ಚಿತ್ರದುರ್ಗದ ತಿಪ್ಪೇಸ್ವಾಮಿ ಸೇರಿದಂತೆ ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ

1 Min Read

ಸುದ್ದಿಒನ್, ಬೆಂಗಳೂರು, ಅಕ್ಟೋಬರ್. 06 : 2025ನೇ ಸಾಲಿನ ವಾಲ್ಮೀಕಿ ಪ್ರಶಸ್ತಿ ಪ್ರಕಟಗೊಂಡಿದೆ. ರಾಜ್ಯ ಸರ್ಕಾರ ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಐವರು ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅದರಲ್ಲಿ ಚಿತ್ರದುರ್ಗದ ತಿಪ್ಪೇಸ್ವಾಮಿ ಕೂಡ ಒಬ್ಬರು. ಹಾಗಾದ್ರೆ ಯಾರಿಗೆಲ್ಲಾ ವಾಲ್ಮೀಕಿ ಪ್ರಶಸ್ತಿ ಬಂದಿದೆ ಎಂಬ ಮಾಹಿತಿ ಇಲ್ಲಿದೆ.

ಅಕ್ಟೋಬರ್ 3ರಂದು ನಡೆದ ಶ್ರೀ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿಯು ಸಭೆ ನಡೆಸಿ, ಚರ್ಚಿಸಿ ಐವರನ್ನು ಆಯ್ಕೆ ಮಾಡಿದೆ. ಮಾಧ್ಯಮ ಕ್ಷೇತ್ರ, ರಂಗಭೂಮಿ ಕ್ಷೇತ್ರ, ಸಂಘಟನೆ, ಸಮಾಜ ಸೇವೆ ಹಾಗೂ ಸಾಮಾಜಿಕ ಕ್ಷೇತ್ರ ಸೇರಿ ಐದು ಕ್ಷೇತ್ರಗಳಿಂದ ತಲಾ ಒಬ್ಬ ಸಾಧಕರನ್ನ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಪ್ರತು ವರ್ಷ ಸೀಗೆ ಹುಣ್ಣಿಮೆ ದಿನದಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಹಾಗೂ ಡಿ.ದೇವರಾಜು ಅರಸು ಅವರ ಸ್ಮರಣಾರ್ಥ ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುತ್ತಿರುವ ಮಾದರಿಯಲ್ಲಿಯೇ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಂದು ಪರಿಶಿಷ್ಟ ವರ್ಗದ ಜನಾಂಗದ ಏಳಿಗೆಗಾಗಿ ಶ್ರಮಿಸಿದ ವ್ಯಕ್ತಿಗಳಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಒಟ್ಟು ಐದು ಸಾಧಕರಿಗೆ ಈ ಪ್ರಶಸ್ತಿ ಈ ಬಾರಿ ಲಭಿಸಿದೆ.

ಮಾಧ್ಯಮ ಕ್ಷೇತ್ರದಿಂದ ನಾಗರಾಜು ಗಾಣದ ಹುಣಸೆ ಅವರಿಗೆ ಪ್ರಶಸ್ತಿ ಲಭಿಸಿದ್ರೆ, ರಂಗಭೂಮಿ ಕ್ಷೇತ್ರದಿಂದ ಪಿ. ತಿಪ್ಪೇಸ್ವಾಮಿ ಅವರಿಗೆ ಲಭಿಸಿದೆ. ಇವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರು,  ಸಂಘಟನೆ ಕ್ಷೇತ್ರದಿಂದ ವಿರಾಜಪೇಟೆಯ ಚೆನ್ನಯ್ಯನ ಕೋಟೆಯವರಾದ ಜೆ.ಕೆ.ಮುತ್ತಮ್ಮ ಅವರು ಭಾಜನರಾಗಿದ್ದಾರೆ. ಸಮಾಜ ಸೇವೆಯಲ್ಲಿ ವಿಜಯಪುರದ ಮಳಸಿದ್ಧ ಲಕ್ಷ್ಮಣ ನಾಯಕೋಡಿ, ಸಾಮಾಜಿಕ ಕ್ಷೇತ್ರದಿಂದ ಹರಪನಹಳ್ಳಿ ಕೆ.ಉಚ್ಚಂಗಪ್ಪ ಆಯ್ಕೆಯಾಗಿದ್ದಾರೆ.

Share This Article