ಬೆಂಗಳೂರು: ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ನಿಲುವು ಗೊತ್ತಿರುವ ವಿಚಾರ,ಅವರು ರಾಜಕಾರಣವನ್ನು ಬೆರೆಸುತ್ತಾರೆ. ಮೇಕೆದಾಟು ಯೋಜನೆ ಮಾಡುವುದು ತಮಿಳುನಾಡು ಕೈಯಲ್ಲಿ ಇಲ್ಲ. ನಮ್ಮ ಕೈಯಲ್ಲಲ್ಲಿದೆ ನಮ್ಮ ನಿಲುವಿಗೆ ನಮ್ಮ ಸರಕಾರ ಬದ್ಧವಾಗಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಬಳ್ಳಾರಿಯಲ್ಲಿ ಎಸ್.ಕೆ.ಮೋದಿ ಇಂಟರ್ನ್ಯಾಷನಲ್ ಸ್ಕೂಲ್ ನೂತನ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೇಕೆದಾಟು ಯೋಜನೆ ವಿಚಾರವಾಗಿ ನಮ್ಮ ನಿಲುವು ಬದಲಾಗುವುದಿಲ್ಲ.ತಮಿಳುನಾಡಿಗೆ ಯಾವುದೇ ತೀರ್ಮಾನ ಮಾಡಲು ಅಧಿಕಾರ ಇಲ್ಲ, ಕಾನೂನಾತ್ಮಕ ಹೋರಾಟದಿಂದ ಮೇಕೆದಾಟು ಯೋಜನೆ ಹಾಗೆಯೇ ಆಗುತ್ತದೆ.ಆದ್ದರಿಂದ ಅದರ ಬಗ್ಗೆ ಮಾತನಾಡುವುದು ಅರ್ಥ ಇಲ್ಲ ಎಂದು ಅವರು ಹೇಳಿದರು.
ಇವತ್ತು ಕೋರ್ ಕಮಿಟಿ ಸಭೆ ಇದೆ. ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇವತ್ತು ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸುತ್ತೇವೆ ಎಂದರು.
ಈ ಭಾಗದಲ್ಲಿ ಬೃಹತ್ ಸ್ಟೀಲ್ ಕಂಪನಿಗಳು ಭೂಮಿ ಪಡೆದಿವೆ.ಆದರೆ ಹತ್ತು ವರ್ಷಗಳಿಂದ ಕಾರ್ಯಾಚರಣೆ ಆರಂಭಿಸಿಲ್ಲ;ಈ ಬಗ್ಗೆ ಪುನರ್ ಪರಿಶೀಲನೆ ಮಾಡುತ್ತೇವೆ,ಏನೇನು ಕಾರಣ ಇವೆ ನೋಡಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ತುಂಗಾಭದ್ರಾ ಜಲಾಶಯದ ನೀರು ವ್ಯರ್ಥವಾಗಿ ಸಮುದ್ರಸೇರದಂತೆ ಸಮಾನಂತರ ಜಲಾಶಯ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು ಬಳ್ಳಾರಿ ನಗರದ ನಿರಂತರ ಕುಡಿಯುವ ನೀರು ಯೋಜನೆಯ ದೋಷಗಳ ಬಗ್ಗೆ ತಿಳಿದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದರು.