Connect with us

Hi, what are you looking for?

ಪ್ರಮುಖ ಸುದ್ದಿ

ವಾಲ್ಮೀಕಿ ಮತ್ತು ರಾಮಾಯಣ ನಮಗೆ ಅತ್ಯಗತ್ಯ ಯಾಕೆ?

ರಾಮಾಯಣ ಮತ್ತು ವಾಲ್ಮೀಕಿ ಖಾಸಗಿ ಎನ್ನುವಷ್ಟರ ಮಟ್ಟಿಗೆ ಜನರಲ್ಲಿ ಆರಾಧನಾಭಾವ ಮೂಡಿಸಿರುವುದು ಸಂತೋಷ ಮತ್ತು ಆತಂಕದ ವಿಷಯ.

ರಾಮಾಯಣವನ್ನು ಕುರಿತು ಮಾತನಾಡುವಾಗ ಪೂರ್ವಗ್ರಹದಿಂದ ಮಾತಾಡಿದರೂ ವಸ್ತುನಿಷ್ಠವಾಗಿ ಮಾತಾಡಿದರೂ ತಪ್ಪೆನ್ನುವಂತೆ ಖಾಸಗಿಯಾಗಿ ಭಾವಿಸಿಕೊಳ್ಳುತ್ತಿರುವುದು. ರಾಮಾಯಣದ ಬಗ್ಗೆ ಅತೀವ ಗೌರವವಿಟ್ಟುಕೊಂಡು ವಸ್ತುನಿಷ್ಠವಾಗಿ ಬರೆದ ಪೊಲಂಕಿ ರಾಮಮೂರ್ತಿಯವರು ಮೊದಲು ಈ ಆತಂಕ ವ್ಯಕ್ತಪಡಿಸಿದ್ದರು. ಆದುದರಿಂದಲೇ ಏನೋ ಓದುಗರಾದ ನಮಗೆ ಸಾಕಷ್ಟು ಪ್ರಾಮಾಣಿಕವಾಗಿ ಸಂವೇದಿಸುವುದು ಕಷ್ಟವಾಗಿದೆ.

ವಾಲ್ಮೀಕಿನಾದಶ್ವ ಜಗಾದ ಪದ್ಯಂ ಜಗ್ರಂಥ ಯತ್ನ ಚ್ಯವನೋ ಮಹರ್ಷಿಃ ಎನ್ನುವ ಶ್ಲೋಕ ಅಶ್ವಘೋಷನ ಬುದ್ಧಚರಿತೆಯಲ್ಲಿದೆ. ವಾಲ್ಮೀಕಿಯ ಪೂರ್ವಜನಾದ ಚ್ಯವನ ಬರೆಯಲಾಗದ ಕಾವ್ಯಗ್ರಂಥವನ್ನು ವಾಲ್ಮೀಕಿ ಬರೆದನೆಂದು ಉಲ್ಲೇಖಿಸಿದ್ದಾನೆ. ಈ ಮಾತು ಸೂಕ್ಷ್ಮವಾಗಿ ವಾಲ್ಮೀಕಿಯ ಹಿಂದಿನ ಪರಂಪರೆಯೂ ಮಹಾಕಾವ್ಯ ರಚಿಸುವಷ್ಟು ಶೈಕ್ಷಣಿಕ ವಿದ್ವತ್ತು ಹೊಂದಿದ್ದರೆಂದು ಸೂಚಿಸುತ್ತದೆ. ಚ್ಯವನ ರಾಮಾಯಣವನ್ನು ಬರೆದನಾದರೂ ವಾಲ್ಮೀಕಿಯಷ್ಟು ಯಶಸ್ವಿಯಾಗಲಿಲ್ಲವೆಂದೂ ಯೋಚಿಸುವಂತೆ ಮಾಡುತ್ತದೆ.

