ಕೋವಿಡ್ ನಿಯಂತ್ರಣ ಕ್ರಮಗಳಿಂದಾಗಿ ರಾಜ್ಯಕ್ಕೆ ಪ್ರಶಸ್ತಿ, ಹೊಸ ಹುರುಪು ತಂದ ಗೌರವ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

suddionenews
2 Min Read

ನವದೆಹಲಿ: ದಿ ಇಂಡಿಯಾ ಟುಡೇ ಗ್ರೂಪ್ ನಿಂದ ‘ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ’ ವಿಭಾಗದಡಿ ಕರ್ನಾಟಕಕ್ಕೆ ‘ಇಂಡಿಯಾ ಟುಡೇ ಹೆಲ್ತ್ ಗಿರಿ’ ಪ್ರಶಸ್ತಿ ದೊರೆತಿದೆ. ಇದು ಇನ್ನಷ್ಟು ಕೆಲಸ ಮಾಡಲು ಹುರುಪು ತಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ವಿರುದ್ಧ ಹೋರಾಟ ನಡೆಸಲು ಎಲ್ಲಾ ರಾಜ್ಯಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸುವ ಮುನ್ನವೇ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ರಾಜ್ಯದಲ್ಲಿ ಹಿಂದೆ ಏಳೆಂಟು ಸಾವಿರ ಆಕ್ಸಿಜನ್ ಹಾಸಿಗೆಗಳಿದ್ದು, 30 ಸಾವಿರ ಹಾಸಿಗೆಗಳನ್ನು ಅಳವಡಿಸಲಾಗಿದೆ. ವೆಂಟಿಲೇಟರ್ ಗಳನ್ನೂ ಹೊಸದಾಗಿ ಅಳವಡಿಸಲಾಗಿದೆ. ದಾಖಲೆಯಂತೆ 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ. ಅರೆ ವೈದ್ಯಕೀಯ, ನರ್ಸ್ ಮೊದಲಾದ ಸಿಬ್ಬಂದಿಯನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. 5 ಟಿ ಕ್ರಮ ಅಳವಡಿಸಿಕೊಂಡು, ತಂತ್ರಜ್ಞಾನ ಬಳಸಿಕೊಂಡು ಕೋವಿಡ್ ನಿಯಂತ್ರಿಸಲಾಗಿದೆ. ಅನೇಕ ಆ್ಯಪ್ ಗಳನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲಾ ಕ್ರಮಗಳಿಂದ ರಾಜ್ಯಕ್ಕೆ ಈ ಗೌರವ ಬಂದಿದೆ ಎಂದರು.

ಹಿಂದೆ ಆಕ್ಸಿಜನ್ 300-400 ಟನ್ ಬೇಡಿಕೆ ಇತ್ತು. ಈಗ 1,300 ಟನ್ ಗೆ ಆಕ್ಸಿಜನ್ ಶೇಖರಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಾಗಿದೆ. ರೆಮ್ ಡಿಸಿವಿರ್, ಆಂಪೊಟೆರಿಸಿನ್ ಕೊರತೆಯಾಗದಂತೆ ಹೆಚ್ಚು ಖರೀದಿ ಮಾಡಲಾಗಿದೆ. ಕೋವಿಡ್ ಲಸಿಕೆ ನೀಡುವುದರಲ್ಲೂ ದಾಖಲೆ ಸೃಷ್ಟಿಯಾಗಿದೆ. ಪ್ರಧಾನಿಗಳ ಜನ್ಮದಿನದ ಒಂದೇ ದಿನ 31.60 ಲಕ್ಷ ಲಸಿಕೆ ನೀಡಲಾಗಿದೆ. 1.48 ಕೋಟಿ ಲಸಿಕೆಯನ್ನು ಸೆಪ್ಟೆಂಬರ್ ನಲ್ಲಿ ನೀಡಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡುವ ಗುರಿ ಇದೆ. ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದು, ಖಾಸಗಿ ಕಂಪನಿಯೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆದಿದೆ. ಆದಷ್ಟು ಬೇಗ ಲಸಿಕೆ ಸಿಗಬಹುದು ಎಂಬ ಆಶಾವಾದ ಇದೆ ಎಂದರು.

ಮೂರನೇ ಅಲೆ ಬರಲೇಬೇಕು ಎಂದೇನಿಲ್ಲ. ಸೆರೋ ಸರ್ವೆಯಲ್ಲಿ ಕೂಡ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನೋಡಬೇಕಿದೆ. ಆದರೆ ಲಸಿಕೆ ನೀಡುತ್ತಿರುವುದರಿಂದ ಹೆಚ್ಚು ಸಮಸ್ಯೆಯ ಆತಂಕವಿಲ್ಲ. ಆದರೂ ಹೊಸ ವೈರಾಣು ಬಂದರೆ ಎಚ್ಚರದಿಂದ ಇರಬೇಕಾಗುತ್ತದೆ. ಸಾಂಕ್ರಾಮಿಕವನ್ನೂ ಇನ್ನೂ ಸಂಪೂರ್ಣ ಗೆದ್ದಿಲ್ಲ. ಹೀಗಾಗಿ ದೊಡ್ಡ ಸಭೆ, ಸಮಾರಂಭಕ್ಕೆ ಕಡಿವಾಣ ಹಾಕಬೇಕು ಎಂದರು.

ಶಾಲೆಗಳಲ್ಲಿ ಎಲ್ಲೂ ಆತಂಕ ಕಂಡುಬಂದಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆಯೂ ನೋಡಬೇಕು. ಸಣ್ಣ ಮಕ್ಕಳಲ್ಲಿ ಕೊರೊನಾ ಸುಲಭವಾಗಿ ಬರುವುದಿಲ್ಲ. ಒಂದರಿಂದ ಐದನೇ ತರಗತಿ ಕೂಡ ಆರಂಭಿಸಬಹುದು. ಆದರೆ ಪೋಷಕರ ಅಭಿಪ್ರಾಯ ಗಮನಿಸಿ ರಾಜ್ಯ ಸರ್ಕಾರ ಹಂತಹಂತವಾಗಿ ಶಾಲೆ ಆರಂಭಿಸುತ್ತಿದೆ. ಮಕ್ಕಳಿಗೆ ತೊಂದರೆಯಾಗುವುದು ಗಮನಕ್ಕೆ ಬಂದರೆ ಸರ್ಕಾರ ತಕ್ಷಣ ತೀರ್ಮಾನ ಹಿಂತೆಗೆದುಕೊಳ್ಳುತ್ತದೆ ಎಂದರು.

2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ವೈದ್ಯರು, ಇತರೆ ಸಿಬ್ಬಂದಿಗೆ ನೆರವಾಗಲು ವಸತಿ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ಕೇಂದ್ರ ಆರೋಗ್ಯ ಸಚಿವರಿಗೆ ವಿವರಿಸಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *