Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರಳ ಹಾಗೂ ಗೊಂದಲ ರಹಿತ ಕಾನೂನು ರೂಪಿಸುವ ಕಾರ್ಯವಾಗಬೇಕು- ಬಸವರಾಜ ಬೊಮ್ಮಾಯಿ

Facebook
Twitter
Telegram
WhatsApp

ಚಿತ್ರದುರ್ಗ,(ಅ.22) :   ಕಾನೂನುಗಳು ಸರಳವಾಗಿರಬೇಕು. ಕಾಯ್ದೆ ರೂಪಿಸುವಾಗ ಹೆಚ್ಚಿನ ಗೊಂದಲಗಳಿಗೆ ಅವಕಾಶ ನೀಡಬಾರದು. ಕಾಯ್ದೆ ರೂಪಿಸುವ ಜನಪ್ರತಿನಿಧಿಗಳು ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ನ್ಯಾಯಾಲಯಗಳಲ್ಲಿ ಶೀಘ್ರವೇ ಅಗತ್ಯ ಮೂಲಭೂತ ಸೌಕರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊಸದುರ್ಗ ಪಟ್ಟಣದ ತರೀಕೆರೆ ರಸ್ತೆಯಲ್ಲಿನ  ಕೋರ್ಟ್ ಮುಂಭಾಗದ ದಿ: ಎಂ.ಪಿ.ಕಂಬೇಶ್ ವೇದಿಕೆಯಲ್ಲಿ, ಶನಿವಾರ ಜಿಲ್ಲಾ ನ್ಯಾಯಾಂಗ ಇಲಾಖೆ, ವಕೀಲರ ಸಂಘದಿಂದ ಆಯೋಜಿಸಲಾದ ಹೊಸದುರ್ಗ ನ್ಯಾಯಾಲಯದ 50 ನೇ ವರ್ಷದ ಸುವರ್ಣ ಮಹೋತ್ಸವ  ಸಮಾರಂಭದಲ್ಲಿ ಭಾಗವಹಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹೊಸದುರ್ಗ ನ್ಯಾಯಲಯವು ಈ ಭಾಗದ ಜನರಿಗೆ ಸುಧೀರ್ಘ ಸಮಯದಿಂದ ನ್ಯಾಯದಾನ ಮಾಡುವ ಕಾರ್ಯಮಾಡಿದೆ.  ಜೊತೆಗೆ ನಾಡಿಗೆ ಉತ್ತಮ ವಕೀಲರು ಹಾಗೂ ನ್ಯಾಯಾಧೀಶರನ್ನು ನೀಡಿದೆ.

ತಾಲೂಕು ಮಟ್ಟದ ನ್ಯಾಯಾಲಯದ ಕಾರ್ಯಕ್ರಮದಲ್ಲಿ ಸರ್ವೋಚ್ಛ ನ್ಯಾಯಲಯದ ನ್ಯಾಯಮೂರ್ತಿಗಳು ಭಾಗವಹಿಸುವುದು ಅಪರೂಪ. ಹೊಸದುರ್ಗ ತಾಲೂಕಿನ ಜನರಿಗೆ ಸ್ಪೂರ್ತಿ ನೀಡಲು ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಹೊಂದಿರುವ ಆಸಕ್ತಿ ಪ್ರತೀಕವಾಗಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ನ್ಯಾಯಮೂರ್ತಿಗಳು ಹೇಳುವ ಮಾತುಗಳನ್ನು ಆಡಳಿತದಲ್ಲಿ ಸರ್ಕಾರ ಅಳವಡಿಸಿಕೊಳ್ಳಲಿದೆ. ಜನರು ನ್ಯಾಯವನ್ನು ಕಷ್ಟದಿಂದ ಪಡೆಯುವಂತೆ ಅಗಬಾರದು. ಸಹಜವಾಗಿ ಎಲ್ಲರಿಗೂ  ನ್ಯಾಯ ದೊರಯಬೇಕು. ನ್ಯಾಯ ಪಡೆಯುವುದು ತುಟ್ಟಿಯಾದರೆ, ನ್ಯಾಯ  ಸಹಜವಾಗಿ ದೊರಕುವುದು ಕಷ್ಟವಾದರೆ ಜನರು ವ್ಯವಸ್ಥೆ ಬಗ್ಗೆ ಭ್ರಮ ನಿರಸವಾಗುತ್ತಾರೆ. ಸಮಾಜದಲ್ಲಿನ ಅನ್ಯಾಯದ ವಿರುದ್ದ ಹೋರಾಡುವುದನ್ನು ಕೈಬಿಡುತ್ತಾರೆ. ಬಡಜನರು ನ್ಯಾಯಾಲಯಕ್ಕೆ ಬರುವುದು ಕಷ್ಟವಾಗುತ್ತದೆ. ‘ನ್ಯಾಯಾಲಯದಲ್ಲಿ ಗೆದ್ದವನು ಸೋತ ಹಾಗೆ’ ಎನ್ನುವ ನಾಣ್ಣುಡಿಯಿದೆ. ಇದಕ್ಕೆ ವ್ಯತಿರಿಕ್ತವಾಗಿ ನ್ಯಾಯಾಲಯಗಳು ಕಾರ್ಯನಿರ್ವಹಿಸಬೇಕು. ದೇಶದ ಜನರಿಗೆ ನ್ಯಾಯಾಲಯದ ಬಗ್ಗೆ ಇನ್ನೂ ನಂಬಿಕೆ ಇದೆ. ತಂತ್ರಜ್ಞಾನ ಬಳಕೆ ಮಾಡಿ ತ್ವರಿತಗತಿಯಲ್ಲಿ ನ್ಯಾಯದಾನ ನೀಡುವ ಕೆಲಸವಾಗಬೇಕು. ತಳ ಹಂತದಲ್ಲಿ ಕಕ್ಷಿದಾರರಿಗೆ ಸಹಾಯ ನೀಡಬೇಕು.

ಭಾರತದಲ್ಲಿ ಸಾಮಾಜಿಕ ವ್ಯವಸ್ಥೆ ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಸರ್ವ ಸಮ್ಮತವಾದ ನ್ಯಾಯ ನೀಡುವುದು ಕಷ್ಟ. ನ್ಯಾಯಾಧೀಶರ ಮುಂದೆ ಹತ್ತು ಹಲವಾರು ಸವಾಲುಗಳು ಬರುತ್ತವೆ. ದೇಶದಲ್ಲಿ ಜನರ ನಂಬಿಕೆ  ಹಾಗೂ ಮೂಡ ನಂಬಿಕೆಗಳ ಕುರಿತು  ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತವೆ. ಆದರೂ ನ್ಯಾಯಲಯವು ಉತ್ತಮವಾಗಿ ಕೆಲಸ ನಿರ್ವಹಿಸಿ, ಇವುಗಳ ಕುರಿತು ಎಲ್ಲರಿಗೂ ಒಪ್ಪಿತವಾಗುವ ತೀರ್ಪು ನೀಡುತ್ತವೆ. ಬದಲಾವಣೆ ನಿರಂತರ ಪ್ರಕ್ರಿಯೆ. ಕಾನೂನುಗಳಲ್ಲಿ ಬಹಳಷ್ಟು ಬದಲಾವಣೆ ಅವಶ್ಯಯಿದೆ. ತೀರ್ಪುಗಳು ಕಾಲ ಕಾಲಕ್ಕೆ ಬದಲಾಗುತ್ತವೆ.  ಹಾಗಾಗಿ ಹಿಂದಿನ ದಶಕಗಳಲ್ಲಿ ನೀಡಿದ ತೀರ್ಪುಗಳು ಇಂದಿನ ಪರಿಸ್ಥಿತಿ ಅನ್ವಯವಾಗುವುದಿಲ್ಲ. ಅಂತರ್ ರಾಜ್ಯ ನದಿ ವಿವಾದಗಳು ಟ್ರಿಬ್ಯುನಲ್(ನ್ಯಾಯಾಧಿಕರಣ) ಗಳಲ್ಲಿ ಸಮಸ್ಯೆ ಬಗೆಹರಿಯುವುದಕ್ಕಿಂತ ಇನ್ನಷ್ಟೂ ಕ್ಲಿಷ್ಟವಾಗುತ್ತವೆ. ಟ್ರಿಬ್ಯುನಲ್‍ಗಳು ನೀಡುವ ತೀರ್ಪು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಸಮವಾಗಿರುತ್ತವೆ.  