ಚ್ಯವನ ಬೇಡನಿಷಾದನಾಗಿದ್ದು ಆಜೀವಿಕಪಂಥದ ಅವಧೂತನಾಗಿ, ಬೌದ್ಧಮುನಿಯಾಗಿ ಭಗವಾನ್ ಎನ್ನುವಷ್ಟು ಪ್ರಸಿದ್ಧಿಯಾದವನು. ಈತನ ಕುಲದವನೇ ವಾಲ್ಮೀಕಿ. ವಾಲ್ಮೀಕಿಯ ರಾಮಾಯಣದಲ್ಲಿನ ರಾವಣ, ರಾಮ, ಸೀತೆ ಚಾರಿತ್ರಿಕ ವ್ಯಕ್ತಿಗಳಾಗಿರದಿದ್ದರೂ ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯವಾಗಿ ಒಂದು ಕಾಲಘಟ್ಟದ ಬದುಕನ್ನಂತೂ ದಾಖಲಿಸುತ್ತದೆ. ಹೀಗಾಗಿಯೇ ಲಿಂಗನೆಲೆ, ಜಾತಿನೆಲೆ ಮತ್ತು ವರ್ಗನೆಲೆಗಳು ಸಹಜವೆಂಬಂತೆಯೂ ವಿಭಾಗಿಸಲ್ಪಡುತ್ತವೆ.

ಕುಲಮೂಲದಲ್ಲಿ ಸೀತೆ ಮತ್ತು ಶ್ರೀರಾಮಚಂದ್ರ ಸೂರ್ಯವಂಶದವರಲ್ಲ; ಚಂದ್ರವಂಶದವರು. ಬೇಡರಲ್ಲಿ ಇಂದಿಗೂ ಉಪಜಾತಿಯಾಗಿರುವ ಸಾಕೇತಲಕುಲಕ್ಕೆ ಸೇರಿದವರು. ಬೇಡರವನಾದ ವಾಲ್ಮೀಕಿಯು ತನ್ನ ಸಮುದಾಯದ ವ್ಯಕ್ತಿಯ ಬದುಕಿನ ಸಾಂಸ್ಕೃತಿಕ ಆಯಾಮಗಳನ್ನು ದಾಖಲಿಸುತ್ತಾನೆ. ರಾಮಾಯಣದ ಕಾಲಕ್ಕಾಗಲೇ ಕೂಡುಕಟ್ಟು ಭದ್ರತೆಯ ನೆಲೆಗಳಿಗಾಗಿ ಚದುರಿದ ಸ್ಪಷ್ಟ ಲಕ್ಷಣಗಳು ಕಂಡುಬರುತ್ತವೆ. ರಾಮನಂತವರು ಅರಸೊತ್ತಿಗೆಯನ್ನು ದಕ್ಕಿಸಿಕೊಂಡರೂ ಆತನ ರಾಜ್ಯದಲ್ಲಿ ಭವ್ಯಮನೆಗಳೇನೂ ಇರಲಿಲ್ಲ.

ಮಣ್ಣಿನಿಂದ ಕಟ್ಟಲ್ಪಟ್ಟ ಮನೆಗಳು ಕಂಡುಬರುತ್ತಿದ್ದವೆಂದು ಎಚ್.ಡಿ.ಸಂಕಾಲಿಯಾ ಸ್ಪಷ್ಟಪಡಿಸಿದ್ದಾರೆ. ಲಕ್ಷ್ಮಣನೂ ಆದಿಶೇಷನ ಅವತಾರವೆನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ರಾವಣನೂ ಆಚರಣೆ ಮತ್ತು ನಡಾವಳಿಗಳ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಬೇಡರವನಾಗಿರುವ ಲಕ್ಷಣಗಳೂ ಕಾಣಿಸುತ್ತವೆ. ಸಿಂಹಲಾನ್ ಬರ್ಬರಾನ್ ಮ್ಲೇಚಾನ್ ಯೇ ಚ ಲಂಕಾಸಿವಾಸಿನಃ ಪಿ.ವಿ.ಕಾಣೆಯವರ ಧರ್ಮಶಾಸ್ತ್ರದ ಸಂಪುಟಗಳಲ್ಲಿ ಅನೇಕ ಕಡೆ ಈ ಶ್ಲೋಕ ದಾಖಲಾಗಿದೆ. ಧರ್ಮಶಾಸ್ತ್ರಗಳ ಪ್ರಕಾರವೂ ರಾವಣನು ಮ್ಲೇಚ ಅಥವ ಬೇಡರ ದೊರೆ.

