ಬೆಂಗಳೂರು.ಸೆಪ್ಟೆಂಬರ್.12: ಕರ್ನಾಟಕದ ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾಗಿರುವ ಕೃಷಿ ಕ್ಷೇತ್ರವನ್ನು ಬಲಪಡಿಸಲು ಹಾಗೂ ಅನ್ನದಾತರ ಬದುಕನ್ನು ಸುಭದ್ರ, ಸುಸ್ಥಿರ ಮತ್ತು ಸಮೃದ್ಧವಾಗಿಸಲು ರಾಜ್ಯ ಸರ್ಕಾರ ಹಲವು ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಹೊಲದಿಂದ ಹಿಡಿದು ಮಾರುಕಟ್ಟೆಯವರೆಗಿನ ಪ್ರತಿ ಹಂತದಲ್ಲೂ ರೈತರಿಗೆ ಬೆನ್ನೆಲುಬಾಗಿ ನಿಲ್ಲುವ ಉದ್ದೇಶದಿಂದ ತಂತ್ರಜ್ಞಾನ, ಯಂತ್ರೋಪಕರಣ, ಮಾರುಕಟ್ಟೆ ವಿಸ್ತರಣೆ ಹಾಗೂ ಮಳೆಯಾಶ್ರಿತ ಕೃಷಿಗೆ ಉತ್ತೇಜನ ನೀಡುವ ಸಮಗ್ರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಸರ್ಕಾರ ಘೋಷಿಸಿರುವ ಪ್ರಮುಖ ಯೋಜನೆಗಳು ಮತ್ತು ಅವುಗಳ ಮುಖ್ಯಾಂಶಗಳು ಹೀಗಿವೆ:
ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ:

ಕೃಷಿ ವೆಚ್ಚವನ್ನು ತಗ್ಗಿಸಲು ರಿಯಾಯಿತಿ ದರದಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಬಾಡಿಗೆಗೆ ಒದಗಿಸಲಾಗುತ್ತಿದೆ. 2 ಹೆಕ್ಟೇರ್‌ವರೆಗಿನ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಟ್ರ್ಯಾಕ್ಟರ್, ರೋಟಾವೇಟರ್, ಕೊಯ್ಲು ಯಂತ್ರ ಹಾಗೂ ಕೀಟನಾಶಕ ಸಿಂಪಡಿಸುವ ಡ್ರೋನ್‌ಗಳ ಬಾಡಿಗೆ ದರದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಸಿಎಂ ರೈತ ಚೈತನ್ಯ – ಡಿಜಿಟಲ್ ಅಗ್ರಿ-ಟೆಕ್ ಮಿಷನ್:
ಸ್ಮಾರ್ಟ್ ಕೃಷಿಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಡ್ರೋನ್ ಹಾಗೂ ಉಪಗ್ರಹ ಸಮೀಕ್ಷೆಯ ಮೂಲಕ ಬೆಳೆಯ ವಿಸ್ತೀರ್ಣ, ಬೆಳೆ ಆರೋಗ್ಯ ಮತ್ತು ರೋಗ-ಕೀಟ ಬಾಧೆಗಳ ಬಗ್ಗೆ ರೈತರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ. ಇದಲ್ಲದೆ, ಡಿಜಿಟಲ್ ವೇದಿಕೆಯ ಮೂಲಕ ದಿನನಿತ್ಯದ ಮಾರುಕಟ್ಟೆ ದರಗಳ ನಿಖರ ಮಾಹಿತಿ ಮತ್ತು ವೈಜ್ಞಾನಿಕ ಡೇಟಾ ಮಾರ್ಗದರ್ಶನ ಲಭ್ಯವಾಗಲಿದೆ.
ಕೃಷಿ ರಫ್ತು ಅಭಿಯಾನ:
ಕರ್ನಾಟಕದ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮಾವು, ದಾಳಿಂಬೆ, ಸಿರಿಧಾನ್ಯಗಳು, ಅಕ್ಕಿ ಹಾಗೂ ತೊಗರಿಬೇಳೆ ರಫ್ತಿಗೆ ವಿಶೇಷ ಆದ್ಯತೆ ನೀಡಲಾಗಿದೆ. ‘ಕಪ್ಪೆಕ್’ (KAPPEC) ಸಂಸ್ಥೆಯನ್ನು ಬಲಪಡಿಸಿ, ಗುಣಮಟ್ಟ ಪ್ರಮಾಣೀಕರಣ, ಗ್ರೇಡಿಂಗ್ ಹಾಗೂ ಬ್ರ್ಯಾಂಡಿಂಗ್ ಮೂಲಕ ರೈತರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ದೊರಕಿಸಿಕೊಡಲಾಗುತ್ತಿದೆ.
ಸಮಗ್ರ ಮಳೆಯಾಶ್ರಿತ ಕೃಷಿ ನೀತಿ:
ಒಣಭೂಮಿ ಕೃಷಿಗೆ ಹೊಸ ಬಲ ತುಂಬಲು ಜಲ ಸಂರಕ್ಷಣೆ, ಹವಾಮಾನ-ಸ್ನೇಹಿ ತಂತ್ರಜ್ಞಾನ ಮತ್ತು ಮಣ್ಣಿನ ಸಾರವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ. ಮಳೆಯ ಪ್ರಮಾಣಕ್ಕೆ ತಕ್ಕಂತೆ ವಿಶೇಷ ಯೋಜನೆಗಳನ್ನು ರೂಪಿಸುವುದರ ಜೊತೆಗೆ, ಕಟಾವಿನಿಂದ ಮಾರಾಟದವರೆಗೆ ಸಂಪೂರ್ಣ ಬೆಂಬಲ ಹಾಗೂ ಹೈನುಗಾರಿಕೆ-ತೋಟಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ.
ಕರ್ನಾಟಕ ಪ್ರೋಟೀನ್ ಮಿಷನ್:
ಪೌಷ್ಟಿಕ ಆಹಾರ ಭದ್ರತೆ ಮತ್ತು ಪಶುಪಾಲಕರ ಸಬಲೀಕರಣಕ್ಕಾಗಿ ಮೊಟ್ಟೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ ಹಾಗೂ ಕುರಿ-ಮೇಕೆ ಸಾಕಾಣಿಕೆಗೆ ‘ಪ್ರೋಟೀನ್ ಕ್ಲಸ್ಟರ್’ಗಳ ಮೂಲಕ ಸಮಗ್ರ ಬೆಂಬಲ ನೀಡಲಾಗುತ್ತಿದೆ. ಉತ್ಪನ್ನಗಳ ಶೇಖರಣೆ, ಸಾಗಣೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತಿದೆ.

