ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.18): ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರಪಪ್ಪಿ ಸಹಸ್ರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಮಂಗಳವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಕಲ್ಲಹಳ್ಳಿಯಲ್ಲಿರುವ ಯಲ್ಲಮ್ಮ ದೇವಸ್ಥಾನ ಹಾಗೂ ಜೆ.ಸಿ.ಆರ್.ನಲ್ಲಿರುವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ತೆರೆದ ವಾಹನದಲ್ಲಿ ಭರ್ಜರಿ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ಅಲ್ಲಿಯೇ ಇದ್ದ ತಮ್ಮ ಮಾವ ನಟ ದೊಡ್ಡಣ್ಣನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಉಮೇದುವಾರಿಕೆಯನ್ನು ಸಲ್ಲಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಭಾಗಗಳಿಂದ ಟ್ರಾಕ್ಟರ್, ಆಟೋ, ಅಪೆಗಾಡಿಗಳಲ್ಲಿ ನೂರಾರು ಮಹಿಳೆಯರು ಗುಂಪು ಗುಂಪಾಗಿ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸುಡು ಬಿಸಿಲಿಗೆ ಹೆದರಿ ಕೆಲವು ಮಹಿಳೆಯರು ತಲೆಗೆ ಸೆರಗು ಹೊದ್ದುಕೊಂಡಿದ್ದರೆ ಇನ್ನು ಕೆಲವರು ಟೋಪಿಗಳನ್ನು ಧರಿಸಿದ್ದರು.
ಕೈಯಲ್ಲಿ ಕಾಂಗ್ರೆಸ್ ಬಾವುಟ ಹಾಗೂ ಅಭ್ಯರ್ಥಿ ಕೆ.ಸಿ.ವೀರೇಂದ್ರಪಪ್ಪಿರವರ ಭಾವಚಿತ್ರವುಳ್ಳ ಪೋಸ್ಟರ್ಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಪಪ್ಪಿಗೆ ಜೈಕಾರ ಹಾಕುತ್ತಿದ್ದರು.
ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಗಾಂಧಿವೃತ್ತ ಹಾಗೂ ಪ್ರವಾಸಿ ಮಂದಿರದ ಸಮೀಪ ಕೆ.ಸಿ.ವೀರೇಂದ್ರಪಪ್ಪಿರವರಿಗೆ ಹೂವಿನ ಮಳೆಗೆರೆಯಲಾಯಿತು. ಡೊಳ್ಳು, ತಮಟೆ, ಉರುಮೆ ಸದ್ದಿಗೆ ಮೆರವಣಿಗೆಯಲ್ಲಿದ್ದವರು ಕುಣಿದು ಕುಪ್ಪಳಿಸಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಅಲ್ಲಲ್ಲಿ ನೀರಿನ ಪ್ಯಾಕೆಟ್ ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ವೃತ್ತ, ರೋಟರಿ ಬಾಲಭವನದ ರಸ್ತೆ, ನಗರಸಭೆ ಮುಂಭಾಗ, ಗುರುಭವನ ರಸ್ತೆ, ಬಾಲಭವನದ ಎದುರಿನಲ್ಲಿರುವ ಪಾರ್ಕಿನಲ್ಲಿ ಪಪ್ಪಿ ಅಭಿಮಾನಿಗಳು, ಕಾರ್ಯಕರ್ತರು ತಂಡೋಪತಂಡವಾಗಿ ಜಮಾಯಿಸಿದ್ದರು.
ಕಣ್ಣಾಯಿಸಿದಷ್ಟು ಜನಸಾಗರ ಕಾಣುತ್ತಿತ್ತು. ತಾಲ್ಲೂಕು ಕಚೇರಿಯ ಎರಡು ಬದಿಗಳಲ್ಲಿ ಪೊಲೀಸ್ ಬ್ಯಾರಿಕೇಡ್ಗಳನ್ನಿಟ್ಟು ಪೊಲೀಸರು ಹಾಗೂ ಸಿ.ಆರ್.ಪಿ.ಎಫ್.ನವರು ತಾಲ್ಲೂಕು ಕಚೇರಿ ಆವರಣದೊಳಗೆ ಯಾರು ನುಗ್ಗದಂತೆ ಬಿಗಿ ಭದ್ರತೆ ವಹಿಸಿದ್ದರು.
ಚಿತ್ರ ನಿರ್ದೇಶಕ ಎಸ್.ನಾರಾಯಣ್, ನಟಿ ಭಾವನ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಮಾಜಿ ಶಾಸಕ ಎ.ವಿ.ಉಮಾಪತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೋಕ್ಷರುದ್ರಸ್ವಾಮಿ, ಮುನಿರಾ ಎ.ಮಕಾಂದಾರ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ನಗರಸಭೆ ಸದಸ್ಯರುಗಳಾದ ವೆಂಕಟೇಶ್, ಭಾಸ್ಕರ್, ಡಿ.ಮಲ್ಲಿಕಾರ್ಜುನ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಮಂಜಪ್ಪ, ಮಹಮದ್ ಅಹಮದ್ ಪಾಷ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಆರತಿ ಮಹಡಿ ಶಿವಮೂರ್ತಿ, ಮಹಡಿ ಶಿವಮೂರ್ತಿ, ಎನ್.ಡಿ.ಕುಮಾರ್, ಜಿ.ವಿ.ಮಧುಗೌಡ, ಜಿಲ್ಲಾ ಕಾಂಗ್ರೆಸ್ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮರೆವಣಿಗೆಯಲ್ಲಿ ಭಾಗವಹಿಸಿದ್ದರು.