ಮೇ. 31 ರಂದು ಅಜ್ಜಂಪುರ ಸೊಲ್ಲಾಪುರದಲ್ಲಿ ರೈತರ ಮನವೊಲಿಕೆ ಸಭೆ

suddionenews
3 Min Read

ಚಿತ್ರದುರ್ಗ, (ಮೇ.25) : ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣ ಕಾಮಗಾರಿ ಅಡ್ಡಿಯುಂಟು ಮಾಡಿದ ಅಜ್ಜಂಪುರದ ರೈತರ ಮನವೊಲಿಸುವ ಸಂಬಂಧ ಮೇ 31 ರಂದು ಸೊಲ್ಲಾಪುರದಲ್ಲಿ ಸಭೆ ಕರೆಯಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ತಿಳಿಸಿದ್ದಾರೆಂದು ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭದ್ರ ಕಾಲುವೆ ನಿರ್ಮಾಣಕ್ಕೆ ಅಜ್ಜಂಪುರ ರೈತರು  ಅಡ್ಡಿ ಮಾಡುತ್ತಿರುವುದರ ಬಗ್ಗೆ ಸನಿತಿ ನಿಯೋಗ ಜಿಲ್ಲಾಧಿಕಾರಿಗಳನ್ನು ಮಂಗವಾರ ಭೇಟಿ ಮಾಡಿದಾಗ ಈ ಭರವಸೆ ವ್ಯಕ್ತವಾಗಿದೆ.  ಸುಮಾರು ಮುಕ್ಕಾಲು ತಾಸು ಚರ್ಚಿಸಿದ ಅವರು ಮೇ 31 ರಂದು  ತರಿಕೆರೆ ಉಪ ವಿಭಾಗಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಸಭೆ ಕರೆಯಲಾಗುವುದು. ಅಂದಿನ ಸಭೆಯಲ್ಲಿ ರೈತರ ಮನವೊಲಿಸಿ ಜೂನ್ ಒಂದರಿಂದಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದರೆಂದು ಅವರು ವಿವರಿಸಿದರು.

ಅಜ್ಜಂಪುರ ರೈತರು ಕಾಮಗಾರಿಗೆ ತಡೆ ಮಾಡುತ್ತಿರುವ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಲುವೆ ನಿರ್ಮಾಣಕ್ಕೆ ತೊಡಕಾಗಿದೆ. ಅಬ್ಬಿನಹೊಳಲು ಬಳಿ 1.9 ಕಿಮಿ ಹಾಗೂ  ಸೊಲ್ಲಾಪುರ, ಕಾಟನಕೆರೆ,  ಚಿಣ್ಣಾಪುರದ ಬಳಿ 8 ಕಿಮೀ ಉದ್ದದ ಕಾಮಗಾರಿಗೆ ತಡೆ ಮಾಡಲಾಗಿದೆ. ಅಬ್ಬಿನ ಹೊಳಲು ಕಾಮಗಾರಿ ಪೂರ್ಣಗೊಂಡರೆ ಹೊಳಲ್ಕೆರೆ ತಾಲೂಕಿನ ಕೆರೆಗಳನ್ನು ಈ ವರ್ಷವೇ ತುಂಬಿಸಬಹುದು. ಅದೇ ರೀತಿ ತುಮಕೂರು ಬ್ರಾಂಚ್ ಕಾಲುವೆಯ 8 ಕಿಮೀ ಕಾಮಗಾರಿ ಪೂರ್ಣಗೊಂಡಲ್ಲಿ ಎರಡು ಮೋಟಾರು ಪಂಪುಗಳ ಮೂಲಕ ವಿವಿ ಸಾಗರ ಜಲಾಶಯವ ಭರ್ತಿ ಮಾಡಬಹುದು.

ಅಜ್ಜಂಪುರ ರೈತರ ಅಡ್ಡಿಯಂದಾಗಿ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗಿ ಯೋಜನಾ ವೆಚ್ಚ ಕೂಡಾ ಜಾಸ್ತಿಯಾಗಲಿದೆ. ಹಾಗಾಗಿ ಕಾಲುವೆ ನಿರ್ಮಣಕ್ಕೆ ಅಡ್ಡಿಯಾಗಿರುವುದ ನಿವಾರಣೆ ಮಾಡುವಂತೆ ಸಮಿತಿ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟಿತು.