ವಿಭಿನ್ನ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದ ಸಮುದಾಯಗಳು ನಾಗಾಕುಲಕ್ಕೆ ಸೇರಿದವುಗಳಾಗಿದ್ದವು. ಕುಲಚಿಹ್ನೆಗಳ ಆಧಾರದ ಮೇಲೆ ನಿರ್ಧರಿಸುವುದಾದರೆ ಲಕ್ಷ್ಮಣನೂ ದ್ರಾವಿಡೇತರನಾಗಿರದೆ ನಾಗವಂಶದವನೇ ಆಗಿದ್ದಾನೆ. ನಾಗನೇ ಲಕ್ಷ್ಮಣನಾಗಿ ಜನಿಸಿದ ಮತ್ತು ಕೊನೆಗೆ ನಾಗನಾಗಿ ಪಾತಾಳ ಸೇರಿಕೊಂಡನೆಂದು ರಾಮಾಯಣ ತಿಳಿಸುತ್ತದೆ.

ವಾಲ್ಮೀಕಿಯು ಹುತ್ತದ ಕುಲಚಿಹ್ನೆಯ ಪ್ರತೀಕವೆಂದರೆ ನಾಗವಂಶದವನೇ. ಬೇಡರಿಗೂ ನಾಗಗಳ ಸಂಬಂಧವನ್ನು ವಿಸ್ತೃತವಾಗಿ ಬರೆಯಬಹುದು. ನಾಗರದು ಜಲಸಂಸ್ಕೃತಿಯಾದ ಕಾರಣ ವಾಲ್ಮೀಕಿಯ ರಾಮಾಯಣವನ್ನು ಜಲಸಂಸ್ಕೃತಿಯ ಕಥನವಾಗಿಯೇ ಬರೆದಿದ್ದಾನೆ. ಬೇಡರು ನಾಗಗಳೆಂದು ನನ್ನ ಕೆಲವು ಸಂಶೋಧನಾ ಲೇಖನಗಳಲ್ಲಿ ಸ್ಪಷ್ಟಪಡಿಸಿದ್ದೇನೆ.

ಲಕ್ಷ್ಮಣ ಎನ್ನುವ ಹೆಸರಿನ ಸರ್ಪರಾಜ ಇದ್ದ ಎಂದರೆ ಆಶ್ಚರ್ಯವಾಗಬಹುದು. ಲಕ್ಷ್ಮಣನ ಮಕ್ಕಳು, ಭಾರತದ ವಾಯವ್ಯ ದಿಕ್ಕಿಗೆ ತೆರಳಿ ಈಗಿನ ಪಂಜಾಬು, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳಿರುವ ಪ್ರದೇಶದಲ್ಲಿ ರಾಜ್ಯ ಸ್ಥಾಪಿಸಿದರು. ಅವರ ವಂಶಸ್ಥರೇ ಮುಂದೆ ತಕ್ಷಶಿಲೆಯನ್ನು ಆಳಿದ ಪ್ರಸಿದ್ಧ ನಾಗಕುಲ ಕ್ಷತ್ರಿಯರು. ತಕ್ಷಕನ ಕುಲದವರಾದ್ದರಿಂದ, ನಂತರದಕಾಲದಲ್ಲಿ ಅವರನ್ನು ತಾಕಾರಜಪೂತರು ಎಂದು ಕರೆಯುತ್ತಿದ್ದರು. ಅವರೆಲ್ಲರೂ ಏಳನೆಯ ಶತಮಾನದ ನಂತರ ಮುಸ್ಲಿಮರಾಗಿ ಮತಾಂತರಗೊಂಡರು ಎಂದು ಡಾ.ಟಿ.ಎಸ್.ರಮಾನಂದರು ಅಭಿಪ್ರಾಯಪಡುತ್ತಾರೆ.

ಬೇಡನಾಯಕರಲ್ಲಿನ ಉಪಜಾತಿ ರಾಮೋಶಿಗಳು ರಾಮಸೀತೆಯರನ್ನು ತಮ್ಮ ಕುಲಜನರೆಂದು ಇಂದಿಗೂ ನಂಬಿ ಆಚರಣಾತ್ಮಕ ಕ್ರಿಯೆಗಳನ್ನು ಮಾಡುತ್ತಾರೆ. ಭರತನ ಸೋದರಮಾವನ ನಗರ ರಾಜಗೃಹ. ಅದು ನಾಗವಂಶಸ್ಥರ ನೆಲೆವೀಡಾಗಿದ್ದು ಗಿರಿವಜ್ರ ಎಂಬ ಹೆಸರಿದೆ. ಇದು ವಿಹಾರದ ಬೃಹದ್ರಥನ ವಂಶದ ಜರಾಸಂಧನ ರಾಜಧಾನಿಯಾಗಿತ್ತು.

ಮತ್ತೊಂದು ಸಂಗತಿಯೆಂದರೆ, ದಶರಥ ಬೇಟೆಗೆ ಹೋದಾಗ ಆತ ಬೇಡ ಮಹಿಳೆಯೊಂದಿಗೆ ಸಂಬಂಧ ಹೊಂದಿ ಶಾಂತ ಎಂಬ ಹೆಂಗೂಸಿನ ಜನನಕ್ಕೆ ಕಾರಣನಾಗುತ್ತಾನೆ. ಸ್ತ್ರೀ ಪರಂಪರೆಯಿಂದ ಲಕ್ಷಿಸಿದರೂ ಸಾಕೇತಪುರ ಬೇಡತಿ ಶಾಂತಳಿಗೆ ಸೇರಬೇಕಾಗುತ್ತದೆ. ಕೈಕೆ ಬೇಡ ಸಮುದಾಯಕ್ಕೆ ಸೇರಿದವಳು ಎಂಬುದನ್ನು ಪ್ರಸಿದ್ಧ ಸಮಾಜಶಾಸ್ರಜಿ.ಎಸ್.ಘುರ್ಯೆ ದಾಖಲಿಸಿದ್ದಾರೆ.

ಕೂಡುಕಟ್ಟಾಗಿದ್ದ ವರ್ಗರಹಿತ ಸಮಾಜವು ನಂತರದ ದಿನಮಾನಗಳಲ್ಲಿ ಪ್ರತ್ಯೇಕ ಅಸ್ತಿತ್ವ, ಆಸ್ತಿ ಭದ್ರತೆಗಾಗಿ ಕುಲಚಿಹ್ನೆಗಳನ್ನು ಸಾಂಕೇತಿಕವಾಗಿರಿಸಿಕೊಂಡು ಚದುರಿರುವುದನ್ನು ಅಲ್ಲಗಳೆಯಲಾಗದು. ರಾಮನ ಕುಲಮೂಲಕ್ಕೂ ರಾಮನ ಕೃತ್ಯಗಳ ಹಿನ್ನೆಲೆಗೂ ವೈರುಧ್ಯಗಳಿವೆ. ಮೂಲಕತೆಗಳಲ್ಲಿ ಈ ರೀತಿ ಇರಲಾರದು. ರಾಮನು ಶುದ್ಧಾಂಗವಾಗಿ ಆರ್ಯನಲ್ಲದಿರಬಹುದು, ಅವನು ಕಪ್ಪಾಗಿದ್ದನು. ಏನೇ ಆಗಲಿ ಕೆಲಕಾಲ ಹಾರುವರನ್ನು ವಿರೋಧಿಸಿ ಅವರಿಂದ ತೊಂದರೆ ಅನುಭವಿಸಿ ಕೊನೆಗೆ ಅವರಿಗೆ ಬಲಿಯಾದ ಮೊಟ್ಟಮೊದಲ ದೊರೆಗಳಲ್ಲಿ ಅವನೂ ಒಬ್ಬ ಎಂದು ಧರ್ಮತೀರ್ಥರು ಬರೆಯುತ್ತಾರೆ.

