ತುರುವನೂರಿನ ಸ್ವಾತಂತ್ರ್ಯ ಹೋರಾಟಗಾರರ ಸಾಹಸವನ್ನು ಗಾಂಧೀಜಿ ಶ್ಲಾಘಿಸಿದ್ದರು : ಡಾ.ಪಿ.ಯಶೋಧ ರಾಜಶೇಖರಪ್ಪ

suddionenews
2 Min Read

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜುಲೈ.24): ಗಾಂಧಿವಾದದ ಜೊತೆ ಭಾವನಾತ್ಮಕ ಸಂಬಂಧವಿಟ್ಟುಕೊಂಡಿದ್ದ ತುರುವನೂರಿನ ಕೆಲವು ಮಹಿಳೆಯರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದರೆ ಇನ್ನು ಅನೇಕ ಮಹಿಳೆಯರು ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಧೈರ್ಯ ತುಂಬಿ ಹುರಿದುಂಬಿಸುತ್ತಿದ್ದರು ಎಂದು ನಿವೃತ್ತ ಕನ್ನಡ ಸಹ ಪ್ರಾಧ್ಯಾಪಕರಾದ ಡಾ.ಪಿ.ಯಶೋಧ ರಾಜಶೇಖರಪ್ಪ ಹೇಳಿದರು.

ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ- ಸಂಸ್ಕೃತಿ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಭಾನುವಾರ ನಡೆದ 45 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಎಂಬ ವಿಷಯ ಕುರಿತು ಮಾತನಾಡಿದರು.

ಚಿತ್ರದುರ್ಗ ತಾಲ್ಲೂಕು ತುರುವನೂರಿನ ಸ್ವಾತಂತ್ರ್ಯ ಹೋರಾಟಗಾರರಾದ ಕೆಚ್ಚೆದೆಯ ಮಹಿಳೆಯರ ಸಾಹಸವನ್ನು ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಗಾಂಧೀಜಿ ಹೊಗಳಿ ಅಭಿನಂದಿಸಿದ್ದುಂಟು. ನಾಗರತ್ನಮ್ಮ ಹಿರೇಮಠ್, ಶಾಂತಮ್ಮ ಇವರುಗಳು ಎದೆಗುಂದದೆ ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನು ತ್ಯಜಿಸಿ ಹೋರಾಟಕ್ಕಿಳಿದರು. ಒಂಬತ್ತು ತಿಂಗಳ ತುಂಬು ಗರ್ಭಿಣಿ ಮಹಿಳೆಯೊಬ್ಬರು ಈಚಲು ಮರ ಕಡಿಯುವ ಸತ್ಯಾಗ್ರಹದಲ್ಲಿ ಪಾಲ್ಗೊಂಡು ದೇಶಭಕ್ತಿ ಮೆರೆದ ಇತಿಹಾಸ ತುರುವನೂರಿಗಿದೆ ಎಂದು ಸ್ಮರಿಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಸಾವಿತ್ರಮ್ಮ, ವಿಜಯಲಕ್ಷ್ಮಿಬಾಯಿ, ಸುಶೀಲಮ್ಮ, ಗೌಡ್ರ ಹನುಮಕ್ಕ ಇವರುಗಳೆಲ್ಲಾ ತುರುವನೂರಿನ ಮಹಿಳೆಯರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ. ಕೆಲವು ಸ್ವಾತಂತ್ರ್ಯ ಹೋರಾಟಗಾರರು ಸೆರೆವಾಸ ಅನುಭವಿಸಿ ಹೊರ ಬರುತ್ತಾರೆ. 1945 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆಯಲ್ಲಿ ಅನೇಕ ಮಹಿಳೆಯರು ಭಾಗವಹಿಸಿ ಗುಂಡೇಟು ತಿಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇನ್ನು ಕೆಲವು ಮಹಿಳೆಯರು ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದಿದ್ದರೂ ಹೋರಾಟಗಾರರನ್ನು ಕಾಪಾಡಿದ ಉದಾಹರಣೆಗಳು ಸಾಕಷ್ಟಿದೆ.

ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ವಕೀಲಿ ವೃತ್ತಿಯನ್ನು ಬಿಟ್ಟು ಅನೇಕ ಬಾರಿ ಜೈಲಿಗೆ ಹೋಗಿ ಬಂದ ಎಸ್.ನಿಜಲಿಂಗಪ್ಪನವರಿಗೆ ಅವರ ಪತ್ನಿ ಮುರಿಗೆಮ್ಮ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಿದ್ದರು. ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಪುರುಷರೊಂದಿಗೆ ಕೈಜೋಡಿಸುತ್ತಿದ್ದ ಅನೇಕ ಮಹಿಳೆಯರು ನಮ್ಮ ಜಿಲ್ಲೆಯಲ್ಲಿದ್ದಾರೆ ಎಂದು ತಿಳಿಸಿದರು.

ಹೋರಾಟದಲ್ಲಿ ಪಾಲ್ಗೊಂಡ ಗೌಡ್ರ ಹನುಮಕ್ಕ ತನಗೆ ಸರ್ಕಾರ ನೀಡಿದ ಪಿಂಚಣಿಯನ್ನು ತಿರಸ್ಕರಿಸಿದರು. ಕೊನೆಗೆ ಅವರನ್ನು ಎಂ.ಎಲ್.ಸಿ.ಯಾಗಿ ನೇಮಕ ಮಾಡಿಕೊಂಡಾಗ ಅಧಿಕಾರವಧಿ ಮುಗಿದ ನಂತರ ಸಿಕ್ಕ ಪಿಂಚಣಿ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಆಸ್ಪತ್ರೆ ಕಟ್ಟಿಸಿ ದೇಶಭಕ್ತಿಯನ್ನು ಪ್ರದರ್ಶಿಸಿದರು. ಗಣೆಕಲ್ ಭೀಮಕ್ಕ ಕೂಡ ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದಳು. ತುರುವನೂರಿನಲ್ಲಿ ಖಾದಿ ಭಂಡಾರ ಪ್ರಾರಂಭವಾದಾಗ ಭಿನ್ನ ಭಿನ್ನವಾದ ಉಡುಪುಗಳನ್ನು ಮಹಿಳೆಯರು ಸಿದ್ದಪಡಿಸುತ್ತಿದ್ದರು.

ಕರ್ನಾಟಕದಲ್ಲಿಯೇ ಮದಕರಿಪುರದಲ್ಲಿ ಮೊಟ್ಟ ಮೊದಲಿಗೆ ಖಾದಿ ಭಂಡಾರವನ್ನು ತೆರೆಯಲಾಯಿತು. ಕೆಲವು ಮಹಿಳೆಯರು ತಮ್ಮ ಗಂಡಂದಿರಿಗೆ ತನು, ಮನ, ಧನವನ್ನು ಎರೆದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಧೈರ್ಯ ತುಂಬುತ್ತಿದ್ದರು. ಈಗಿನ ನಮ್ಮ ದೇಶದ ರಾಜಕಾರಣಿಗಳು ಕಿಂಚಿತ್ತಾದರೂ ಕತೃತ್ವ ತೋರಿದರೆ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ತೋರಿದ ಸಾಹಸ, ಧೈರ್ಯ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ.ಲಕ್ಷ್ಮಣ್‍ತೆಲಗಾವಿ, ಸಂಚಾಲಕ ಡಾ.ಎನ್.ಎಸ್.ಮಹಂತೇಶ್, ಸಾಹಿತಿ ಡಾ.ಬಿ.ಎಲ್.ವೇಣು, ಜಿ.ಎಸ್.ಉಜ್ಜಿನಪ್ಪ, ಡಾ.ಸಿ.ತಿಪ್ಪೇಸ್ವಾಮಿ, ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ನಿವೃತ್ತ ಪ್ರಾಚಾರ್ಯರಾದ ಶಿವಕುಮಾರ್, ಷರೀಫಾಬಿ, ಕವಿ ಜೈಪ್ರಕಾಶ್, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ರಾಜ ವಂಶಸ್ಥರಾದ ರಾಜಾ ಮದಕರಿನಾಯಕ, ಹೆಚ್.ಅಂಜಿನಪ್ಪ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *