ಬೆಂಗಳೂರು: ವಿಧಾನಸಭೆ ಚುನಾವಣೆ ವರ್ಷವಷ್ಟೇ ಇದೆ. ಈಗಲಾದರೂ ಸಚಿವ ಸಂಪುಟ ವಿಸ್ತರಣೆ ಯಾಗಲಿ ಎಂಬುದು ಸಚಿವಾಕಾಂಕ್ಷಿಗಳ ಮನದಾಸೆ. ಆದರೆ ಅದ್ಯಾಕೋ ಸರ್ಕಾರದಲ್ಲಿ ಇದಕ್ಕೆ ಘಳಿಗೆ ಕೂಡಿ ಬರುತ್ತಿಲ್ಲ. ಹೈಕಮಾಂಡ್ ಅಸ್ತು ಎನ್ನುತ್ತಿಲ್ಲ. ಇದೀಗ ಸಿಎಂ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಹೈಕಮಾಂಡ್ ಭೇಟಿ ಮಾಡಿ, ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ. ಇದೆ ಬೆನ್ನಲ್ಲೇ ಮತ್ತೆ ಸಚಿವಾಕಾಂಕ್ಷಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ.
ಈಗಾಗಲೇ 40% ಕಮಿಷನ್ ವಿಚಾರಕ್ಕೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅತ್ತ ರಮೇಶ್ ಜಾರಕಿಹೊಳಿ ಸಿಡಿ ಕೇಸಿನಲ್ಲಿ ಸಿಕ್ಕಿ ರಾಜೀನಾಮೆ ಕೊಟ್ಟಿದ್ದರು. ಹೊಸ ಆಕಾಂಕ್ಷಿಗಳ ಜೊತೆಗೆ ಈ ಇಬ್ಬರು ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ. ಇದೀಗ ಈ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡುವಂತ ಭೇಟಿಯಾಗಿದೆ.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇಂದು ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಕುತೂಹಲ ಮೂಡಿಸಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈಶ್ವರಪ್ಪ ತಮ್ಮ ಕ್ಷೇತ್ರದಲ್ಲಿಯೇ ಉಳಿದು ಬಿಟ್ಟರು. ಬಳಿಕ ಒಂದೆರೆಡು ಬಾರಿ ಬೆಂಗಳೂರಿಗೆ ಬಂದು ಸಿಎಂ ಭೇಟಿಯಾಗಿದ್ದರು. ಇದೀಗ ಮತ್ತೆ ಇಂದು ಸಿಎಂ ಭೇಟಿಯಾಗಿರುವ ಈಶ್ವರಪ್ಪ ನಡೆ ಕುತೂಹಲ ಮೂಡಿಸಿದೆ.