Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಳೆ ಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮಾ. 25 ರಂದು ಬೃಹತ್ ಪ್ರತಿಭಟನಾ ಸಮಾವೇಶ : ಬಸವನಾಗಿದೇವ ಶರಣರು

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ ಮಾ, 23 :
ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವ ನ್ಯಾಯಮೂರ್ತಿ ನಾಗಮೋಹನ್‍ದಾಸ್‍ರವರ ಆಯೋಗದ ವರದಿಯನ್ನು ರಾಜ್ಯ ಸರ್ಕಾರವು ತಿರಸ್ಕರಿಸಬೇಕು, ಒಳಮೀಸಲಾತಿ ರಹಿತ ಹಳೆ ಮೀಸಲಾತಿಯ ಜಾರಿಗಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಮಾ. 25ರ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವುದಾಗಿ ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ಭಾರತದ ಸರ್ವೋಚ್ಚ ನ್ಯಾಯಾಲಯವು ದಿನಾಂಕ: 01.08.2024 ರಂದು ಒಳಮೀಸಲಾತಿಯನ್ನು ನೀಡಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ತೀರ್ಪು ನೀಡಿದ್ದು, ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಉಪ ಜಾತಿಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಗದ ಬಗ್ಗೆ ಖಚಿತವಾದ ಅಂಕಿಅಂಶಗಳ ವರದಿ ಆಧಾರದ ಮೇಲೆ ಹಾಗೂ ಅಗತ್ಯವಾದ ಪೂರ್ಣ ಅಂಕಿ ಅಂಶಗಳನ್ನು ಪಡೆದು ಒಳಮೀಸಲಾತಿ ನೀಡಬಹುದೆಂದು ಆದರೆ, ಅನುಕೂಲ ಸಿಂಧು ರಾಜಕೀಯಕ್ಕಾಗಿ ಮನಸ್ಸಿಗೆ ಬಂದಂತೆ ಒಳಮೀಸಲಾತಿ ನೀಡಲಾಗದು ಎಂದು ರಾಜ್ಯ ಸರ್ಕಾರಗಳು ಮಾಡುವ ಮೀಸಲಾತಿ ವರ್ಗೀಕರಣವು ನ್ಯಾಯಾಂಗದ ಪುನರ್ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಸದರಿ ತೀರ್ಪಿನನ್ವಯ ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ದಾಸ್ ರವರ ಅಧ್ಯಕ್ಷತೆಯಲ್ಲಿ ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಸಮೀಕ್ಷೆ ನಡೆಸಿ ವರದಿಯನ್ನು ಪಡೆದು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವು ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿದೆ ಎಂದು ದೂರಿದರು.

ಚಿತ್ರದುರ್ಗ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಶೇಷಪ್ಪ ಹೆಚ್ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸದೇ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಗತ್ಯ ಅಂಕಿ ಅಂಶಗಳನ್ನು ಕ್ರೂಢೀಕರಿಸದೇ ಒಂದು ಜಾತಿಯನ್ನು ಒಲೈಸಲು ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನಸಂಖ್ಯೆಯನ್ನು 04 ಭಾಗಗಳಾಗಿ ವಿಂಗಡಿಸಿ 1.38ಲಕ್ಷ ಬಲಗೈ ಸಮುದಾಯದ ಜನಸಂಖ್ಯೆಯನ್ನು ಅಲೆಮಾರಿ ಗುಂಪಿಗೆ, 2,58,915 ಜನಸಂಖ್ಯೆಯನ್ನು ಮಾದಿಗರ ಗುಂಪಿಗೆ ಸರ್ಕಾರದ ನಿಬಂಧನೆಗಳಿಗೆ ವಿರುದ್ಧವಾಗಿ 4,74.954 ಜನರನ್ನು ಆದಿಕರ್ನಾಟಕ, ಆದಿ-ದ್ರಾವಿಡ ಹಾಗೂ ಆದಿ-ಆಂಧ್ರಗಳೆಂದು ವಿಂಗಡಿಸಿ ಶೇಕಡ 1ರಷ್ಟು ಮೀಸಲಾತಿ ನಿಗದಿಪಡಿಸಲು ಶಿಫಾರಸ್ಸು ಮಾಡಿರುವುದಲ್ಲದೇ ಜನರಲ್ ಮೆರಿಟ್‍ನಲ್ಲಿ ನೇಮಕವಾಗಿರುವ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ನೌಕರರನ್ನು ಒಟ್ಟಾರೆ ಸಂಖ್ಯೆಯಲ್ಲಿ ಪರಿಗಣಿಸಿರುವುದಲ್ಲದೇ ಸಾಮಾನ್ಯ ಸ್ಥಾನಗಳಲ್ಲಿ ಗೆದ್ದಿರುವ ಜನಪ್ರತಿನಿಧಿಗಳನ್ನು ಬಲಗೈ ಜನ ಪ್ರತಿನಿಧಿಗಳ ಒಟ್ಟಾರೆ ಸಂಖ್ಯೆಯಲ್ಲಿ ಪರಿಗಣಿಸಿ ದುರುದ್ದೇಶ ಪೂರಿತವಾದ ಪಕ್ಷಪಾತದಿಂದ ಕೂಡಿದ ವರದಿ ಯನ್ನು ಸಿದ್ಧಪಡಿಸಿ ಚೆನ್ನಾಗಿ ಉಂಡವರು, ತ್ಯಾಗ ಮಾಡಬೇಕು ಎಂದು ಉದ್ದೇಶ ಪೂರ್ವಕವಾಗಿಯೇ ಬಲಗೈ ಸಮುದಾಯಕ್ಕೆ ಯಾವುದೇ ಮೀಸಲಾತಿ ಸೌಲಭ್ಯ ದೊರೆಯದಂತೆ ವರದಿ ನೀಡಿರುತ್ತಾರೆ ಎಂದು ಆರೋಪಿಸಿದರು.

