ನವದೆಹಲಿ : ದೇಶಾದ್ಯಂತ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಟೋಲ್ ಸಂಗ್ರಹಕ್ಕೆ ಜಿಪಿಎಸ್ ಆಧಾರಿತ ತಂತ್ರಜ್ಞಾನ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಸೋಚಾಮ್ ಸಂಸ್ಥಾಪನಾ ಸಪ್ತಾಹದಲ್ಲಿ ಮಾತನಾಡಿ, ಟೋಲ್ ಬೂತ್ನಲ್ಲಿ ಕಟ್ಟಬೇಕಾದ ಶುಲ್ಕವನ್ನು ಮುಂದಿನ ದಿನಗಳಲ್ಲಿ ಚಾಲಕರ ಬ್ಯಾಂಕ್ ಖಾತೆಯಿಂದಲೇ ಕಡಿತಗೊಳಿಸಲಾಗುತ್ತದೆ. ವಾಹನಗಳ ತಡೆರಹಿತ ಚಾಲನೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಿಪಿಎಸ್ ತಂತ್ರಜ್ಞಾನ ಆಧಾರಿತ ಟೋಲ್ ಶುಲ್ಕ ಸಂಗ್ರಹ ವ್ಯವಸ್ಥೆ ಜಾರಿಗೆ ತರಲಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತ ಸಂಪೂರ್ಣ ಟೋಲ್ಬೂತ್ ಮುಕ್ತವಾಗಲಿದೆ ಎಂದರು.
ಹಳೆಯ ವಾಹನಗಳಲ್ಲೂ ಜಿಪಿಎಸ್ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಈಗ ಎಲ್ಲ ಕಮರ್ಷಿಯಲ್ ವಾಹನಗಳು ವಾಹನ ಟ್ರ್ಯಾಕಿಂಗ್ ವ್ಯವಸ್ಥೆಗಳೊಂದಿಗೆ ಬರುತ್ತಿವೆ. ಹಳೆ ವಾಹನಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲು ಕೇಂದ್ರ ಸರ್ಕಾರದಿಂದ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