ಬುಡಕಟ್ಟು ವ್ಯಕ್ತಿಯಾದ ರಾಮನನ್ನು ಅದ್ರಾವಿಡಿಕರಣಗೊಳಿಸಿರುವುದರಿಂದ ಅದ್ರಾವಿಡ ಸಂಸ್ಕೃತಿಗೆ ಅನೇಕ ಲಾಭಗಳಂತೂ ಆಗಿವೆ.
ಮೂಲನಿವಾಸಿಗಳನ್ನು ನಾಶಪಡಿಸಿದ್ದು ಅದೇ ಬುಡಕಟ್ಟಿನ ವ್ಯಕ್ತಿಯೇ ಹೊರತು ಅಗ್ನಿಸಂಸ್ಕೃತಿಗೆ ಸೇರಿದ ದ್ರಾವಿಡೇತರ ವ್ಯಕ್ತಿಯಲ್ಲ ಎಂಬುದನ್ನು ನಿರೂಪಿಸಿ ದ್ರಾವಿಡೇತರರು ಅಪರಾಧಿ ಕಟಕಟೆಯಿಂದ ಸುಲಭವಾಗಿ ಜಾರಿಕೊಂಡರು.

ತಮ್ಮದೇ ಸಮುದಾಯದ ವ್ಯಕ್ತಿ ನಮ್ಮವರನ್ನೇ ನಾಶಪಡಿಸಿದನೆಂದರೆ ಅವರು ನಾಶಕ್ಕೆ ಅರ್ಹರಿದ್ದಿರಬೇಕೆಂದು ರಾಮನು ದುಷ್ಟಶಿಕ್ಷಕನೇ ಸರಿಯೆಂಬ ಭ್ರಮೆಯನ್ನು ಅದೇ ಸಮುದಾಯದಲ್ಲಿ ಹುಟ್ಟುಹಾಕಿ ನಾಶವನ್ನು ಸಮರ್ಥಿಸುವುದರ ಜತೆಗೆ ಆತನನ್ನು ಪೂಜನೀಯ ವ್ಯಕ್ತಿಯಾಗಿಸಿ ದ್ರಾವಿಡೇತಿಕರಣಗೊಳಿಸಿಕೊಳ್ಳುವುದು.

ರಾಮನ ದ್ರಾವಿಡೇತಿಕರಣಕ್ಕೆ ಹೊಂದಿಕೆಯಾಗದ ಮೂಲಕತೆಗಳನ್ನು ನಾಶಪಡಿಸಿ ಹೊಂದಿಕೆಯಾಗುವ ಕಥನಗಳನ್ನು ಸೇರ್ಪಡೆ ಮಾಡುವುದು. ದ್ರಾವಿಡೇತರ ಎಂದು ಸಾಧಿಸಿ ಸಮುದಾಯದಿಂದ ಪ್ರತ್ಯೇಕಿಸಿ ಸಮುದಾಯವೇ ರಾಮನನ್ನು ದ್ವೇಷಿಸುವಂತೆ ಮಾಡಿ ಸಮುದಾಯದ ಆಂತರಿಕ ಸಂಘರ್ಷ ಹೂಡುವುದು.
ಸಂವಿಧಾನದ ಆಶಯದ ನೆಲೆಯಲ್ಲಿ ರಾಮಾಯಣದ ಕೆಲ ಮೌಲ್ಯಗಳನ್ನು ನೋಡುವ ಯತ್ನವಾಗಬೇಕು.

