ಬೆಂಗಳೂರು.ಆಗಸ್ಟ್.5: ರಾಜ್ಯದಲ್ಲಿ ಸ್ತ್ರೀಯರ ಆರೋಗ್ಯ ಸುಧಾರಣೆಗೆ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ದೇಶದಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗಾಗಿ ಪ್ರತ್ಯೇಕ ‘ಆರೋಗ್ಯ ನೀತಿ’ ಜಾರಿಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಮಹಿಳೆಯರಲ್ಲಿ ಋತುಬಂಧದ (ಮೆನೋಪಾಸ್) ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ಋತು ತಾರೆ’ ವಿಶೇಷ ಅಭಿಯಾನವನ್ನು ರೂಪಿಸಲಾಗಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ಈ ಯೋಜನೆ ಕುರಿತು ವಿವರಣೆ ನೀಡಿದ್ದು, ಡಾ. ಜ್ಯೋತ್ಸ್ನಾ ಅವರ ನೇತೃತ್ವದಲ್ಲಿ ನೀತಿ ನಿರೂಪಣಾ ಸಮಿತಿಯನ್ನು ರಚಿಸಲಾಗುವುದು. ಈ ಜಾಗೃತಿ ಅಭಿಯಾನಕ್ಕೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆ ಅಡಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಗೃಹಿಣಿಯರು, ವಿದ್ಯಾರ್ಥಿನಿಯರು ಹಾಗೂ ಉದ್ಯೋಗಿ ಮಹಿಳೆಯರಿಂದ ಋತುಬಂಧದ ವೇಳೆ ಎದುರಾಗುವ ದೈಹಿಕ, ಮಾನಸಿಕ ತೊಂದರೆಗಳು ಮತ್ತು ಹಾರ್ಮೋನ್ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಸೂಕ್ತ ಆರೋಗ್ಯ ಯೋಜನೆಗಳನ್ನು ರೂಪಿಸಲಾಗುತ್ತದೆ. ಸಮಿತಿ ವರದಿ ನೀಡಿದ ಆರು ತಿಂಗಳಲ್ಲಿ ಈ ಹೊಸ ಮಹಿಳಾ ಆರೋಗ್ಯ ನೀತಿ ಜಾರಿಗೆ ಬರಲಿದ್ದು, ತದನಂತರ ಇದನ್ನು ಕೇಂದ್ರ ಸರ್ಕಾರಕ್ಕೂ ಪರಿಚಯಿಸಿ ದೇಶಾದ್ಯಂತ ಜಾರಿಗೊಳಿಸಲು ಮನವಿ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.











