ಮೈಸೂರು: ನಾಡಹಬ್ಬ ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹಬ್ಬಕ್ಕಾಗಿ ತಾಲೀಮು ಶುರುವಾಗಿದೆ. ಅದಕ್ಕೆಂದೆ ಕಾಡಿನಿಂದ ಆನೆಗಳ ಹಿಂಡು ನಾಡಿಗೆ ಹೊರಟಿವೆ. ಕ್ಯಾಪ್ಟನ್ ಅರ್ಜುನ ತನ್ನ ಟೀಂ ಕರೆದುಕೊಂಡು ಮೈಸೂರಿಗೆ ಹೊರಟಿದ್ದಾನೆ. ನಾಳೆ ಗಜಪಡೆಯ ತಾಲೀಮು ನಡೆಯಲಿದ್ದು, ಈ ತಾಲೀಮಿನಲ್ಲಿ ಅರ್ಜುನ ಪಾಲ್ಗೊಳ್ಳಲಿದ್ದಾನೆ. ಹುಣಸೂರು ತಾಲೂಕಿನ ವೀರಹೊಸಹಳ್ಳಿಯಲ್ಲಿ ಗಜಪಡೆಯ ತಾಲೀಮು ಆರಂಭವಾಗಲಿದೆ.
ಆನೆಗಳ ಹಿಂಡು ಎರಡು ತಂಡವಾಗಿ ಬರಲಿದೆ. ಅದರಲ್ಲಿ ನಾಳೆ ಮೊದಲ ತಂಡದ ಆಗಮನವಾಗಲಿದೆ. ಅದರಲ್ಲಿ ಒಂಭತ್ತು ಆನೆಗಳಿವೆ. ಅರ್ಜುನ ಕ್ಯಾಪ್ಟನ್ ಆಗಿದ್ದಾನೆ. ಎರಡನೇ ತಂಡದಲ್ಲಿ ಐದು ಆನೆಗಳಿರಲಿವೆ. ಜಂಬೂ ಸವರಿಯಲ್ಲಿ ಒಟ್ಟು ಹದಿನಾಲ್ಕು ಅನೆಗಳು ಭಾಗಿಯಾಗಲಿವೆ.
ಆಗಸ್ಟ್ ಹತ್ತರಂದು ಆನೆಗಳನ್ನು ಅರಮನೆ ಆವರಣದಲ್ಲಿ ಸ್ವಾಗತ ಮಾಡಲಾಗುತ್ತದೆ. ಅದಕ್ಕೂ ಮುನ್ನ ಆನೆಗಳಿಗೆ ಎರಡು ದಿನ ವಿಶ್ರಾಂತಿ ನೀಡಲಿದ್ದಾರೆ. ಅರಣ್ಯ ಇಲಾಖೆಯ ಆವರಣದಲ್ಲಿ ಆನೆಗಳಿಗೆ ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಗುತ್ತದೆ. ನಂತರ ತಾಲೀಮು ಆರಂಭವಾಗಲಿದ್ದು, ದಸರಾ ಉತ್ಸವಕ್ಕೆ ಒಂದೊಂದೆ ತಯಾರಿ ನಡೆಯಲಿದೆ.