ರಾಮಾಯಣದ ಕಾಲಕ್ಕೆ ಸಮುದಾಯಗಳು ಜಾತಿಗಳಾಗಿರಲಿಲ್ಲ. ಸಂಬಂಧಿಕಲಹಗಳಲ್ಲಿ ತೊಡಗಿದ್ದವಷ್ಟೆ. ಕಿರಾತವ್ಯವಸ್ಥೆಯ ಮೊದಲಘಟ್ಟವನ್ನು ದಾಟಿ ಖಾಸಗಿ ಆಸ್ತಿಯ ಕಾರಣಕ್ಕಾಗಿ ಕುಲಚಿಹ್ನೆಗಳನ್ನು ಹೊಂದಿ ಪ್ರತ್ಯೇಕವಾಗತೊಡಗಿದ್ದವು. ರಾಮಾಯಣದಲ್ಲಿ ನಿರೂಪಗೊಂಡ ಪ್ರದೇಶಗಳು, ಜನಸಮುದಾಯಗಳು ರಾಮ, ರಾವಣ, ವಾಲಿಯನ್ನು ಒಳಗೊಂಡಂತೆ ಮ್ಲೇಚರು ಅಥವ ಬೇಡರಾಗಿದ್ದಾರೆ. ವಾಲಿ ಮತ್ತು ರಾವಣ ಸೋದರ ಸಂಬಂಧಿಗಳೆಂದು ರಾಮಾಯಣ ನಿರೂಪಿಸುತ್ತದೆ. ಮಾದಿಗರ ಸಾಂಸ್ಕೃತಿಕ ಹಿರಿಯ ಜಾಂಬುವಂತ, ಮಾತಂಗಮುನಿಯು ಬೇಡರ ಸ್ಥತಿಯನ್ನು ಹೊಂದಿದವರಾಗಿದ್ದರು.

ರಾಮಾಯಣ ನಿರೂಪಿಸುವಂತೆ ಇಂದಿನ ಮಾದಿಗರು ಮತ್ತು ವಾಲ್ಮೀಕಿ ಸಮುದಾಯ ಒಂದೇ ಆಗಿದ್ದಾರೆ. ಅವರನ್ನು ಪ್ರತ್ಯೇಕವೆಂಬಂತೆ ರಾಮಾಯಣ ನಿರೂಪಿಸುವುದಿಲ್ಲ. ಬೇಡರೂ ಮಾತಂಗ ಪರಂಪರೆಯವರೆ. ಏರಿ ಬರುತ್ತಿರುವ ಫ್ಯಾಸಿಸಂನ್ನು ಎದುರುಗೊಳ್ಳಲು ದ್ರಾವಿಡತತ್ವದ ಅಡಿಯಲ್ಲಿ ರಾಮಾಯಣದ ಕೂಡುಕಟ್ಟು ಒಂದು ಅಸ್ತ್ರವಾಗಬಲ್ಲದು. ಹೀಗಾಗಿ ರಾಮಾಯಣ ಮತ್ತು ಸಂವಿಧಾನ ಎರಡೂ ಅಗತ್ಯವಾಗಬಲ್ಲವು.


