ಗರಿಕೆಯಲ್ಲಿ ಒಂಬತ್ತು ಪ್ರಭೇದಗಳಿವೆ ಎಂದು ಹಳೆಯ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಿದೆ. ಗರಿಕೆಯ ಉಪಯೋಗಗಳು ಅಷ್ಟಿಷ್ಟಲ್ಲ, ಬೆಟ್ಟದಷ್ಟು. ಇದನ್ನ ಅರಿತ ಮಹನೀಯರು, ಮನುಜ ಕುಲಕ್ಕೆ ಒಳಿತಾಗಲೆಂದು ಗರಿಕೆಯ ಉಪಯೋಗಗಳನ್ನು ತಿಳಿಸಿಕೊಟ್ಟರು. ಗರಿಕೆಯಲ್ಲಿನ ಆನೆಬಲದ ಶಕ್ತಿ ಸಾಮರ್ಥ್ಯಗಳನ್ನು ನೋಡಿಯೇ, ಪೂರ್ವಕಾಲದಲ್ಲಿ ಋಷಿಮುನಿಗಳು ಇದಕ್ಕೆ “ಸಹಸ್ರವೀರ್ಯಾ” “ಶತವೀರ್ಯ” ಎಂಬ ಹೆಸರುಗಳನ್ನು ಕೊಟ್ಟರು.
ಹೋಮ, ಯಜ್ಞ ಯಾಗಾದಿಗಳಲ್ಲಿ ಸಮಿತ್ತು ದರ್ಭೆ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದಿಯೋ, ಗರಿಕೆ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಹೋಮ ಯಜ್ಞ ಯಾಗಾದಿಗಳಲ್ಲಿ ಪೂಜೆ ಪ್ರಾರಂಭಿಸುವ ಮುನ್ನ, ಅರಸಿಣದಿಂದ ಮಾಡಿದ “ಪಿಳ್ಳೇರಾಯ ಗಣಪತಿ” ಯನ್ನು ಪೂಜಿಸಿ, ಗರಿಕೆಯನ್ನು ಅರ್ಪಿಸಿ ಪೂಜೆ ಕಾರ್ಯಗಳನ್ನು ಪ್ರಾಂಭಿಸುವುದು ವಾಡಿಕೆ.
ಗರಿಕೆಯ ದಗ್ಧವಾಗಿ ಬರುವ ಹೋಮ ಧೂಮವು, ಕಣ್ಣಿನ ಕಾಂತಿಯನ್ನು ವೃದ್ಧಿಸುತ್ತದೆ. ಶಾರೀರಿಕ ಹಾಗು ಆತ್ಮಶಕ್ತಿಯನ್ನು ಸಹ ವೃದ್ಧಿಸುತ್ತೆ.
ಗರಿಕೆಯಲ್ಲಿ ಔಷಧೀಯ ಭಂಡಾರವೇ ತುಂಬಿದೆ. 48ದಿನಗಳಕಾಲ, ಬೆಳಿಗ್ಗೆ ಸಂಜೆ 50ml ನಂತೆ ಗರಿಕೆ ಚಿಗರಿನ ರಸ ಸೇವಿಸುತ್ತಾ ಬಂದರೆ, ಅನೇಕ ವ್ಯಾಧಿಗಳು ಗುಣವಾಗುತ್ತೆ. ದೇಹದಲ್ಲಿ ನರದೌರ್ಬಲ್ಯ ದೂರವಾಗಿ ಮಾಂಸಖಂಡಗಳಿಗೆ ಅಗಾಧ ಶಕ್ತಿ ಬರುತ್ತೆ.
ಒಂದು ಹಿಡಿ ತಾಜಾ ಗರಿಕೆ ಬೇರನ್ನು ತಂದು, ಶುದ್ಧಗೊಳಿಸಿ, ಮಡಿಕೆಯಲ್ಲಿ ಹಾಕಿ, ಅದಕ್ಕೆ 2 ಲೋಟ ನೀರು, ಚಿಟಿಕೆ ಕಾಳುಮೆಣಸು ಚೂರ್ಣ, ಚಿಟಿಕೆ ಜೀರಿಗೆ ಚೂರ್ಣ, ಚಿಟಿಕೆ ಕಲ್ಲುಪ್ಪು ಹಾಕಿ, ಒಲೆಯಮೇಲಿಟ್ಟು, ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ, ಸೋಸಿಕೊಂಡು, ಬೆಳಿಗ್ಗೆ ಸಂಜೆ 50ml ನಂತೆ ಹಿರಿಯರು, 10ml ನಂತೆ ಮಕ್ಕಳು ಸೇವಿಸಿದರೆ, ನೆಗಡಿ, ಜ್ವರ, ಕೆಮ್ಮು, ಕಫ, ಶೀತಜ್ವರ ನಿವಾರಣೆಯಾಗುತ್ತೆ.
