in ,

ಸುಳ್ಳು ಸ್ಲೋಗನ್ ಗಳ ಸೃಷ್ಟಿಕರ್ತ, ಟರ್ಮಿನೇಟರ್ ಸಿದ್ಧಕಲೆ : ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ..!

suddione whatsapp group join

 

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ಸುಳ್ಳು ಸ್ಲೋಗನ್ ಗಳ ಸೃಷ್ಟಿ ಕರ್ತ ಎಂದಿದ್ದಾರೆ.

ʼಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತ, ಟರ್ಮಿನೇಟರ್‌, ಸಿದ್ದಕಲೆಯ ನಿಪುಣಾಗ್ರೇಸರು ಈಗ ʼJDFʼ ಎಂಬ ಹೊಸ ಜಪ ಮಾಡಿಕೊಂಡು ತಮ್ಮ ಜಾತ್ಯತೀತ ತತ್ವಾದರ್ಶಗಳಿಗೆ ಮಂಡ್ಯದಲ್ಲಿ ಎಳ್ಳೂನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ʼಜಾತಿ ಸಹಕಾರʼಕ್ಕೆ ಮೊರೆ ಹೋಗಿದ್ದಾರೆ!! ಅಯ್ಯೋ, ಎಂಥಾ ದುರ್ವಿಧಿ.

ಮತಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ. ಸಮುದಾಯದ ಅಧ್ಯಕ್ಷರೊಬ್ಬರು, ನೀವು ಮತ ಹಾಕುವುದು ಕಾಂಗ್ರೆಸ್‌ ಪಕ್ಷಕ್ಕಲ್ಲ, ನಮ್ಮ ಸಮುದಾಯದ ಸಿದ್ದಕಲಾಕೋವಿದನಿಗೆ ಎಂದು ಮನೆಮನೆಗೂ ಹೋಗಿ ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ ಮಜಭೂತಾಗಿ ನಡೆಯುತ್ತಿದೆ. ಹೇಳುವುದು ಒಂದು, ಮಾಡುವುದು ಇನ್ನೊಂದು.

ಅವರಿಗೆ ಜೆಡಿಎಸ್‌ ಫೋಬಿಯಾ ಕಾಡುತ್ತಿದೆ. ಚುನಾವಣೆ ಬಂದರೆ ಜೆಡಿಎಸ್‌ ಚಳಿ-ಜ್ವರ ಹತ್ತುತ್ತದೆ. ಈ ಜ್ವರ ಬಿಡಿಸಿಕೊಳ್ಳಲು ಸಿದ್ದಸೂತ್ರದಾರ ಬಳಸುವ ಹೊಸ ಔಷಧವೇ ʼJDFʼ. ಅವರನ್ನು ಉಳಿಸುವ ಟಾನಿಕ್‌ʼನ ಹೆಸರೇ ಜೆಡಿಎಸ್‌ ಕುಟುಂಬ ರಾಜಕಾರಣ. ಹಾಗಾದರೆ, ಅವರದ್ದು #SCF ( #ಸಿದ್ದಸೂತ್ರದಾರ_ಕಾಂಗ್ರೆಸ್‌_ಫ್ಯಾಮಿಲಿ ) ಅಲ್ಲವೆ? .

ಜೆಡಿಎಸ್‌, ಬಿಜೆಪಿ ಬಿ ಟೀಂ ಎಂದು ಭಜನೆ ಮಾಡುವವರು, ಸಹಕಾರ ಸಚಿವರ ಸಹಾಯಕನನ್ನು ಅಭ್ಯರ್ಥಿ ಮಾಡಿದ್ದು ಯಾರಿಗೆ ಸಹಕಾರ ನೀಡಲಿಕ್ಕೆ? ಜಾತ್ಯತೀತತೆಯ ಮುಖವಾಡ ಹಾಕಿಕೊಂಡು ಬಿಜೆಪಿಯನ್ನು ಬೈಯ್ಯುವವರು ಅದೇ ಪಕ್ಷದ ಸಚಿವರ ಪಿಎಗೆ ಟಿಕೆಟ್‌ ಕೊಟ್ಟಿದ್ದರ ಒಳಲೆಕ್ಕ ಏನು? ಇದು ಯಾರ ಲೆಕ್ಕ ಚುಕ್ತಾ ಮಾಡಲಿಕ್ಕೆ? ಇದೆಂಥಾ ಒಳ ಒಪ್ಪಂದ?.

ಜಾತ್ಯತೀತತೆಯ ಜಗಜಟ್ಟಿ ಮೈಸೂರಿನಲ್ಲಿ ಮಾಡಿದ ಜಾತಿ ರಾಜಕಾರಣ ಗೊತ್ತಿದೆ. ʼಸಂದೇಶ ಸನ್ನಿಧಿʼಯಲ್ಲಿ ಕೂತು ಕಾಂಗ್ರೆಸ್‌ ಮತದಾರರ 2ನೇ ಪ್ರಾಶಸ್ತ್ಯದ ಮತಗಳು ಬಿಜೆಪಿಗೇ ಹೋಗಬೇಕು, ಜೆಡಿಎಸ್‌ʼಗಲ್ಲ ಎಂದು ಫರ್ಮಾನು ಹೊರಡಿಸಿದ ʼಚಾಮುಂಡೇಶ್ವರಿ ಕ್ಷೇತ್ರ ತಿರಸ್ಕೃತʼ ಸುಳ್ಳು ಸ್ಲೋಗನ್‌ʼಗಳ ಸೃಷ್ಟಿಕರ್ತನ ನಾಟಕದ ಪರದೆ ಜಾರಿಬಿದ್ದಿದೆ.

ರಾಜಕೀಯ ಆರಂಭಿಸಿದ ಮಾತೃಪಕ್ಷವನ್ನೇ ಕ್ರೂರವಾಗಿ ಮುಳುಗಿಸಲು ಹೊರಟ ಆ ನಾಯಕರು, ಕೈ ಹಿಡಿದ ಸ್ವಪಕ್ಷವನ್ನೂ ಸ್ವಾಹಾ ಮಾಡುತ್ತಿದ್ದಾರೆ. ʼವಿನಾಶಕಾಲೇ ವಿಪರೀತ ಸುಳ್ಳು!ʼ. ಆ ಸುಳ್ಳುಗಳೇ ಅವರನ್ನು ಸುಡುತ್ತವೆ. ಆಟ ಈಗ ಆರಂಭ ಎಂದು ಟ್ವೀಟ್ ಮಾಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಸತಿ ಶಾಲೆಗಳಲ್ಲಿ ಕೊರೊನಾ ಹೆಚ್ಚಳ : ಹೊಸ ಮಾರ್ಗಸೂಚಿಗೆ ಮುಂದಾದ ಸರ್ಕಾರ..!

ಬಿಪಿನ್ ರಾವತ್ ಸೇರಿ 14 ಅಧಿಕಾರಿಗಳಿದ್ದ ಸೇನಾ ಚಾಪರ್ ಪತನ : ಇಬ್ಬರು ಸಾವು