ಲೇಖಕರು : ಪಿ.ಆರಡಿಮಲ್ಲಯ್ಯ ಕಟ್ಟೇರ
ಚಿಂತಕರು, ಚಳ್ಳಕೆರೆ
(ಆರಡಿಮಲ್ಲಯ್ಯ ಕಟ್ಟೇರ)
ಮೊ : 94823 70430

1 Comment

1 Comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ನವೆಂಬರ್-24,2020 ಸೂರ್ಯೋದಯ: 06:26, ಸೂರ್ಯಸ್ತ: 17:46 ಶಾರ್ವರಿ ನಾಮ ಸಂವತ್ಸರ ಕಾರ್ತಿಕ ಮಾಸ ದಕ್ಷಿಣಾಯಣ ತಿಥಿ: ದಶಮೀ – 26:41+ ವರೆಗೆ ನಕ್ಷತ್ರ: ಪೂರ್ವಾ ಭಾದ್ರ – 15:32 ವರೆಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಆರೋಗ್ಯ ಸರಿಯಿಲ್ಲದಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ವ್ಯಕ್ತಿಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾಲೇಶ (32) ಆರೋಗ್ಯ ಸರಿಯಿಲ್ಲದ್ದಕ್ಕೆ ನೊಂದು ಸೋಮವಾರ ಮನೆಯಲ್ಲೇ ನೇಣು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಜೋಗಿಮಟ್ಟಿಯಲ್ಲಿ ಶ್ರೀ ಕಾಲಭೈರವ ಜಯಂತಿ ಆಚರಿಸಲಾಯಿತು. ನಗರದ ಚಂದ್ರವಳ್ಳಿಯ ಹುಲೆಗೊಂದಿ ಸಿದ್ದೇಶ್ವರಸ್ವಾಮಿಯ ಪೂಜೆ ಸಲ್ಲಿಸಿ ಬಳಿಕ ಕನಕದಾಸರು, ಸಂಗೋಳ್ಳಿರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ...

ಪ್ರಮುಖ ಸುದ್ದಿ

ಚಿತ್ರದುರ್ಗ : ಗ್ರಾಮ ಪಂಚಾಯಿತಿಗಳ ನೋಟಿಸ್ ಬೋರ್ಡ್‍ನಲ್ಲಿ ಪಿಡಿಒ ಹಾಗೂ ಇಂಜಿನಿಯರ್‍ಗಳ ಭೇಟಿ ದಿನಾಂಕ ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ ಹಾಕಬೇಕೆಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ...

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್23): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 33 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,335 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲಾ ಪಂಚಾಯಿತಿ ಅಭಿವೃದ್ದಿ ಅನುದಾನದಡಿ ಹಿರೇಗುಂಟನೂರು ಕ್ಷೇತ್ರದ ನಾಲ್ಕು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಕುರುಬರಹಳ್ಳಿಯಲ್ಲಿ ಹೈಮಾಸ್ ವಿದ್ಯುತ್ ದೀಪ ಅಳವಡಿಕೆಗೆ ಭೂಮಿಪೂಜೆ, ಹುಲ್ಲೂರು...

ಪ್ರಮುಖ ಸುದ್ದಿ

ಚಿತ್ರದುರ್ಗ :ನ.1 ರಿಂದ ವಿದ್ಯುತ್ ದರ ಏರಿಸಿ ರಾಜ್ಯದ ಜನತೆಗೆ ಶಾಕ್ ನೀಡಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಕೇವಲ ಐದು ತಿಂಗಳಲ್ಲಿ 24 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ 4ನೇ ತ್ರೈಮಾಸಿಕ...

ಪ್ರಮುಖ ಸುದ್ದಿ

ಚಿತ್ರದುರ್ಗ :ಭವ್ಯ ಪರಂಪರೆಯ ಕನ್ನಡವನ್ನು ಬೆಳೆಸುವ ಪ್ರಯತ್ನಕ್ಕೆ ಕೈ ಹಾಕದೇ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಅಧೋಗತಿಗೆ ನೂಕುತ್ತಿದ್ದೇವೆ ಎಂದು ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ರೇಣುಕಾ ಪ್ರಕಾಶ್ ಬೇಸರ ವ್ಯಕ್ತಪಡಿಸಿದರು....

error: Content is protected !!