ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾಯಿದೆಗಳನ್ನು ಹಿಂಪಡೆದಿರುವುದಕ್ಕೆ ಕರ್ನಾಟಕ ರೈತ ಸಂಘ ಹಾಗೂ ಇತರೆ ಸಂಘಟನೆಗಳ ಸಂಭ್ರಮಾಚರಣೆ

suddionenews
2 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಡಿ.11): ಕೇಂದ್ರ ಸರ್ಕಾರ ಏಕಾಏಕಿ ಜಾರಿಗೆ ತಂದ ಮೂರು ರೈತ ವಿರೋಧಿ ಕಾಯಿದೆಗಳನ್ನು ಧಿಕ್ಕರಿಸಿ ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರು ಚಳುವಳಿ ಆರಂಭಿಸಿದಾಗಲೆ ಪ್ರಧಾನಿ ಮೋದಿ ರೈತರ ಸಮಸ್ಯೆಗಳನ್ನು ಆಲಿಸಿ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದರೆ ಏಳು ನೂರು ರೈತರ ಪ್ರಾಣ ಉಳಿಯುತ್ತಿತ್ತು ಎಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.

ಕೇಂದ್ರ ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆದಿರುವುದರಿಂದ ಒನಕೆ ಓಬವ್ವ ಸರ್ಕಲ್‍ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಇತರೆ ಸಂಘಟನೆಗಳು ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ವಾಧಿಕಾರಿ ಧೋರಣೆಯುಳ್ಳ ಮೋದಿರವರ ಹಠಮಾರಿತನದಿಂದ ರೊಚ್ಚಿಗೆದ್ದ ರೈತರು ವರ್ಷಗಟ್ಟಲೆ ಚಳುವಳಿ ನಡೆಸಬೇಕಾಯಿತು. ಹೋರಾಟದ ಆರಂಭದಲ್ಲಿಯೇ ಪ್ರಧಾನಿರವರು ರೈತರು ಹಾಗೂ ತಜ್ಞರ ಜೊತೆ ಚರ್ಚಿಸಿ ಕೃಷಿ ಕಾಯಿದೆಯನ್ನು ಹಿಂದಕ್ಕೆ ಪಡೆದಿದ್ದರೆ ಇಷ್ಟೊಂದು ಅನಾಹುತವಾಗುತ್ತಿರಲಿಲ್ಲ. ಚಳುವಳಿಯಲ್ಲಿಯೇ ಪ್ರಾಣಕೊಟ್ಟ ರೈತ ಕುಟುಂಬಕ್ಕೆ ಪರಿಹಾರ ನೀಡುವುದು ಪರ್ಯಾಯವಲ್ಲ. ಗಾಂಧಿ ಮಾರ್ಗದಲ್ಲಿ ಹೋರಾಟ ನಡೆಸಬೇಕೆ ವಿನಃ ಬೇರೆ ಮಾರ್ಗ ಹಿಡಿಯಬಾರದು.
ಜನಾಭಿಪ್ರಾಯದ ವಿರುದ್ದ ಯಾವ ಸರ್ಕಾರವಾದರೂ ಈಜಲು ಆಗುವುದಿಲ್ಲ ಎನ್ನುವುದನ್ನು ಈಗಲಾದರೂ ಆಳುವ ಸರ್ಕಾರಗಳು ತಿಳಿದುಕೊಂಡರೆ ಒಳ್ಳೆಯದು ಎಂದು ಎಚ್ಚರಿಸಿದರು.

ಚಳುವಳಿಯಲ್ಲಿ ಪ್ರಾಣ ಕಳೆದುಕೊಂಡ ರೈತರ ಬಗ್ಗೆ ಕನಿಷ್ಟ ಸಂತಾಪ, ಪಶ್ಚಾತಾಪ ತೋರದ ಪ್ರಧಾನಿ ಮೋದಿಗೆ ರೈತರ ಬಗ್ಗೆ ಇರುವ ಕಾಳಜಿ ಇದೆನಾ ಎಂದು ಜೆ.ಯಾದವರೆಡ್ಡಿ ಖಾರವಾಗಿ ಪ್ರಶ್ನಿಸಿದರು.
ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹಿರಿಯರು ಬ್ರಿಟೀಷರ ವಿರುದ್ದ ಹೋರಾಡಿದ್ದನ್ನು ನಾವುಗಳು ಕಣ್ಣಾರೆ ಕಂಡಿಲ್ಲ. ಆದರೆ ಕೃಷಿಗೆ ಮಾರಕಾಗಿರುವ ಕೇಂದ್ರ ಸರ್ಕಾರ ಹೊರಡಿಸಿದ ರೈತ ವಿರೋಧಿ ಕಾಯಿದೆ ವಿರುದ್ದ ವರ್ಷಗಟ್ಟಲೆ ರೈತರು ದೆಹಲಿಯ ಗಡಿಯಲ್ಲಿ ಹೋರಾಟ ನಡೆಸಿದ್ದು, ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ನಡೆಸಿದ ಹೋರಾಟವನ್ನು ನೆನಪಿಸುವಂತಿತ್ತು. ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಿಗೆ ಮಾಡಲು ಹೊರಟಿರುವುದನ್ನು ಕೂಡಲೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮಾತನಾಡಿ ಹೋರಾಟದಿಂದ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎನ್ನುವುದಕ್ಕೆ ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ಚಳಿ, ಮಳೆ, ಗಾಳಿ ಲೆಕ್ಕಿಸದೆ ಕೃಷಿ ಕಾಯಿದೆ ವಿರೋಧಿಸಿ ರೈತರು ನಡೆಸಿದ ಹೋರಾಟವೇ ಸಾಕ್ಷಿ. ಹರಿಯಾಣ, ಪಂಜಾಬ್, ಉತ್ತರಪ್ರದೇಶದ ರೈತರು ಪಟ್ಟುಬಿಡದೆ ಕೇಂದ್ರ ವಿರುದ್ದ ಚಳುವಳಿಯಲ್ಲಿ ತೊಡಗಿದ ಸಂದರ್ಭದಲ್ಲಿ ಮೃತಪಟ್ಟ ಏಳುನೂರು ರೈತ ಕುಟುಂಬಗಳಿಗೆ ಕೂಡಲೆ ಪರಿಹಾರ ನೀಡಬೇಕು. ಚಳುವಳಿನಿರತರ ಮೇಲೆ ದಾಖಲಿಸಿರುವ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕರ್ನಾಟಿಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲ್ಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯಕುಮಾರ್, ಕೋಗುಂಡೆ ರವಿ, ಪ್ರಭು, ಮಲ್ಲಾಪುರದ ತಿಪ್ಪೇಸ್ವಾಮಿ, ಹಮಾಲರ ಸಂಘದ ಬಸವರಾಜಪ್ಪ, ಎಸ್.ಯು.ಸಿ.ಐ.ನ ರವಿಕುಮಾರ್, ಲಿಂಗರಾಜ್, ಮೇಘನ, ತ್ರಿವೇಣಿ, ಗಿರಿಜಮ್ಮ, ಸುಜಾತ, ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಕಟ್ಟಡ ಕಾರ್ಮಿಕರ ಸಂಘದ ರಮೇಶ್, ರೈತ ಸಂಘದ ಮಹಿಳಾ ಸಂಚಾಲಕಿ ಸುಧಾ ಡಿ.ಎಸ್.ಹಳ್ಳಿ, ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಾರ್ವಜನಿಕರಿಗೆ ಸಿಹಿ ಮತ್ತು ಹಣ್ಣುಗಳನ್ನು ವಿತರಿಸಿ ಸಂಭ್ರಮಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *