ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 6455
ಸುದ್ದಿಒನ್, ಚಿತ್ರದುರ್ಗ, ಜುಲೈ. 29 : ಶಿಕ್ಷಕರು ಮಕ್ಕಳನ್ನು ದಂಡಿಸಿ ಶಿಕ್ಷಣದ ಜೊತೆ ಜ್ಞಾನ ಸಂಸ್ಕಾರ ಕೊಟ್ಟಾಗ ಮಾತ್ರ ಅದ್ಬುತವಾದ ದೇಶ ಕಟ್ಟಲು ಸಾಧ್ಯ ಎಂದು ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಕರೆ ನೀಡಿದರು.
ಇಂಡಿಯನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಬುಧವಾರ ನಡೆದ ಗುರು ಪೂರ್ಣಿಮೆಯನ್ನುದ್ದೇಶಿಸಿ ಮಾತನಾಡಿದರು.
ಜೀವನದಲ್ಲಿ ಸಾಧನೆ ಮಾಡಬೇಕಾದರೆ ಹಿಂದೆ ಗುರು ಮುಂದೆ ಗುರಿಯಿರಬೇಕು. ಪಾಠದ ಜೊತೆ ವಿದ್ಯಾರ್ಥಿಗಳು ಶಿಸ್ತು ಕಲಿಯದಿದ್ದರೆ ಎಷ್ಟೆ ಪದವಿ ಪಡೆದರು ಪ್ರಯೋಜನವಿಲ್ಲ. ದೆಹಲಿಯ ಜಂತರ್-ಮಂತರ್ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಶಿಸ್ತು ಇಲ್ಲದಿರುವುದೆ ಇದಕ್ಕೆ ಕಾರಣವೆನ್ನುವುದು ಗೊತ್ತಾಗುತ್ತದೆಂದು ಬೇಸರ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ಶಿಕ್ಷಕರುಗಳನ್ನು ಕಂಡರೆ ವಿದ್ಯಾರ್ಥಿಗಳಿಗೆ ಭಯವಿತ್ತು. ಈಗ ಆ ಗೌರವ ಕಡಿಮೆಯಾಗುತ್ತಿದೆ. ಜನ್ಮ ಕೊಡುವ ತಾಯಿ, ಮಾರ್ಗದರ್ಶನ ಮಾಡುವ ತಂದೆ, ಪಾಠ ಕಲಿಸುವ ಗುರುವಿಗೆ ಪ್ರತಿನಿತ್ಯ ಗೌರವ ಕೊಟ್ಟಾಗ ನಿಜವಾಗಿಯೂ ಗುರು ಪೌರ್ಣಿಮೆಗೆ ಅರ್ಥ ಬರುತ್ತದೆ. ಶಿಕ್ಷಕ ವೃತ್ತಿ ಶೋಕಿಯಲ್ಲ. ಮಕ್ಕಳನ್ನು ಸರಿದಾರಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮಗಳ ಮೇಲಿದೆ. ಶಿಕ್ಷಕರು ಮಕ್ಕಳಿಗೆ ಭಯ ಇಡದಿದ್ದರೆ ಒಂದಲ್ಲ ಒಂದು ದಿನ ಪೊಲೀಸ್ ಠಾಣೆ ಇಲ್ಲ ಕೋರ್ಟ್ನಲ್ಲಿ ನಿಲ್ಲಬೇಕಾಗುತ್ತದೆ. ಶಾಲೆಗೆ ಬರುವ ಮಕ್ಕಳನ್ನು ನಿಮ್ಮ ಮಕ್ಕಳೆಂದು ಭಾವಿಸಿ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿ ಎಂದು ಶಿಕ್ಷಕರುಗಳಲ್ಲಿ ವಿನಂತಿಸಿದರು. ಗುರು-ಶಿಷ್ಯರ ನಡುವೆ ಆರೋಗ್ಯಕರ ಸಂಬಂಧವಿರಬೇಕು. ತಂದೆ ಸ್ನೇಹಿತನಾದರೆ ಮನೆ ಹಾಳಾಗುತ್ತದೆ. ಶಿಕ್ಷಕ ಮಕ್ಕಳಿಗೆ ಸ್ನೇಹಿತನಾದರೆ ಸಮಾಜ ಹದಗೆಡುತ್ತದೆ. ತಂದೆ ಕಾಲಿಗೆ ಹೇಗೆ ನಮಸ್ಕರಿಸುತ್ತೀರೋ ಅದೆ ರೀತಿ ಪಾಠ ಹೇಳುವ ಗುರುಗಳ ಕಾಲಿಗೆ ನಮಸ್ಕರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆಂದು ಎಂ.ಸಿ.ರಘುಚಂದನ್ ಮಕ್ಕಳಲ್ಲಿ ಮನವಿ ಮಾಡಿದರು.
ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ಡೀನ್ ಅನಂತರಾಮು, ಪಿ.ಆರ್.ಓ.ರವಿಕುಮಾರ್, ಪ್ರಾಚಾರ್ಯರಾದ ಪಿ.ಬಸವರಾಜಯ್ಯ, ಶೈಕ್ಷಣಿಕ ನಿರ್ದೇಶಕರಾದ ಸಂಪತ್ಕುಮಾರ್ ಸಿ.ಡಿ, ಮುಖ್ಯ ಶಿಕ್ಷಕಿ ಜರೀನಾ ಇವರುಗಳು ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಗುರು ಪೂರ್ಣಿಮೆಯಲ್ಲಿ ಪಾಲ್ಗೊಂಡಿದ್ದರು.