ದಿನವು ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು, ತಾಜಾ ಗರಿಕೆ ಹುಲ್ಲಿನ ರಸ 50ml ನಂತೆ ಕುಡಿಯುತ್ತಾ ಬಂದರೆ, ಅಧಿಕ ರಕ್ತದೊತ್ತಡ, ಮಧುಮೇಹ ಹತೋಟಿಗೆ ಬರುತ್ತೆ. ಮೂತ್ರನಾಳ,ಮೂತ್ರಕೋಶಕ್ಕೆ ಸಂಬಂಧಿಸಿದ ಸೊಂಕು, ಇತರೆ ಸಮಸ್ಯೆಗಳು ವಾಸಿಯಾಗುತ್ತೆ. ಬಾಯಿಹುಣ್ಣು, ಬಾಯಿದುರ್ವಾಸನೆ ನಿವಾರಣೆಯಾಗುತ್ತೆ.
ಎರಡು ಹಿಡಿಯಷ್ಟು ತಾಜಾ ಗರಿಕೆ ಬೇರನ್ನು ತಂದು ಶುದ್ಧಗೊಳಿಸಿ, ಒಂದು ಮಡಿಕೆಗೆ ಹಾಕಿ, ಅದಕ್ಕೆ ಎರಡು ಲೋಟ ನೀರು ಹಾಕಿ, ಚೆನ್ನಾಗಿ ಮಂದದುರಿಯಲ್ಲಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ ಸೋಸಿಕೊಂಡು, ಅದಕ್ಕೆ 1 ಚಮಚ ಅತಿಮಧುರ ಚೂರ್ಣ, 1 ಚಮಚ ಶುದ್ಧಿಮಾಡಿದ ಅಶ್ವಗಂಧ ಚೂರ್ಣ, 1 ಚಮಚ ಕೆಂಪು ಕಲ್ಲುಸಕ್ಕರೆ ಬೆರಸಿ, ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು ಸೇವಿಸುತ್ತಾ ಬಂದರೆ, ಪುರುಷರಲ್ಲಿ ನಪುಂಷಕತ್ವ ದೂರವಾಗಿ ವೀರ್ಯಾಣು ವೃದ್ಧಿಯಾಗುತ್ತೆ. ಮಾಂಸಖಂಡಗಳಿಗೆ ಅಗಾಧವಾದ ಶಕ್ತಿ ಬರುತ್ತೆ. ದೇಹದಲ್ಲಿ ನರದೌರ್ಬಲ್ಯ ದೂರವಾಗುತ್ತೆ.
ಮೂಗಿನಲ್ಲಿ ರಕ್ತಸ್ರಾವವಾಗುವ ಸಮಯದಲ್ಲಿ, ಗರಿಕೆ ಚಿಗುರಿನ ರಸವನ್ನು 2-3 ಹನಿ ಹಾಕಿದರೆ ತಕ್ಷಣ ನಿಲ್ಲುತ್ತೆ. ಹೊಟ್ಟೆಗೆ 20ml ನಂತೆ ಸೇವಿಸಬೇಕು.
ಗರಿಕೆ ಬೇರಿನ ಕಷಾಯವನ್ನು ಆಯುರ್ವೇದ ವೈದ್ಯರ ಸಲಹೆಯಂತೆ ಕುಡಿಸಿದರೆ, ನಿಶಕ್ತಿಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗು ಬೆಳವಣಿಗೆ ಕಾಣದ ಮಕ್ಕಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.
ಗರಿಕೆ ಚಿಗುರಿನ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ತಗ್ಗಿ ಮೂತ್ರದಲ್ಲಿನ ಉರಿ ನಿವಾರಣೆಯಾಗುತ್ತೆ. ವಾತನೊವು, ಕೀಲುನೋವು ವಾಸಿಯಾಗುತ್ತೆ.
ದಿನವು ಗರಿಕೆ ರಸಕ್ಕೆ ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಕಲಸಿ ಕುಡಿಯುತ್ತಾ ಬಂದರೆ, ಮೂತ್ರಪಿಂಡದಲ್ಲಿನ ಕಲ್ಲು ಕರಗುತ್ತೆ.
ಸ್ತ್ರೀಯರು 40-50ml ನಂತೆ ಸೇವಿಸಿದರೆ, ಋತಸ್ರಾವ ಸಮಸ್ಯೆಗಳು ನಿವಾರಣೆಯಾಗುತ್ತೆ.
ಗರಿಕೆ ರಸ ಸೇವಿಸುವುದರಿಂದ ಮೂತ್ರಬಂಧ ಸಮಸ್ಯೆ ವಾಸಿಯಾಗಿ, ಮೂತ್ರ ಸರಾಗವಾಗುತ್ತೆ.
-ಪಾರ್ಥಸಾರಥಿ ಕ್ಷತ್ರಿಯ