25-3-2021 ರಂದು ನಡೆದ ಕೇಂದ್ರ ಜಲಶಕ್ತಿ ಮಂತ್ರಾಲಯದ 15 ನೇ ಇನ್ ವೆಸ್ಟ್್ಮೆಂಟ್ ಕ್ಲಿಯರೆನ್ಸ್ ಸಭೆ ಭದ್ರಾ ಮೇಲ್ದಂಡೆ ಯೋಜನೆಗೆ 16,125 ಕೋಟಿ ರುಗಳ ಅಂದಾಜು  ವೆಚ್ಚ ಪರಿಗಣಿಸಿ  2023-24 ರ ಅಂತ್ಯಕ್ಕೆ ಫೂರ್ಣಗೊಳಿಸುವ ಷರತ್ತಿಗೆ ಒಳಪಟ್ಟು ಸಮ್ಮತಿಸಿದೆ. ಭವಿಷ್ಯದಲ್ಲಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಗೆ ಒಳಪಡುವುದರಿಂದ ಕಾಮಗಾರಿ ಪೂರ್ಣಗೊಳಿಸುವುದು ಅಗತ್ಯವಾಗಿದೆ ಎಂಬ ಅಂಶವನ್ನುಹೋರಾಟ ಸಮಿತಿ ಜಿಲ್ಲಾಧಿಕಾರಿ ಗಮನಕ್ಕೆ ತಂದಿತು.

ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ರಮೇಶ್, ಮೊಬೈಲ್ ನಲ್ಲಿ ತರಿಕೆರೆ ಉಪ ವಿಭಾಗಾಧಿಕಾರಿಗಳ ಸಂಪರ್ಕಿಸಿದರು. ಮೇ 31 ರಂದು ರೈತರ ಸಭೆ ನಡೆಸಿ ಜೂನ್ ಒಂದರಿಂದಲೇ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳ ತಕ್ಷಣದ ಸ್ಪಂದನೆಗೆ ಹೋರಾಟ ಸಮಿತಿ ಅಭಾರಿಯಾಗಿದೆ. ಮೇ 31 ರಂದು ಸೊಲ್ಲಾಪುರದಲ್ಲಿ ನಡೆಯವ ಸಭೆಯಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಭಾಗವಹಿಸುವ ಬಗ್ಗೆ ಇನ್ನೆರೆಡು ದಿನಗಳಲ್ಲಿ ನಿರ್ಣಯಿಸಲಾಗುವುದೆಂದು ಲಿಂಗಾರೆಡ್ಡಿ ತಿಳಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ ಮಾತನಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ನೀಡಿರುವ ಭರವಸೆ ಆಶಾದಾಯಕವಾಗಿದೆ. ಜೂನ್ ಒಂದರಿಂದ ಕಾಲುವೆ ನಿರ್ಮಾಮದ ಕೆಲಸ ಆರಂಭವಾದಾಲ್ಲಿ ಈ ವರ್ಷವೇ ಹೊಳಲ್ಕೆರೆ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸಬಹುದು. ಭದ್ರಾ ಮೇಲ್ದಂಡೆ ಕಾಮಗಾರಿಗೆ ಇರುವ ಅಡೆ ತಡೆ ನಿವಾರಿಸಿ ಕಾಮಗಾರಿಗೆ ಚುರುಕಿನ ಚಾಲೆ ನೀಡುವ ಸಂಬಂಧ ಜೂನ್ ಎರಡನೇ ತಾರೀಕಿನ ಒಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗುವುದು ಎಂದರು.

ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು,  ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ತಾಲೂಕು ಅಧ್ಯಕ್ಷ ಹಂಪನಯ್ಯನಮಾಳಿಗೆ ಧನಂಜಯ, ಮುದ್ದಾಪುರ ನಾಗರಾಜ್, ಚಿಕ್ಕಪ್ಪನಹಳ್ಳಿ ಷಣ್ಮುಖ ಸುದ್ದಿಗೋಷ್ಠಿಯಲ್ಲಿ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *