ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಕೂಡಲೇ ಬಂಧಿಸಿ : ಕರ್ನಾಟಕ ರಾಜ್ಯ ರೈತ ಸಂಘ
ಚಿತ್ರದುರ್ಗ : ಹಸಿರು ಶಾಲು ಹೆಗಲಿಗೇರಿಸಿಕೊಂಡು ರೈತ ಸಂಘಕ್ಕೆ ಮಸಿ ಬಳಿಯುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ರವರನ್ನು ಕೂಡಲೆ ಬಂಧಿಸಿ ಅವರ ಅಕ್ರಮಗಳನ್ನು ಸಿಬಿಐ ಇಲ್ಲವೇ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನಾನಿರತ ರೈತರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮಾತನಾಡಿ ಕೆ.ಎಸ್.ಆರ್.ಟಿ.ಸಿ. ನೌಕರರು ಮತ್ತೆ ದೆಹಲಿಯಲ್ಲಿ ನಡೆಸಿದ ರೈತರ ಚಳುವಳಿಯನ್ನು ವಾಪಸ್ ಪಡೆಯುವ ಕಾರ್ಯತಂತ್ರ ರೂಪಿಸಿ ಕೋಟ್ಯಾಂತರ ರೂ.ಗಳ ಅವ್ಯವಹಾರ ನಡೆಸಿರುವ ಕೋಡಿಹಳ್ಳಿ ಚಂದ್ರಶೇಖರ್‍ಗೆ ಕಿಂಚಿತ್ತಾದರೂ ಮಾನ ಮರ್ಯಾದೆಯಿದ್ದರೆ ಕೂಡಲೆ ಹಸಿರು ಶಾಲನ್ನು ತೆಗೆಯಬೇಕು. ರೈತ ಚಳುವಳಿಗೆ ಇತಿಹಾಸವಿದೆ.
ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಹೆಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಕೆ.ಎಸ್.ಪುಟ್ಟಣ್ಣಯ್ಯ, ಕಡಿದಾಳ್ ಶಾಮಣ್ಣ, ಸುರೇಶ್‍ಬಾಬು, ಗಣಪತಿ ಪಾಟೀಲ್, ರುದ್ರಪ್ಪ ಮೊಕಾಶಿ, ಚನ್ನಬಸಪ್ಪ ಬೆಟ್ಟದೂರು, ಇನ್ನು ಅನೇಕ ಮಹನೀಯರು ಕಟ್ಟಿ ಬೆಳೆಸಿದ ರೈತ ಸಂಘವನ್ನು ಕೋಡಿಹಳ್ಳಿ ಚಂದ್ರಶೇಖರ್ ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸಲು ಅವರಿಗೆ ಸಂಪತ್ತು ಎಲ್ಲಿಂದ ಬಂತು ಎಂಬುದು ನಮ್ಮ ಮೂಲಭೂತ ಪ್ರಶ್ನೆ. ಹಾಗಾಗಿ ಅವರ ಅಕ್ರಮವನ್ನು ಬಯಲಿಗೆಳೆಯಬೇಕಾಗಿರುವುದರಿಂದ ಸಿಬಿಐ. ಇಲ್ಲವೇ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ರೈತ ನಾಯಕ ಎಂದು ಹೇಳಿಕೊಂಡು ತಿರುಗಾಡುವವರೆಲ್ಲಾ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶಕ್ಕೆ ಅನ್ನ ನೀಡುವ ರೈತರು ಹೋರಾಟವನ್ನೆ ನಂಬಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ರೈತರ ಹಸಿರುಶಾಲನ್ನು ದುರುಪಯೋಗಪಡಿಸಿಕೊಂಡು ಅಕ್ರಮ ವಸೂಲಿಯಲ್ಲಿ ತೊಡಗಿದರೆ ಯಾರನ್ನು ನಂಬಬೇಕು ಎನ್ನುವ ಗೊಂದಲ ರೈತನನ್ನು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡುವಾಗ ಒಳ್ಳೆಯವರ್ಯಾರು, ಕೆಟ್ಟವರ್ಯಾರು ಎಂದು ಆಲೋಚಿಸಿ ತೀರ್ಮಾನ ತೆಗೆದುಕೊಂಡಾಗ ಮಾತ್ರ ಇಂತಹ ಅವಘಡಗಳನ್ನು ತಪ್ಪಿಸಬಹುದು ಎಂದು ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ,
ಹಂಪಯ್ಯನಮಾಳಿಗೆ ಧನಂಜಯ, ಸಿ.ನಾಗರಾಜ, ಬ್ಯಾಡರಹಳ್ಳಿ ಶಿವಕುಮಾರ್, ಹೆಚ್.ಗೌಸ್‍ಪೀರ್, ಎಸ್.ಸಿದ್ದಪ್ಪ, ನಾಗರಾಜ್ ಮುದ್ದಾಪುರ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.