ಆದರೂ ರಾಜ್ಯಗಳು ತೀರ್ಪಿನ  ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವ ಅವಕಾಶವಿದೆ. ಇದರಿಂದ ದಶಕಗಳ ಕಾಲ ನದಿ ವಿವಾದಗಳು ಬಗೆಹರಿಯುವುದಿಲ್ಲ. ಈ ಭಾಗದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯಾಗಿ ಪಿಐಬಿ(ಸಾರ್ವಜನಿಕ ಬಂಡವಾಳ ಹೂಡಿಕೆ ಮಂಡಳಿ)ಯಲ್ಲಿ ಅನುಮೋದನೆ ನೀಡಲಾಗಿದೆ. ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ದೊರೆಯುವುದು ಬಾಕಿ ಇದ್ದು, ಶೀಘ್ರದಲ್ಲಿಯೇ ಇದು ಕೂಡ ನೆರವೇರಲಿದೆ. ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಲಿದೆ.  ಇದರಿಂದಾಗಿ  ಯೋಜನೆಗೆ  ಕೇಂದ್ರ ಸರ್ಕಾರದಿಂದ ಅಂದಾಜು ರೂ.13 ರಿಂದ 15 ಸಾವಿರ ಕೋಟಿ ಅನುದಾನ ಹರಿದು ಬರಲಿದೆ ಎಂದರು.

ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಅವರು ಮಾತನಾಡಿ,  1964 ರಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾಗಿದೆ. ಹಾಗೆಯೇ 1972 ರಲ್ಲಿ ಹೊಸದುರ್ಗ ಮುನ್ಸಿಫ್ ನ್ಯಾಯಾಲಯ ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಶಿಷ್ಟಾಚಾರ ಅಂಗವಾಗಿ ತಾಲೂಕು ನ್ಯಾಯಾಲಯದ ಕಾರ್ಯಕ್ರಮದಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಬರುವುದಿಲ್ಲ. ಆದರೆ  ರಾಜ್ಯದ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಹೆಚ್. ಬಿಲ್ಲಪ್ಪನವರ ಆಹ್ವಾನದ ಮೇರೆಗೆ ಆಗಮಿಸಿದ್ದೇನೆ. ಇಂದು ಹೊಸದುರ್ಗ ತಾಲೂಕು ನ್ಯಾಯಾಲಯ ನಡೆದು ಬಂದ ಹಾದಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.  ನ್ಯಾಯಾಲಯದಲ್ಲಿ 4689 ಪ್ರಕರಣಗಳು ಬಾಕಿಯಿವೆ. ಹೊಸ ಪ್ರಕರಣಗಳಿಗೆ ಸರಿಸಮನಾಗಿ ಹಳೆಯ ಪ್ರಕರಣಗಳು ವಿಲೇವಾರಿಯಾಗಬೇಕು. ನ್ಯಾಯಾಲಯದಲ್ಲಿ ಪ್ರಕರಣಗಳು ಬಹಳ ದಿನಗಳು ಉಳಿಯಬಾರದು. ನ್ಯಾಯದಾನ ಪ್ರಕ್ರಿಯಲ್ಲಿ ವಿಳಂಬ ಮಾಡಿದರೆ, ಜನರಲ್ಲಿ ನ್ಯಾಯಾಲಯಗಳ ಬಗ್ಗೆ ಉತ್ತಮ ಭಾವನೆ ಬರುವುದಿಲ್ಲ. ನ್ಯಾಯವಾದಿಗಳು ಸರಳವಾಗಿ ವ್ಯಾಜ್ಯಗಳನ್ನು ಬಗೆಹರಿಸಬಹುದು. ಜನರಿಗೆ ಉಚಿತವಾಗಿ ಕಾನೂನು ನೆರವು ಲಭಿಸುತ್ತಿದೆ. ಯಾರಿಗೂ ನ್ಯಾಯವನ್ನು ನಿರಾಕರಿಸಬಾರದು, ಯಾರಿಗೂ ನ್ಯಾಯದಾನ ತಡ ಮಾಡಬಾರದು. ಯಾರಿಗೂ ನ್ಯಾಯವನ್ನು ಮಾರಿಕೊಳ್ಳಬಾರದು ಎಂಬ ನೈತಿಕತೆ ಎಲ್ಲರಲ್ಲೂ ಇರಬೇಕು ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, 50 ವರ್ಷ ಪೂರೈಸಿದ ಹೊಸದುರ್ಗ ತಾಲೂಕು ನ್ಯಾಯಾಲಯದ ಕಾರ್ಯವೈಖರಿ ಉತ್ತಮವಾಗಿದೆ. ರಾಜ್ಯದ ಇತರೆ ನ್ಯಾಯಾಲಯಗಳಿಗೆ ಹೋಲಿಸಿದರೆ ಹೊಸದುರ್ಗ ತಾಲೂಕು ನ್ಯಾಯಾಲಯದಲ್ಲಿ ಕಡಿಮೆ ಪ್ರಕರಣಗಳು ಇವೆ. ಸರ್ಕಾರಿ ವ್ಯಾಜ್ಯಗಳನ್ನು ಶೀಘ್ರವಾಗಿ ನ್ಯಾಯಾಲಯದಿಂದ ಬಗೆಹರಿಸಲಾಗಿದೆ. ನ್ಯಾಯಾಲಯದ ಹೊರಗಡೆ ಸುಲಭವಾಗಿ ವ್ಯಾಜ್ಯಗಳು ಮುಕ್ತಾಯವಾಗುವ ಅವಕಾಶ ಕಲ್ಪಿಸಬೇಕು. ಲೋಕ ಅದಾಲತ್‍ಗಳು, ಮಧ್ಯಸ್ಥಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಸಾರ್ವಜನಿಕರಿಗೆ ದುಬಾರಿಯಾಗದ ರೀತಿಯಲ್ಲಿ ನ್ಯಾಯ ದೊರಕಬೇಕು. 3 ಕೋಟಿ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿಯಿವೆ. ನ್ಯಾಯಾಧೀಶರ ಮೇಲೆ ಹೆಚ್ಚಿನ ಒತ್ತಡವಿದೆ. ಪ್ರತಿನಿತ್ಯ ಹಲವಾರು ಪ್ರಕರಣಗಳನ್ನು ಆಲಿಸುವ ಕೆಲಸ ಮಾಡಿ ನ್ಯಾಯಾಧೀಶರು ತ್ವರಿತ ನ್ಯಾಯದಾನಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ದೇಶಕ್ಕೆ ಮಾದರಿಯಾಗಿದೆ. ನ್ಯಾಯಾಲಯದ ವ್ಯವಹಾರಗಳನ್ನು ಸರಳಗೊಳಿಸುವ, ಅಂಗೈಯಲ್ಲಿ ನ್ಯಾಯಾಲಯದ ತೀರ್ಪುಗಳು ಲಭಿಸುವಂತೆ ಮಾಡಲು ತಂತ್ರಾಂಶವನ್ನು ರೂಪಿಸಲಾಗುವುದು. ನ್ಯಾಯವಾದಿಗಳೂ, ಕಕ್ಷಿದಾರರಿಗೂ ಸಹ ಮೂಲಭೂತ ಸೌಕರ್ಯಗಳು ನೀಡಬೇಕಿದೆ. ನ್ಯಾಯಲಯಗಳಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ನಿರ್ಮಿಸಲಾಗುವುದು. ಕಡಿಮೆ ಪ್ರಕರಣಗಳು ಇರುವ ನ್ಯಾಯಾಲಯಗಳು ನಿಜವಾಗಿ ಉತ್ತಮ ನ್ಯಾಯಾಲಯಗಳಾಗಿವೆ ಎಂದು ಸಚಿವ ಮಾಧುಸ್ವಾಮಿ ಅಭಿಪ್ರಾಯ ಪಟ್ಟರು.

ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ಮಾತನಾಡಿ, ರಾಜ್ಯದಲ್ಲಿ ಬರುವ ನವೆಂಬರ್ ಮಾಹೆಯಲ್ಲಿ ಬೃಹತ್ ಲೋಕ ಅದಲಾತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗರಿಷ್ಠ ಸಂಖ್ಯೆಯಲ್ಲಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಲಾಗುವುದು ಎಂದರು.
ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಅವರು ಹೊಸದುರ್ಗದ ನ್ಯಾಯಾಲಯ ನಡೆದು ಬಂದ ಹಾದಿ ಹಾಗೂ ತಮ್ಮ ವೃತ್ತಿ ಬದುಕಿನ 50 ವರ್ಷಗಳ ಹಿಂದಿನ ಹಲವು ನೆನೆಪುಗಳನ್ನು ಸ್ಮರಿಸಿಕೊಂಡರು.

ನ್ಯಾಯಾಲದಲ್ಲಿ ಅನೇಕ ವಿಷಯಗಳಿವೆ. ಸರಳವಾದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ತಜ್ಞರೇ ಬೇಕಾಗಿಲ್ಲ. ಸಣ್ಣ ಸಣ್ಣ ಪ್ರಕರಣಗಳನ್ನು ತಮ್ಮ ಹಂತದಲ್ಲಿಯೇ ಬಗೆಹರಿಸಿಕೊಳ್ಳುವುದು ಅತ್ಯುತ್ತಮ. ನಮ್ಮ ಆಲೋಚನೆ, ನಡಾವಳಿಕೆಯಿಂದ ಇನ್ನೊಬ್ಬರ ಚಿಂತನೆ ಪರಿವರ್ತಿಸಬಹುದಾದರೆ ಇದರಿಂದ ಸಮಾಜವನ್ನು ಪರಿವರ್ತಿಸಬಹುದು. ನಾವುಗಳ ಸಮಾಜಮುಖಿಯಾಗಿ, ರಾಷ್ಟ್ರಪ್ರಜ್ಞೆಯೊಂದಿಗೆ, ರಾಷ್ಟ್ರ ಸೇವೆ ಮಾಡೋಣ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್,ಸುನೀಲ್ ದತ್ ಯಾದವ್, ಅಶೋಕ್ ಎಸ್.ಕಿಣಗಿ, ಜ್ಯೋತಿ ಮೂಲಿಮನಿ, ಜಿ.ಬಸವರಾಜ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮನಗೋಳಿ ಪ್ರೇಮಾವತಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್, ರಾಜ್ಯ ಉಚ್ಛ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಮುರಳಿಧರ ಪೈ, ವಕೀಲರ ಸಂಘದ ಅಧ್ಯಕ್ಷ ಡಿ. ನಿರಂಜನಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  ಕಾರ್ಯಕ್ರಮದ ಅಂಗವಾಗಿ ವಿವಿಧ ವಕೀಲರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!