ಮುಂಬೈ : ಪ್ರಮುಖ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ 2020 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೋವಿಡ್ -19 ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಹ, ಮಾರುತಿ ಸ್ವಿಫ್ಟ್ ಟಾಪ್ ಬ್ರಾಂಡ್ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.
2020 ರಲ್ಲಿ ಒಂದು ಲಕ್ಷದ ಅರವತ್ತು ಸಾವಿರಕ್ಕೂ
ಹೆಚ್ಚು ಕಾರುಗಳ ಮಾರಾಟದೊಂದಿಗೆ ಈ ದಾಖಲೆಯನ್ನು ಸಾಧಿಸಿದೆ. ಕಂಪನಿಯು ಅತ್ಯುನ್ನತ ತಾಂತ್ರಿಕ ವೈಶಿಷ್ಟ್ಯಗಳು, ಸರಿಯಾದ ಬೆಲೆ ಮತ್ತು ಆಕರ್ಷಕ ವಿನ್ಯಾಸಗಳೊಂದಿಗೆ ಯುವಕರನ್ನು ಹೆಚ್ಚು ಆಕರ್ಷಿಸಿದೆ ಎಂದು ಕಂಪನಿಯು ತಿಳಿಸಿದೆ. ಸ್ವಿಫ್ಟ್ ಗ್ರಾಹಕರಲ್ಲಿ 53 ಪ್ರತಿಶತ 35 ವರ್ಷದೊಳಗಿನವರು ಎಂದು ಕಂಪನಿ ತಿಳಿಸಿದೆ.
ಕಳೆದ ವರ್ಷ ಅಂದರೆ 2020 ರಲ್ಲಿ 1,60,700 ಸ್ವಿಫ್ಟ್ ಕಾರುಗಳ ಮಾರಾಟದೊಂದಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂದು ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಶನಿವಾರ ತಿಳಿಸಿದ್ದಾರೆ.
ಕಳೆದ 15 ವರ್ಷಗಳಿಂದ 2.3 ಮಿಲಿಯನ್ ಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಮೂಲಕ ದೇಶದಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್ಬ್ಯಾಕ್ ಆಗಿದೆ. 2005 ರಲ್ಲಿ ಪ್ರಾರಂಭವಾದ ಮಾರುತಿ ಸ್ವಿಫ್ಟ್ ಕಾರು ಈಗಾಗಲೇ 23 ಲಕ್ಷ ಯುನಿಟ್ ಗಳ ಮೈಲಿಗಲ್ಲನ್ನು ದಾಟಿದೆ. 2010 ರಲ್ಲಿ 5 ಲಕ್ಷ, 2013 ರಲ್ಲಿ 10 ಲಕ್ಷ ಮತ್ತು 2016 ರಲ್ಲಿ 15 ಲಕ್ಷ ದಾಟಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
