ತ್ರಿಶೂಲ ಹಿಡಿದು ಕೋಟೆನಾಡಿಗೆ ಕಾಲಿಟ್ಟ ಹಿಂದೂ ಮಹಾಗಣಪತಿ : ಭಕ್ತಿಯಲ್ಲಿ ಮಿಂದೆದ್ದ ಯುವ ಸಮೂಹ

suddionenews
1 Min Read

ಸುದ್ದಿಒನ್, ಚಿತ್ರದುರ್ಗ, (ಸೆ.09) : ಕೈಯಲ್ಲಿ ತ್ರಿಶೂಲ ಹಿಡಿದು ವಿರಾಜಮಾನವಾಗಿ ಕೋಟೆನಾಡಿಗೆ ಬಂದ ಹಿಂದೂ ಮಹಾಗಣಪತಿ.

ಗುರುವಾರ ಬೆಳಗ್ಗೆ ಚಿತ್ರದುರ್ಗದ ಹೊರವಲಯದ ಮಾದಾರ ಚೆನ್ನಯ್ಯ ಗುರುಪೀಠದಿಂದ ಗಣಪತಿ ಪುರ ಪ್ರವೇಶ ಮಾಡಿತು. ಬೃಹತ್ ಲಾರಿಯಲ್ಲಿ ಮಠದ ಆವರಣಕ್ಕೆ ಗಣಪತಿ ಆಗಮಿಸುತ್ತಿದ್ದಂತೆ ಜಯಘೋಷಗಳು ಮೊಳಗಿದವು. ಬಳಿಕ ಸಂಪ್ರದಾಯದಂತೆ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಗಣೇಶನಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.

ಮಠದ ಆವರಣದಿಂದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರ ನೇತೃತ್ವದಲ್ಲಿ ಗಣೇಶನ ಮೂರ್ತಿಯನ್ನು ಎಲ್ಲಿಲ್ಲದ ಸಡಗರ ಮತ್ತು ಸಂಭ್ರಮದಿಂದ ಸರ್ಕಾರಿ ವಿಜ್ಞಾನ ಕಾಲೇಜು ಎದುರಿನ ಜೈನಧಾಮಕ್ಕೆ ತರಲಾಯಿತು. ಗಣಪತಿ ಆಗಮನದ ಸುದ್ದಿ ತಿಳಿದ ನಗರದ ಜನತೆ ರಸ್ತೆ ಬದಿಯಲ್ಲಿ ನಿಂತು ಕೈ ಮುಗಿದು  ಜೈಕಾರ ಹಾಕುತ್ತ ದರ್ಶನ ಪಡೆದು ಭಕ್ತಿ ಸಮರ್ಪಿಸಿ ಪುನೀತರಾದರು.

ಗಣಪತಿಯನ್ನು ಪ್ರತಿಷ್ಠಾಪನ ಸ್ಥಳಕ್ಕೆ ತರುತ್ತಿದ್ದಂತೆ ಯುವಸಮುದಾಯ ಕಣ್ತುಂಬಿಕೊಂಡು ನಮಿಸಿದರು. ಸೆಲ್ಫಿ ತೆಗದು ಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈಗಾಗಲೇ ಪ್ರತಿಷ್ಠಾಪನೆಗೆ ಸಿದ್ಧತೆ ಅಂತಿಮಗೊಂಡಿದ್ದು, ಶುಕ್ರವಾರದ ಪೂಜೆ ಸಿದ್ಧತೆಗಳು ಪ್ರಾರಂಭವಾಗಿವೆ.

Share This Article
Leave a Comment

Leave a Reply

Your email address will not be published. Required fields are marked *