ಹಿಂದೂ ಮಹಾ ಗಣಪತಿ ವಿಸರ್ಜನೆಗೆ ಸಿದ್ಧವಾಯ್ತು ಕೋಟೆನಾಡು; ಶೋಭಯಾತ್ರೆ, ಡಿಜೆ ಬ್ಯಾನ್

suddionenews
1 Min Read

ಚಿತ್ರದುರ್ಗ, (ಸೆ.30) : ಹಿಂದೂ ಮಹಾಗಣಪತಿ ವಿಸರ್ಜನೆಗೆ ಕೋಟೆನಾಡು ಸಿದ್ಧವಾಗಿದ್ದು, ಜಿಲ್ಲಾಡಳಿತ ಸಹ ಅಗತ್ಯ ಕ್ರಮ ಕೈಗೊಂಡಿದೆ.

ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಗುರುವಾರ ಸುದ್ದಿಗೋಷ್ಟಿ ನಡೆಸಿ, ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದ ಶ್ರೀ ಜೈನಧಾಮದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಪ್ರತಿಷ್ಟಾಪಿಸಿರುವ ಹಿಂದೂ ಮಹಾ ಗಣಪತಿ ವಿಸರ್ಜನೆ ಅ.2ರಂದು ನಡೆಯಲಿದೆ. ವಿಸರ್ಜನಾ ಕಾರ್ಯಕ್ರಮದಲ್ಲಿ ಶೋಭಯಾತ್ರೆ ಹಾಗೂ ಡಿಜೆ ಬಳಕೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್-19ಗೆ ಸಂಬಂಧಿಸಿದಂತೆ ಸರ್ಕಾರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಹಾಗೂ ವಿವಿಧ ನಿಬಂಧನೆಗಳಿಗೆ ಒಳಪಟ್ಟು ವಿಸರ್ಜನಾ ಕಾರ್ಯಕ್ರಮದಲ್ಲಿ ನಾಲ್ಕು ಕಲಾ ತಂಡಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ವಿಸರ್ಜನಾ ಕಾರ್ಯಕ್ರಮವು ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ಮುಖ್ಯ ರಸ್ತೆಯಾದ ಬಿ.ಡಿ. ರಸ್ತೆಯಲ್ಲಿ ಸಾಗಿ ಪ್ರವಾಸಿ ಮಂದಿರದ ಮೂಲಕ ಹೊಳಲ್ಕೆರೆ ರಸ್ತೆಯ ಮುಖಾಂತರ ಕನಕ ವೃತ್ತದವರೆಗೆ ಸಾಗಿ ಮುಕ್ತಾಯಗೊಳ್ಳಲಿದೆ. ವಿಸರ್ಜನಾ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಅ. 2ರಂದು ಯಾವ ಸಮಯದಲ್ಲಿ ವಿಸರ್ಜನೆ ಕಾರ್ಯಕ್ರಮ ಪ್ರಾರಂಭ ಮಾಡಬೇಕು ಎಂಬುವುದು ತೀರ್ಮಾನದ ಹಂತದಲ್ಲಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವರು ಎಂದರು.

ವಿಸರ್ಜನಾ ಕಾರ್ಯಕ್ರಮಕ್ಕೆ ಎರಡು ಗಂಟೆಗಳ ಕಾಲಮಿತಿ ನಿಗಧಿಪಡಿಸಲಾಗಿದೆ. ಈ ಅವಧಿಯೊಳಗೆ ವಿಸರ್ಜನಾ ಕಾರ್ಯಕ್ರಮದ ಎಲ್ಲ ಪ್ರಕ್ರಿಯೆ ಮುಕ್ತಾಯವಾಗುವಂತೆ ಜಿಲ್ಲಾಡಳಿತ ಅನುಮತಿ ನೀಡಿದೆ ಎಂದು ತಿಳಿಸಿದರು.

ತಜ್ಞರ ಅಭಿಪ್ರಾಯದಂತೆ ಕೋವಿಡ್-19ರ ಸಂಭಾವ್ಯ ಮೂರನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ. ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಆನ್‍ಲೈನ್ ಮೂಲಕ ವಿಸರ್ಜನಾ ಕಾರ್ಯಕ್ರಮ ವೀಕ್ಷಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *