಲೋಮೀಟರ್ ದೂರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ   ದೇವಾಲಯವು ದಕ್ಷಿಣಾಭಿಮುಖವಾಗಿದ್ದು ,
ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಗರ್ಭಗೃಹ, ಅಂತರಾಳಗಳಿರುವ ದೇವಾಲಯವಿದು.
ಗರ್ಭಗೃಹದಲ್ಲಿ 16-17 ನೇ ಶತಮಾನದ ಪಾಳೆಯಗಾರರ ಕಾಲದ ಆಂಜನೇಯ ಶಿಲ್ಪವಿದೆ.
ಈ  ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ.
ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ  ನಡೆಯುತ್ತದೆ. ಈ ಜಾಗವು ಹಿಂದಿನ ಹಳೆಯ ಊರು ನಿವೇಶನವಾಗಿದ್ದು ಇಲ್ಲಿ ಈಗ ಜನವಸತಿ ಇಲ್ಲವಾಗಿದೆ. ಹಿಂದೆ ಇಲ್ಲೊಂದು  ಗ್ರಾಮವಿದ್ದ ಬಗ್ಗೆ ತಿಳಿಸುತ್ತದೆ.ಆದರೆ ಯಾವ ಗ್ರಾಮ ಇಲ್ಲಿ ಇತ್ತು ಎಂಬ ಮಾಹಿತಿ ಇರುವುದಿಲ್ಲ.

2. ಶ್ರೀರಾಮ ಮಂದಿರ:


ಗ್ರಾಮದ ರೈಲ್ವೆ ನಿಲ್ದಾಣದ ರಸ್ತೆಯ ಲ್ಲಿರುವ ಶ್ರೀರಾಮ ಮಂದಿರವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ 20 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
ಕಳೆದ ದಶಕದಲ್ಲಿ ಈ ದೇವಸ್ಥಾನವನ್ನು ಪುನರ್ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಶ್ರೀರಾಮಚಂದ್ರ,ಸೀತಾಮಾತೆ, ಲಕ್ಷ್ಮಣರ ಶಿಲ್ಪಗಳಿದ್ದು ಪೂಜಿಸಲಾಗುತ್ತದೆ.
ಪ್ರತಿವರ್ಷ ಶ್ರೀರಾಮನವಮಿಯಂದು ಇಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಜರುಗುತ್ತದೆ.

3. ಹೊಸಮ್ಮ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಗ್ರಾಮದೇವತೆ  ಹೊಸಮ್ಮ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ಹಿಂದೆ ಶಿಥಿಲವಾದ ಮಂದಿರವನ್ನು ತೆಗೆದು 2007 ರಲ್ಲಿ ನೂತನವಾಗಿ ನಿರ್ಮಿಸಲಾಗಿದೆ.
ಈ ದೇವಾಲಯದ ಬಳಿಯಲ್ಲಿರುವ ಕರಿಗಲ್ಲಿಗೆ ಮಳೆ ಬಾರದಿದ್ದಾಗ ಹತ್ತಿರದ ಬಾವಿಯಿಂದ  101 ಬಿಂದಿಗೆ ನೀರನ್ನು ಜಲಾಭಿಷೇಕ ಮಾಡುವ ಪದ್ಧತಿ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತದೆ. ಇದರಿಂದ ಮಳೆಯು ಸಮೃದ್ಧವಾಗಿ ಬರುತ್ತದೆ ಎಂಬ ನಂಬಿಕೆ ಇದೆ.

4. ದುರ್ಗಾಪರಮೇಶ್ವರಿ  ದೇವಾಲಯ:

ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀದುರ್ಗಾಪರಮೇಶ್ವರಿ ದೇವಾಲಯ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು,
ಪೂರ್ವಾಭಿಮುಖವಾಗಿದೆ.
ಗರ್ಭಗೃಹದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ.

5.  ಗಾಮಜ್ಜಿ ದೇವಸ್ಥಾನ:
ಗ್ರಾಮದ ಅರೇಹಳ್ಳಿಹಟ್ಟಿಯ  ರಸ್ತೆಯ ಬಳಿಯಲ್ಲಿರುವ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು,
ಪೂರ್ವಾಭಿಮುಖವಾಗಿದೆ.
ಗರ್ಭಗೃಹದಲ್ಲಿ ಗಾಮಜ್ಜಿ ದೇವಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ.

