Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್, 56 ಸಾವಿರ ಉದ್ಯೋಗ, 10 ಸಾವಿರ ಯುವ ಸಂಘಗಳು! ಡಿಕೆಶಿ ಸರ್ಕಾರದ 6 ಮಹತ್ವದ ಘೋಷಣೆಗಳು

---Advertisement---

ಸುದ್ದಿಒನ್,ಬೆಂಗಳೂರು, ಜೂನ್.04:ರಾಜ್ಯದಲ್ಲಿ ಯುವ ಯುಗಕ್ಕೆ ಚಾಲನೆ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜನಪರ ಹಾಗೂ ಅಭಿವೃದ್ಧಿ ಕೇಂದ್ರಿತ ಆರು ಮಹತ್ವದ ನಿರ್ಧಾರಗಳನ್ನು ಘೋಷಿಸಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ನಿಂದ ಹಿಡಿದು ಉದ್ಯೋಗ ಸೃಷ್ಟಿ, ಯುವಕರ ಸಬಲೀಕರಣ, ಆಸ್ತಿ ದಾಖಲೆ ಸಮಸ್ಯೆ ಪರಿಹಾರ ಹಾಗೂ ಬೆಂಗಳೂರು ರಸ್ತೆ ಅಭಿವೃದ್ಧಿವರೆಗೆ ಹಲವು ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ.

ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ವಿವಿಧ ವರ್ಗಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಮಹತ್ವದ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಈವರೆಗೆ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ ಸೌಲಭ್ಯ ದೊರೆಯುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಮುದಾಯದಿಂದ ಬಂದ ಬೇಡಿಕೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

56 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ, ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ
ಯುವಕರ ಉದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸುವ ಉದ್ದೇಶದಿಂದ 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ತೀರ್ಮಾನಿಸಿದೆ. ಶೀಘ್ರದಲ್ಲೇ ನೇಮಕಾತಿ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.

ಇದರ ಜೊತೆಗೆ ಖಾಸಗಿ ಕ್ಷೇತ್ರದಲ್ಲಿಯೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ವಿಶೇಷ ಉದ್ಯೋಗ ವಿನಿಮಯ ವ್ಯವಸ್ಥೆ ರೂಪಿಸಲಾಗುತ್ತಿದೆ. ಕೈಗಾರಿಕೆಗಳು ಹಾಗೂ ಖಾಸಗಿ ಸಂಸ್ಥೆಗಳ ಅಗತ್ಯಕ್ಕೆ ತಕ್ಕಂತೆ ಯುವಕರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಜಾರಿಯಾಗಲಿದೆ. ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಅವಕಾಶ ಸಿಗುವಂತೆ ವಿಶೇಷ ನೀತಿ ರೂಪಿಸಲಾಗುವುದು ಎಂದು ಸಿಎಂ ತಿಳಿಸಿದರು.

ರಾಜ್ಯದಾದ್ಯಂತ 10 ಸಾವಿರ ಯುವಕರ ಸಂಘಗಳ ಸ್ಥಾಪನೆ
ಯುವಕರಲ್ಲಿ ನಾಯಕತ್ವ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸುವ ಉದ್ದೇಶದಿಂದ ರಾಜ್ಯದ ಪ್ರತಿಯೊಂದು ಪಂಚಾಯಿತಿಯಲ್ಲೂ ಯುವಕರ ಸಂಘ ರಚಿಸಲು ಸರ್ಕಾರ ನಿರ್ಧರಿಸಿದೆ.

ಸುಮಾರು 10 ಸಾವಿರ ಯುವ ಸಂಘಗಳು ಸ್ಥಾಪನೆಯಾಗಲಿದ್ದು, ಪ್ರತಿ ಸಂಘಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಯುವ ಪ್ರತಿಭೆಗಳಿಗೆ ಇದು ದೊಡ್ಡ ವೇದಿಕೆಯಾಗಲಿದೆ.

ಒಸಿ-ಸಿಸಿ ಸಮಸ್ಯೆಗೆ ಸರ್ಕಾರದ ಪರಿಹಾರ
ಮನೆ ನಿರ್ಮಾಣ ಮಾಡಿದ ಅನೇಕ ನಾಗರಿಕರನ್ನು ಕಾಡುತ್ತಿರುವ ಒಸಿ (Occupancy Certificate) ಮತ್ತು ಸಿಸಿ (Completion Certificate) ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.

2500 ಚದರ ಅಡಿ ವರೆಗಿನ ಕಟ್ಟಡಗಳಲ್ಲಿ ಶೇಕಡಾ 20ರೊಳಗಿನ ವ್ಯತ್ಯಾಸವಿದ್ದರೆ, ಒಂದು ಬಾರಿ ವಿಶೇಷ ಅವಕಾಶ ನೀಡಿ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದರಿಂದ ಸಾವಿರಾರು ಮನೆ ಮಾಲೀಕರಿಗೆ ದೊಡ್ಡ ನೆಮ್ಮದಿ ಸಿಗಲಿದೆ.

ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ರಾಜ್ಯಾದ್ಯಂತ
ಇದುವರೆಗೆ ಬೆಂಗಳೂರು ಕೇಂದ್ರಿತವಾಗಿದ್ದ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಪ್ರಕ್ರಿಯೆಯನ್ನು ರಾಜ್ಯದ ಎಲ್ಲ ಭಾಗಗಳಿಗೆ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ.

ಆಸ್ತಿ ಮಾಲೀಕರಿಗೆ ಕಾನೂನುಬದ್ಧ ದಾಖಲೆ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇದನ್ನು ಸರ್ಕಾರದ “ಭೂ ಗ್ಯಾರಂಟಿ” ಯೋಜನೆಯ ಭಾಗವಾಗಿ ಪರಿಗಣಿಸಲಾಗಿದೆ.

ಬೆಂಗಳೂರು ರಸ್ತೆಗಳ ಅಭಿವೃದ್ಧಿಗೆ 2,000 ಕೋಟಿ ರೂ.
ರಾಜಧಾನಿ ಬೆಂಗಳೂರಿನ ರಸ್ತೆ ಸಮಸ್ಯೆ ನಿವಾರಣೆಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳ ಡಾಂಬರೀಕರಣಕ್ಕಾಗಿ 2,000 ಕೋಟಿ ರೂ. ಅನುದಾನ ಮಂಜೂರು ಮಾಡಲು ನಿರ್ಧರಿಸಲಾಗಿದೆ.

ಮುಂದಿನ 3 ರಿಂದ 4 ತಿಂಗಳೊಳಗೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now