ಚಿತ್ರದುರ್ಗ : ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಪ್ರಯುಕ್ತ ಹತ್ತಿ ಬೆಳೆಯ ಬಿತ್ತನೆ ವಿಸ್ತೀರ್ಣ ಹೆಚ್ಚಾಗುವ ಸಂಭವವಿರುತ್ತದೆ. ಪ್ರಮುಖವಾಗಿ ಹಿರಿಯೂರು, ಮೊಳಕಾಲ್ಮೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳಲ್ಲಿ 5000 ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಹತ್ತಿ ಬೆಳೆಯು ಬಿತ್ತನೆಯಾಗಿರುತ್ತದೆ.
ಲಾಂಗ್‍ಸ್ಟೇಪಲ್/ಉದ್ದನೆ ಎಳೆಯ ವಿವಿಧ ಹೈಬ್ರಿಡ್ ಹತ್ತಿ ಬೆಳೆಯ ಬಿತ್ತನೆ ಅವಧಿ ಮುಗಿಯುವ ಹಂತದಲ್ಲಿದ್ದು, ಇಲಾಖೆಯ ಎಲ್ಲಾ ಪರಿವೀಕ್ಷಕರುಗಳು ಜಿಲ್ಲೆಯ ಎಲ್ಲಾ ಅಧಿಕೃತ ಬಿತ್ತನೆ ಬೀಜ ಮಾರಾಟ ಪರವಾನಗಿ ಹೊಂದಿದ ಕೃಷಿ ಪರಿಕರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿ ವಿವಿಧ ಕಂಪನಿಯ ಹತ್ತಿ ಬೀಜದ ಸಂಕರಣ ತಳಿಗಳು ಜಿಲ್ಲೆಯಲ್ಲಿ ಸಾಕಷ್ಟು ಲಭ್ಯವಿರುತ್ತದೆ. ಹಾಲಿ ಮಧ್ಯಮ ಎಳೆಯ ವಿವಿಧ ಹೈಬ್ರಿಡ್ ಹತ್ತಿ ಬೆಳೆಯ ಬಿತ್ತನೆ ಪ್ರಗತಿಯಲ್ಲಿರುತ್ತದೆ. ಆದ ಪ್ರಯುಕ್ತ ರೈತರು ಪ್ರತಿ ಹತ್ತಿ ಬೀಜದ ಪ್ಯಾಕೇಟ್‍ಗೆ ರೂ. 810/- ಗರಿಷ್ಟ ಮಾರಾಟ ದರವಿದ್ದು ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಖರೀದಿಸಿ ತಪ್ಪದೆ ರಸೀದಿಯನ್ನು ಪಡೆಯಲು ತಿಳಿಸಿದೆ.
ಮುಂದುವರೆದು, ಈಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಇವರು ಮುಂಗಾರು ಹಂಗಾಮಿನ ಪೂರ್ವ ಕೃಷಿ ಪರಿಕರಗಳ ಸಿದ್ದತೆ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಅಧಿಕೃತ ಬಿತ್ತನೆ ಬೀಜ ಮಾರಾಟಗಾರರು ವಿವಿಧ ಕಂಪನಿಯ ಹತ್ತಿ ಬೀಜಕ್ಕೆ ರೈತರಿಗೆ ಪ್ರತಿ ಪ್ಯಾಕೇಟ್‍ಗೆ ರೂ. 810/- ಗರಿಷ್ಟ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ, ಸಂಬಂಧಿಸಿದ ಬಿತ್ತನೆ ಬೀಜ ಮಾರಾಟಗಾರರ ಪರವಾನಗಿಯನ್ನು ಅಮಾನತ್ತಿನಲ್ಲಿರಿಸಿ, ಅಂತವರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿರುವುದನ್ನು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ರಮೇಶ್‍ಕುಮಾರ್ ಪಿ ಅವರು ತಿಳಿಸಿರುತ್ತಾರೆ.
ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ಬಿತ್ತನೆ ಬೀಜವನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ, ರೈತ ಬಾಂಧವರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಉಪ ಕೃಷಿ ನಿರ್ದೇಶಕರ ಕಛೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು.







GIPHY App Key not set. Please check settings