6. ಕುಕ್ಕುವಾಡೇಶ್ವರಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಕುಕ್ವಾಡೇಶ್ವರಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಪೂರ್ವಾಭಿಮುಖವಾಗಿದೆ.
ಗರ್ಭಗೃಹದಲ್ಲಿ ಕುಕ್ಕುವಾಡೇಶ್ವರಿ ದೇವಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ.
ಇದರ ಜೊತೆಯಲ್ಲಿ ಗ್ರಾಮದಲ್ಲಿ ಶ್ರೀ ಕೊಲ್ಲಾಪುರದಮ್ಮ, ಓಬಳ ನರಸಿಂಹ ಸ್ವಾಮಿ, ಪ್ರೌಢಶಾಲೆಯ ಬಳಿಯಲ್ಲಿ ಗಣಪತಿ ದೇವಸ್ಥಾನ, ಚೌಡೇಶ್ವರಿ ದೇವಿಯ  ದೇವಾಲಯಗಳಿವೆ.

7.ಬನಶಂಕರಿ ದೇವಸ್ಥಾನ:
ಗ್ರಾಮದಿಂದ ಒಂದು ಕಿಲೋಮೀಟರ್ ದೂರ ಪಶ್ಚಿಮಕ್ಕೆ ಮಾಳೇನಹಳ್ಳಿ ರಸ್ತೆಯಲ್ಲಿ ಅರೇಹಳ್ಳಿ ಕಾವಲು ಪ್ರದೇಶದ ಬಳಿಯಲ್ಲಿರುವ ಬನಶಂಕರಿದೇವಿ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿದ್ದು, ಪೂರ್ವಾಭಿಮುಖವಾಗಿದೆ.  2012 ರಲ್ಲಿ ಇದಕ್ಕೆ ನೂತನ ಸಭಾಮಂಟಪವನ್ನು ನಿರ್ಮಿಸಲಾಗಿದೆ. ಗರ್ಭಗೃಹ,ಸಭಾಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ಬನಶಂಕರಿ ದೇವಿಯ ಶಿಲ್ಪವಿದ್ದು ಪೂಜಿಸಲಾಗುತ್ತದೆ. ಈ ದೇವಿಯ ಜಾತ್ರೆಯು ಪ್ರತಿ ವರ್ಷ ಜನವರಿ ತಿಂಗಳ ಬನದಹುಣ್ಣಿಮೆಯಂದು ವಿಜೃಂಭಣೆಯಿಂದ ನಡೆಯುತ್ತದೆ. ದೇವಾಲಯದ ಎದುರು ಭಾಗದಲ್ಲಿ ಕಟ್ಟೆ ಇದ್ದು ಇದರಲ್ಲಿ ಗಜಲಕ್ಷ್ಮಿಯ ಶಿಲ್ಪ ಹಾಗೂ ಭಕ್ತ ದಂಪತಿಗಳ ಉಬ್ಬುಶಿಲ್ಪವಿದೆ. ಈ ದೇವಾಲಯದ ಎದುರು ದಕ್ಷಿಣಭಾಗದಲ್ಲಿ ಚೌಟಿ ಹಳ್ಳವಿದ್ದು, ಮುಂದೆ ರೈಲ್ವೆ ನಿಲ್ದಾಣದ ಬಳಿಯಲ್ಲಿ ಹರಿದು ಆಂಜನೇಯ ದೇವಾಲಯದ ಹತ್ತಿರ ಸಾಗಿ ಹಿರೇಹಳ್ಳದ ಮೂಲಕ ಸೂಳೆಕೆರೆಗೆ ತಲುಪುತ್ತದೆ.

ಪರಪ್ಪ ಸ್ವಾಮಿ ಮಠ:
ಅರೇಹಳ್ಳಿಹಟ್ಟಿಯ ರಸ್ತೆಯ ಭಾಗದಲ್ಲಿ  ಪರಪ್ಪ ಸ್ವಾಮಿ ಮಠವಿದ್ದು, ಪ್ರತಿದಿನ/ ಆಗಾಗ ಭಕ್ತರಿಂದ  ಭಜನೆ, ಪ್ರಾರ್ಥನೆ ನಡೆಸಲಾಗುತ್ತದೆ.

ಜಾತ್ರೆಗಳು:
ಪ್ರತಿ 5-7 ವರ್ಷಕ್ಕೊಮ್ಮೆ ದೊಡ್ಡಮಾರಮ್ಮ ದೇವಿಯ ಜಾತ್ರೆ ನಡೆಸಲಾಗುತ್ತದೆ.
ಇದರ ಜೊತೆಯಲ್ಲಿ ಪ್ರತಿವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ಗೌರಸಂದ್ರ ಮಾರಮ್ಮ ಜಾತ್ರೆಯನ್ನು ನಡೆಸಲಾಗುತ್ತದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ 12 ರಾಶಿಯವರ ಇಷ್ಟಪಟ್ಟವರ ಜೊತೆ ಮದುವೆ..!

ಆರ್‌ಎಸ್‌ಎಸ್ ಸಂಸ್ಥಾಪನಾ ದಿನಕ್ಕೆ ಬಿಎಸ್‌ವೈ ಶುಭಾಶಯ