ತೇಗದ ಸಿರಿ ಯೋಜನೆ:
ರೈತರ ಆದಾಯ ವೃದ್ಧಿಗೆ ತಮ್ಮ ಜಮೀನಿನ ರಸ್ತೆ ಬದಿಯಲ್ಲಿ ತೇಗದಂತಹ ಬೆಲೆಬಾಳುವ ಮರಗಳನ್ನು ಬೆಳೆಸಲು ಉಚಿತ ಸಸಿಗಳ ವಿತರಣೆ ಮತ್ತು ನಿರ್ವಹಣೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮರಗಳ ಮಾರಾಟದಿಂದ ಬರುವ ಆದಾಯದಲ್ಲಿ ಶೇಕಡಾ 70 ರಷ್ಟು ಪಾಲನ್ನು ಜಮೀನಿನ ಮಾಲೀಕರಿಗೇ ನೀಡಲಾಗುತ್ತದೆ.
ಗ್ರಾಮಾನುಭವ ಕಾರ್ಯಕ್ರಮ:

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು, ಜನಪದ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸಲು ಹಳ್ಳಿಗಳಲ್ಲಿ 1-2 ದಿನ ವಾಸ್ತವ್ಯ ಹೂಡುವ ಅವಕಾಶ ಕಲ್ಪಿಸಲಾಗಿದ್ದು, ಕೃಷಿ ಮತ್ತು ಪಶುಪಾಲನೆಯ ಪ್ರಾಯೋಗಿಕ ಕಲಿಕೆಗೆ ವೇದಿಕೆ ಒದಗಿಸಲಾಗಿದೆ.
ಕೃಷಿ ಸಮುದಾಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿ, ಸ್ವಾವಲಂಬಿ ಹಾಗೂ ಸುಸ್ಥಿರ ಬದುಕನ್ನು ರೂಪಿಸುವುದು ಸರ್ಕಾರದ ದೃಢ ಸಂಕಲ್ಪವಾಗಿದೆ.
ಕೃಷಿ ಕರ್ನಾಟಕದ ಗ್ರಾಮೀಣ ಆರ್ಥಿಕತೆಯ ಜೀವನಾಡಿ. ಹೊಲದಿಂದ ಮಾರುಕಟ್ಟೆಯವರೆಗಿನ ಪ್ರತಿಯೊಂದು ಹಂತವನ್ನೂ ಬಲಪಡಿಸಿ, ನಮ್ಮ ರೈತರಿಗೆ ಹಾಗೂ ಗ್ರಾಮೀಣ ಕುಟುಂಬಗಳಿಗೆ ಉಜ್ವಲ ಭವಿಷ್ಯ ರೂಪಿಸುವುದೇ ನಮ್ಮ ಪ್ರಮುಖ ಆದ್ಯತೆ.
ತಂತ್ರಜ್ಞಾನ, ಸುಧಾರಿತ ಕೃಷಿ ನೆರವು, ಮಾರುಕಟ್ಟೆ ಸಂಪರ್ಕ, ಹವಾಮಾನ ಆಧಾರಿತ ಕೃಷಿ ಹಾಗೂ ಹೊಸ ಗ್ರಾಮೀಣ ಅವಕಾಶಗಳನ್ನು… pic.twitter.com/X3yArjULNo
— CM of Karnataka (@CMofKarnataka) September 11, 2026














