ನುಡಿದಂತೆ ನಡೆದ ಮಹಾತ್ಮ ಗಾಂಧೀಜಿ : ಎನ್.ರವಿಕುಮಾರ್

suddionenews
2 Min Read

ಬೆಂಗಳೂರು: ಪ್ರತಿಯೊಬ್ಬರು ಸತ್ಯವನ್ನೇ ನುಡಿಯಬೇಕು. ಸತ್ಯ ಮಾರ್ಗದಲ್ಲಿ ನಡೆಯಬೇಕು ಎಂಬ ಚಿಂತನೆ ಅವರದಾಗಿತ್ತು. ಸತ್ಯಕ್ಕೆ ಮತ್ತೊಂದು ಹೆಸರಿನಂತೆ ಮಹಾತ್ಮ ಗಾಂಧಿ ಅವರು ಬದುಕಿ ತೋರಿಸಿದರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಎನ್. ರವಿಕುಮಾರ್ ಅವರು ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ತಮ್ಮ ಮೇಲೆ ಎಷ್ಟೇ ಹಿಂಸೆ ನಡೆದರೂ ಬೇರೆಯವರಿಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯೆ ತೋರದೆ ಅಹಿಂಸಾ ಮನೋಭಾವವನ್ನು ಗಾಂಧೀಜಿ ಅವರು ಪಾಲಿಸಿದ್ದರು.

ಮಹಾತ್ಮ ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟಕ್ಕೆ ಬ್ರಿಟಿಷರು ಬೆದರಿದರು. ಲಾಠಿಯೇಟು ತಿಂದರೂ, ಬೂಟ್‍ನಿಂದ ಹೊಡೆದರೂ ಗಾಂಧೀಜಿ ಅವರು ಅಹಿಂಸಾ ತತ್ವವನ್ನು ಬಿಡಲಿಲ್ಲ.
ಸ್ವದೇಶಿ ಜೀವನಶೈಲಿ, ಸ್ವದೇಶಿ ಉತ್ಪನ್ನಗಳ ಬಳಕೆ ಮಾಡಲು ಗಾಂಧೀಜಿ ಹೇಳಿದ್ದರು. ಅದೇ ವಿಚಾರಗಳನ್ನು ಮಾರ್ಗದರ್ಶಕವಾಗಿ ಇಟ್ಟುಕೊಂಡು ವಿಶ್ವವಂದ್ಯ ನಾಯಕರಾದ ಹಾಗೂ ನಮ್ಮ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಮುನ್ನಡೆಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮಹಾತ್ಮ ಗಾಂಧಿ ಅವರ ಸ್ವದೇಶಿ ಜೀವನಶೈಲಿಯನ್ನು ಇಂದು ದೇಶದಾದ್ಯಂತ ನೆನಪಿಸಿಕೊಳ್ಳಲಾಗುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ಒಂದು ಸಮರ್ಥ ದಿಕ್ಕನ್ನು ತೋರಿಸಿದವರು. ಅಹಿಂಸಾತ್ಮಕ ಆಂದೋಲನ ಮತ್ತು ಸತ್ಯಾಗ್ರಹದ ಹೋರಾಟದ ಮೂಲಕ ಪ್ರಪಂಚವನ್ನು ಭಾರತದ ಕಡೆಗೆ ನೋಡುವಂತೆ ಮಾಡಿದ ವ್ಯಕ್ತಿ ಮಹಾತ್ಮ ಗಾಂಧಿ ಅವರು. ಭಾರತ ಇರುವವರೆಗೂ ಅವರ ದಾರಿ ಜೀವಂತವಾಗಿ ಇರುತ್ತದೆ ಎಂದು ತಿಳಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಘೋಷಣೆ ಮಾಡಿದ ಮಹಾನ್ ವ್ಯಕ್ತಿ. ಚೀನಾ ಜೊತೆಗಿನ ಯುದ್ಧದ ಸಂದರ್ಭದಲ್ಲಿ ಒಂದು ಹೊತ್ತಿನ ಊಟ ತ್ಯಜಿಸಲು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶವಾಸಿಗಳಿಗೆ ಕರೆ ನೀಡಿದ್ದರು. ಅದನ್ನು ಶಾಸ್ತ್ರಿ ಸೋಮವಾರ ಎಂದೇ ಕರೆಯಲಾಗುತ್ತದೆ ಎಂದರು.
ಬರಗಾಲದಿಂದ ದೇಶ ಸಂಕಷ್ಟ ಅನುಭವಿಸುತ್ತಿತ್ತು. ರೈತರ ಏಳಿಗೆಗಾಗಿ ಶಾಸ್ತ್ರೀಜಿ ಅವರು ಭೂಮಿಯ ನೀರಾವರಿ ಕಡೆಗೆ ಹೆಚ್ಚಿನ ಗಮನ ಕೊಟ್ಟಿದ್ದರು ಎಂದು ವಿವರಿಸಿದರು. ಜೈ ಜವಾನ್ ಮತ್ತು ಜೈ ಕಿಸಾನ್ ಎರಡೂ ಘೋಷಣೆಗಳು ಇಂದಿಗೂ ಪ್ರಚಲಿತ ಎಂದರು. ಮಹಾತ್ಮ ಗಾಂಧಿ ಮತ್ತು ಶಾಸ್ತ್ರೀಜಿ ಅವರ ವಿಚಾರಧಾರೆ ಮತ್ತು ಚಿಂತನೆಗಳು ಸದಾ ಅಮರ ಎಂದು ವಿಶ್ಲೇóಷಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ, ಶಾಸಕರಾದ ಪಿ. ರಾಜೀವ್ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು

Share This Article
Leave a Comment

Leave a Reply

Your email address will not be published. Required fields are marked *