ಛಲವಾದಿ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ಸದರಿ ವರದಿಯನ್ವಯ ರಾಜ್ಯ ಸರ್ಕಾವು ಪರಿಶಿಷ್ಟ ಜಾತಿಯ ಬಲಗೈ ಸಮುದಾಯವನ್ನು ಗ್ರೂಪ್ ಬಗ್ಗೆ ಸೇರಿಸುವುದರ ಮೂಲಕ ಯಾವುದೇ ಉನ್ನತ ಹುದ್ದೆಗಳು ಹೊಲಯ/ಛಲವಾದಿ ಬಲಗೈ ಸಮುದಾಯಕ್ಕೆ ಸಿಗದಂತೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿರುತ್ತದೆ.ರಾಜ್ಯ ಸರ್ಕಾರವು ಶೇಕಡ 17+7ರ ಮೀಸಲಾತಿ ಪ್ರಮಾಣಕ್ಕೆ ರಾಜ್ಯ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು, ಸಾಮಾನ್ಯ ವರ್ಗದವರು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕೆಂದು ಹೋರಾಟ ರೂಪಿಸಿದ ಹಿನ್ನೆಲೆಯಲ್ಲಿ ಶೇಕಡ 15+3ರ ಪ್ರಮಾಣದಲ್ಲಿ ಒಳಮೀಸಲಾತಿ ರಹಿತ ನೇಮಕ ಮಾಡಲು ಆದೇಶ ಹೊರಡಿಸಿ ಗೆಜೆಟ್ ನಲ್ಲಿ ಪಕಟಿಸಿರುತ್ತದೆ. ಆದರೆ, 101 ಜಾತಿಗಳಲ್ಲಿ ಒಂದು ಸಮುದಾಯವು ಶೇಕಡ 15+30 ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅಳವಡಿಸಬೇಕೆಂದು ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ: 27.03.2026ರಂದು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯನ್ನು ಏರ್ಪಡಿಸಲಾಗಿದ್ದು, ಸದರಿ ಸಭೆಯಲ್ಲಿ ಶೇಕಡ 15+3ರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅಳವಡಿಸಬಾರದೆಂದು ತಪ್ಪಿದ್ದಲ್ಲಿ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟವು ಸರ್ಕಾರಕ್ಕೆ ಈ ಮೂಲಕ ಸ್ಪಷ್ಟವಾಗಿ ಎಚ್ಚರಿಸುತ್ತದೆ ಎಂದಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿ ಅಂಶಗಳೊಂದಿಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಆಯೋಗದ ಅಂಕಿ ಅಂಶಗಳನ್ನು ಹೊಲಿಕೆ ಮಾಡುವುದು, ವ್ಯತ್ಯಾಸಗಳು ಕಂಡುಬಂದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳುವುದು. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯು ಪ್ರಸ್ತುತ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯ ಸಂಪೂರ್ಣ ಅಧ್ಯಯನಕ್ಕೆ ಕಲ್ಪಿಸುವುದು ಪುರಸ್ಕೃತವಾದ ಭಾಗ, ತಿರಸ್ಕೃತವಾದ ಭಾಗವನ್ನು, ಪರೀಷ್ಕೃತವಾದ ಭಾಗಗಳನ್ನು ತಿಳಿದುಕೊಳ್ಳುವುದು. ಈವರೆಗೂ ಜಾರಿಯಲ್ಲಿರುವ ಸುಪ್ರೀಂಕೋರ್ಟ್ ಆದೇಶಗಳ ಮಿತಿಯಲ್ಲಿ ಮತ್ತು ಮಾಹಿತಿಯಲ್ಲಿ ಒಳಪಡುತ್ತದೆ ಎಂದು ತಿಳಿಯುವುದು. ಎಲ್ಲಾ ಸಮುದಾಯಗಳ ಪರಮಪೂಜ್ಯರನ್ನ ಸಭೆಕರೆದು ನಿರ್ಧಾರವನ್ನು ತೆಗೆದುಕೊಳ್ಳುವುದು. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳ ಗುಂಪನ್ನು ಪಟ್ಟಿಮಾಡುವುದು. ಚಿತ್ರದುರ್ಗ ಜಿಲ್ಲೆಯಲ್ಲಿ ಛಲವಾದಿ, ಬಲಗೈ, ಹೊಲಯ ಸಮುದಾಯ ಕೇವಲ 223 ಎಂದು ನ್ಯಾಯಮೂರ್ತಿ ನಾಗಮೋಹನ್ದಾಸ್ ವರದಿಯಲ್ಲಿ ದಾಖಲಿಸಿರುವುದನ್ನು ಮರು ಪರಿಶೀಲಿಸಿ ಉದ್ದೇಶ ಪೂರ್ವಕವಾಗಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿರುವ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡುವಂತೆ ಆಗ್ರಹಿಸಲಾಯಿತು.

ಗೋಷ್ಟಿಯಲ್ಲಿ ಛಲವಾದಿ ಮಹಾಸಭಾದ ಉಪಾಧ್ಯಕ್ಷರಾದ ಓಂಕಾರಮೂರ್ತಿ, ಕಾರ್ಯದರ್ಶಿ ರವೀಂದ್ರ, ಅಣ್ಣಪ್ಪ ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...