ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಸಾಂವಿಧಾನಿಕವಾಗಿಯೇ ಬಗೆಹರಿಸಬೇಕು : ಅಮಿತ್ ಶಾ

 

ಹೊಸದಿಲ್ಲಿ, (ಡಿ.14): ದಶಕಗಳಿಂದ ನಡೆಯುತ್ತಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದಕ್ಕೆ ಸಾಂವಿಧಾನಿಕ ರೀತಿಯಲ್ಲಿ ಇತ್ಯರ್ಥವಾಗುವವರೆಗೆ ತಮ್ಮ ಹಕ್ಕುಗಳನ್ನು ಒತ್ತಾಯಿಸದಿರಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಅಮಿತ್ ಶಾ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಗಡಿ ವಿಚಾರವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಇಂದು ಸಭೆ ನಡೆದಿದೆ. ಸಕಾರಾತ್ಮಕ ಧೋರಣೆ ಇಟ್ಟುಕೊಂಡು ಎರಡೂ ರಾಜ್ಯಗಳ ಸಿಎಂಗಳು ಸಾಂವಿಧಾನಿಕ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು  ಒಪ್ಪಿಕೊಂಡಿದ್ದಾರೆ ಎಂದು ಅಮಿತ್ ಶಾ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಗೃಹ ಸಚಿವನಾಗಿ ನಾನು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಗಡಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಪ್ರತಿಪಕ್ಷಗಳಿಗೆ ಮನವಿ ಮಾಡುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.

“ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರತಿಪಕ್ಷಗಳಿಗೆ ಮನವಿ ಮಾಡುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ರಚಿಸಲಾದ ಸಮಿತಿಯ ಚರ್ಚೆಯ ಫಲಿತಾಂಶ ಮತ್ತು ಸುಪ್ರೀಂ ಕೋರ್ಟ್‌ನ ನಿರ್ಧಾರಕ್ಕಾಗಿ ನಾವು ಕಾಯಬೇಕು. ಎನ್‌ಸಿಪಿ,ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆಯವರು ಸಹಕರಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.

ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ 6 ​​ಸಚಿವರು, ಎರಡೂ ರಾಜ್ಯಗಳ ತಲಾ ಮೂವರ ಸಮಿತಿಯು ಗಡಿ ಸಮಸ್ಯೆಯನ್ನು ಪರಿಹರಿಸಲು ವಿವರವಾದ ಮಾತುಕತೆ ನಡೆಸಲಿದೆ.  ಇದಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಶಾ ಹೇಳಿದರು.

ಕರ್ನಾಟಕದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಆಡಳಿತಾರೂಢ ಬಿಜೆಪಿ ಪ್ರತಿಪಕ್ಷಗಳ ಒತ್ತಡಕ್ಕೆ ಸಿಲುಕಿದೆ. ಈ ವಿವಾದದಿಂದ ಬಿಜೆಪಿ ‘ರಾಜಕೀಯ ಲಾಭ’ ಪಡೆಯುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ‘ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬಹುದಾಗಿದ್ದ ಬೆಳಗಾವಿ ಗಡಿ ಸಮಸ್ಯೆ ಈಗ ಬೆಳೆಯಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಬಿಜೆಪಿ ಲಾಭ ಪಡೆಯಲಿದೆ’ ಎಂದು ಕಿಡಿ ಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *