ಯಾರನ್ನೂ ದೂಷಿಸುವುದಿಲ್ಲ:ಡಿ ಕೆ ಶಿವಕುಮಾರ್

suddionenews
2 Min Read

ಬೆಂಗಳೂರು: ರಾಜ್ಯದ ಮಹಾ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಳೆದ ಎರಡು ವರ್ಷಗಳಿಂದ ಜನ ಸಂಕಷ್ಟ ಅನುಭವಿಸಿದ್ದು, ತಾಯಿ ಚಾಮುಂಡೇಶ್ವರಿ ಈ ಸಂಕಷ್ಟ ಬಗೆಹರಿಸಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಆರ್ಥಿಕ ವ್ಯವಸ್ಥೆ ಉತ್ತಮವಾಗಲಿ. ಆರೋಗ್ಯ, ಸಾಮಾಜಿಕ, ಶೈಕ್ಷಣಿಕವಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಮಕ್ಕಳ ಶಾಲೆ ಆರಂಭವಾಗಿದ್ದು, ಅವರು ಶಿಕ್ಷಣದ ಬಗ್ಗೆ ಗಮನಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಈ ವೇಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಸಲೀಂ ಹಾಗೂ ವಿ.ಎಸ್ ಉಗ್ರಪ್ಪ ಅವರ ಸಂಭಾಷಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಬಗ್ಗೆ ಯಾರು, ಯಾವ ರೀತಿ ಮಾತಾಡಬೇಕೋ ಮಾತನಾಡಿದ್ದಾರೆ. ಅದನ್ನು ಯಾರು ಯಾವ ರೀತಿ ಬಳಸಿಕೊಳ್ಳಬೇಕೋ, ಬಳಸಿಕೊಂಡಿದ್ದಾರೆ. ನಾನು ಬಿಜೆಪಿ ಅವರನ್ನಾಗಲಿ, ಮಾಧ್ಯಮಗಳನ್ನಾಗಲಿ ದೂಷಿಸುವುದಿಲ್ಲ. ನಾವು ಅವಕಾಶ ಕೊಟ್ಟಿದ್ದರಿಂದ ಬೇರೆಯವರು ಬಳಸಿಕೊಂಡಿದ್ದಾರೆ. ನಾನು ಯಾರನ್ನೂ ದೂಷಣೆ ಮಾಡುವುದಿಲ್ಲ. ಇದು ನನ್ನ ವೈಯಕ್ತಿಕವಾದುದಲ್ಲ, ಪಕ್ಷದ ವಿಚಾರ. ಈ ಪಕ್ಷವನ್ನು ನಾನು ಮಾತ್ರ ಕಟ್ಟಿಲ್ಲ. ಹಳ್ಳಿಯ ಲಕ್ಷಾಂತರ ಜನ, ಕಾರ್ಯಕರ್ತರು ಈ ಪಕ್ಷ ಕಟ್ಟಿದ್ದಾರೆ.

ಕಾಂಗ್ರೆಸ್ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಯಾರು ಏನು ಮಾತನಾಡುತ್ತಾರೋ ಮಾತಾಡಲಿ. ಕಳೆದ ಎರಡು ವರ್ಷಗಳಿಂದ ಯಾರು ಏನೆಲ್ಲಾ ಮಾತನಾಡಿದ್ದಾರೆ ಅದನ್ನೂ ನೋಡಲಿ. ಎಚ್. ವಿಶ್ವನಾಥ್, ಯೋಗೀಶ್ವರ್, ಮಂಚದ ಮೇಲೆ ರಮೇಶ್ ಜಾರಕಿಹೊಳಿ ಅವರು ಮಾತನಾಡಿದರಲ್ಲಾ.., ಅದಕ್ಕೆ ಉತ್ತರ ಯಾಕಿಲ್ಲ? ಯತ್ನಾಳ್ ಅವರ ಹೇಳಿಕೆಗೆ ಸಿ.ಟಿ ರವಿ ಅವರಾಗಲಿ, ಈಗ ಮಾತನಾಡುತ್ತಿರುವವರಾಗಲಿ ಯಾಕೆ ಉತ್ತರ ನೀಡಲಿಲ್ಲ. ಯಡಿಯೂರಪ್ಪ, ವಿಜಯೇಂದ್ರ ಕಲೆಕ್ಷನ್, ಅವರ ಮೊಮ್ಮಗನ ಬಗ್ಗೆ ಮಾತನಾಡಿದಾಗ ಇವರ ಧ್ವನಿ ಏನು ಬಿದ್ದು ಹೋಗಿತ್ತಾ? ಆಗ್ಯಾಕೆ ಮಾತನಾಡಲಿಲ್ಲ?’

ಡಿ.ಕೆ ಶಿವಕುಮಾರ್, ಯಡಿಯೂರಪ್ಪ, ದೇವೇಗೌಡರನ್ನು ಒಂದೇ ವೇದಿಕೆ ಮೇಲೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂಬ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ‘ನಾನು ಪಕ್ಷದ ಅಧ್ಯಕ್ಷ, ಆ ಕೆಲಸ ಮಾಡುತ್ತಿದ್ದೇನೆ. ಅವರು ದೊಡ್ಡ ನಾಯಕರು. ಎಲ್ಲರ ಸಂಪರ್ಕ ಇಟ್ಟುಕೊಂಡಿರುವವರು. ಕಾರ್ಯಕರ್ತರ ಜತೆ ನಿಂತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಕರ್ತವ್ಯ. ನಾನು ಆ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *