ಸುರಕ್ಷಿತ ಗರ್ಭಪಾತದಿಂದ ತಾಯಿ ಮರಣ ತಪ್ಪಿಸಬಹುದು : ಡಿಹೆಚ್‍ಓ ಡಾ.ಆರ್.ರಂಗನಾಥ್

1 Min Read

ಚಿತ್ರದುರ್ಗ,(ಸೆಪ್ಟಂಬರ್. 08) : ಸುರಕ್ಷಿತ ಗರ್ಭಪಾತದಿಂದ ತಾಯಿ ಮರಣ ತಪ್ಪಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಆರ್. ರಂಗನಾಥ್ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳವರ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಖಾಸಗಿ, ಸರ್ಕಾರಿ ಹಾಗೂ ಎಂಪೇನಾಲ್ ಆಸ್ಪತ್ರೆಗಳ ಪ್ರಸೂತಿ ತಜ್ಞರು, ಶುಶ್ರೂಷಕ ಅಧಿಕಾರಿಗಳಿಗೆ ಸುರಕ್ಷಿತ ವೈದ್ಯಕೀಯ ಗರ್ಭಪಾತ ನಿರ್ವಹಣೆ ತಿದ್ದುಪಡಿ ಕಾಯ್ದೆ ಬಗ್ಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶೇಷ ಸಂದರ್ಭಗಳಲ್ಲಿ ಗರ್ಭಪಾತ ಮಾಡುವುದರಿಂದ ಶೇಕಡ 8ರಷ್ಟು ತಾಯಿ ಮರಣ ಸಂಭವಿಸುತ್ತಿದ್ದು, ಇದನ್ನು ಸೊನ್ನೆಗೆ ತರುವ ನಿಟ್ಟಿನಲ್ಲಿ ಪ್ರಸೂತಿ ತಜ್ಞರು ಹಾಗೂ ಸಿಬ್ಬಂದಿಗಳು ಶ್ರಮವಹಿಸಬೇಕು. ತರಬೇತಿ ಪಡೆದ  ನುರಿತ  ವೈದ್ಯರಿಂದ ಗರ್ಭಪಾತ ಮಾಡುವುದು ಒಳಿತು, ಶೇಕಡ ಅರ್ಧದಷ್ಟು ಸುರಕ್ಷಿತವಲ್ಲದ ಗರ್ಭಪಾತಗಳಾಗುತ್ತಿದ್ದು ಅನಿವಾರ್ಯ ಮತ್ತು ಅವಶ್ಯಕ ಸಂದರ್ಭದಲ್ಲಿ ಸುರಕ್ಷಿತ ಗರ್ಭಪಾತ ಮಾಡಲು ಈ ತರಬೇತಿ ಅವಶ್ಯಕವಾಗಿದೆ, ಕಾನೂನಿನ ಪ್ರಕಾರ ವಿಶೇಷ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೆ 20 ವಾರದ ತನಕ ಗರ್ಭಪಾತ ಮಾಡಲು ಅವಕಾಶವಿದ್ದು ಇದೀಗ 24 ವಾರಗಳವರೆಗೆ ಗರ್ಭಪಾತ ಮಾಡುವಂತೆ ತಿದ್ದುಪಡಿ ಮಾಡಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ರೇಣುಪ್ರಸಾದ್, ತಜ್ಞ ವೈದ್ಯರಾದ ಡಾ.ತೋಯಿಜಾಕ್ಷಿ ಬಾಯಿ, ಡಾ.ಲತಾ, ಡಾ.ಮಲ್ಲಪ್ಪ, ಹಿರಿಯ ಸಂಯೋಜಕ ದೊಡ್ಡನಗೌಡ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *