ಪುರುಷರು ಎಂದಿಗೂ ಮಹಿಳಾ ವಿರೋಧಿಗಳಲ್ಲ : ಸುನಿತಾ ಮಲ್ಲಿಕಾರ್ಜುನ್

suddionenews
2 Min Read

ಚಿತ್ರದುರ್ಗ : ಹೆಣ್ಣು ಮಕ್ಕಳು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದಾಗದಿದ್ದರೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವುದರಲ್ಲಿ ಅರ್ಥವೇ ಇರುವುದಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಸುನಿತಾ ಮಲ್ಲಿಕಾರ್ಜುನ್ ಹೇಳಿದರು.

ಮಹಿಳಾ ಸೇವಾ ಸಮಾಜ, ಜಾನ್ಹವಿ ಗ್ರೂಪ್ ಆಫ್ ಇವೆಂಟ್ಸ್, ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‍ಮಿಲ್ ಸಿಟಿ ಇವುಗಳ ಸಹಯೋಗದೊಂದಿಗೆ ಮಹಿಳಾ ಸೇವಾ ಸಮಾಜದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪುರುಷರ ದಿನಾಚರಣೆಯನ್ನು ಎಲ್ಲಿಯೂ ಆಚರಿಸುತ್ತಿಲ್ಲ. ಆದರೆ ಮಹಿಳಾ ದಿನಾಚರಣೆ ಅಗತ್ಯವೇ ಎನ್ನುವುದನ್ನು ಮಹಿಳೆಯರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಿಳೆಗೆ ನಿಜವಾಗಿಯೂ ಮಹಿಳೆಯೇ ಶತ್ರು.

ಪುರುಷರು ಎಂದಿಗೂ ಮಹಿಳಾ ವಿರೋಧಿಗಳಲ್ಲ. ಎಲ್ಲಾ ರಂಗಗಳಲ್ಲಿಯೂ ಮಹಿಳೆಗೆ ಸಮಾನತೆಯಿದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಬಾಯಲ್ಲಿ ಮಾತ್ರ ಧ್ಯಾನ ಮಾಡಿ ಮನಸ್ಸಿನಲ್ಲಿ ಅಜ್ಞಾನ ತುಂಬಿಕೊಂಡಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಸುನಿತಾ ಮಲ್ಲಿಕಾರ್ಜುನ್ ಮೊದಲು ಮಹಿಳೆಯರು ತಮ್ಮಲ್ಲಿರುವ ವೈಮನಸ್ಸುಗಳನ್ನು ಬಿಡಬೇಕು ಎಂದು ಬುದ್ದಿಮಾತು ಹೇಳಿದರು.

ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷರುದ್ರಸ್ವಾಮಿ ಮಾತನಾಡಿ ಮಹಿಳಾ ಸೇವಾ ಸಮಾಜ ಹಿಂದಿನಿಂದಲೂ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಕೌಟುಂಬಿಕ ಸಮಸ್ಯೆ, ದೌರ್ಜನ್ಯ, ದಬ್ಬಾಳಿಕೆ, ವರದಕ್ಷಿಣೆ ಕಿರುಕುಳ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಹೊತ್ತು ನಮ್ಮ ಬಳಿ ಬರುವ ಮಹಿಳೆಯರನ್ನು ಉಚಿತವಾಗಿ ಕೌನ್ಸಿಲಿಂಗ್ ನಡೆಸಿ ಬುದ್ದಿಮಾತು ಹೇಳಿ ಕಳಿಸುತ್ತೇವೆ. ಇದರಿಂದ ಎಷ್ಟೊ ಕುಟುಂಬಗಳಲ್ಲಿ ಅನ್ಯೋನ್ಯತೆಯನ್ನು ಮೂಡಿಸಿದ ತೃಪ್ತಿ ನಮಗಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರೂ ಮಹಿಳೆ ಸಮಾನತೆಗಾಗಿ ಇನ್ನು ಹೋರಾಡಬೇಕಿದೆ. ಸಮಾನತೆ ಎನ್ನುವುದು ಮನೆಯಲ್ಲಿದ್ದರೆ ಸಿಗುವುದಲ್ಲ. ತನ್ನಲ್ಲಿರುವ ಎಲ್ಲಾ ಕೀಳರಿಮೆಯನ್ನು ತೊರೆದು ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬಂದು ಸರ್ಕಾರದಿಂದ ಸಿಗುವ ಅನೇಕ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಭಿಯಾಗುವ ಮೂಲಕ ಸಶಕ್ತಿಕರಣವಾಗಬೇಕೆಂದು ಕರೆ ನೀಡಿದರು.

ಅಮೇರಿಕಾದ ನ್ಯೂಯಾರ್ಕ್‍ನ ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಹಕ್ಕಿಗಾಗಿ 1908 ರಲ್ಲಿ ಚಳುವಳಿ ಆರಂಭಿಸಿದ್ದರ ಪರಿಣಾಮ ಪ್ರತಿ ವರ್ಷವೂ ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಹಿಳೆಯರು ಪರಸ್ಪರ ಸಹಕಾರದ ಮೂಲಕ ಅಭಿವೃದ್ದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‍ಮಿಲ್ ಸಿಟಿ ಅಧ್ಯಕ್ಷೆ ಲತಾ ಉಮೇಶ್ ಮಾತನಾಡಿ ಮಹಿಳಾ ಸೇವಾ ಸಮಾಜದ ಆಸ್ತಿಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಅನೇಕ ಹೋರಾಟಗಳನ್ನು ಮಾಡಬೇಕಾಯಿತು. ಮಹಿಳಾ ಸೇವಾ ಸಮಾಜದಲ್ಲಿನ ಮತ್ತೊಂದು ಗುಂಪು ಅಭಿವೃದ್ದಿಗೆ ಅನೇಕ ಅಡ್ಡಿ ಆತಂಕಗಳನ್ನುಂಟು ಮಾಡಿದಾಗ ಎದೆಗುಂದದೆ ಕಾನೂನೂ ಹೋರಾಟದ ಮೂಲಕ ಆಸ್ತಿಯನ್ನು ರಕ್ಷಿಸಿಕೊಳ್ಳಲಾಗಿದೆ. ಇದಕ್ಕೆ ಎಲ್ಲಾ ಮಹಿಳೆಯರ ಸಹಕಾರ ಅತ್ಯವಶ್ಯಕ ಎಂದು ವಿನಂತಿಸಿದರು.

ಜಾನ್ಹವಿ ಗ್ರೂಪ್ ಆಫ್ ಇವೆಂಟ್ಸ್‍ನ ಅಮೃತ ಸಂತೋಷ್ ಮಾತನಾಡಿದರು.
ನಾಗರತ್ನ ವಿಶ್ವನಾಥ್, ಭಾರತಿ ಸುರೇಶ್, ಅನ್ನಪೂರ್ಣ ಸಜ್ಜನ್, ರೂಪಜನಾರ್ಧನ್, ಮಾಳವಿಕ, ಮಹಾಂತಮ್ಮ ಜಯಪ್ಪ, ವರಲಕ್ಷ್ಮಿ ವೇದಿಕೆಯಲ್ಲಿದ್ದರು.
ಮಹಿಳಾ ಸೇವಾ ಸಮಾಜ, ಜಾನ್ಹವಿ ಗ್ರೂಪ್ ಆಫ್ ಇವೆಂಟ್ಸ್ ಹಾಗೂ ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‍ಮಿಲ್ ಸಿಟಿ ಸದಸ್ಯರುಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *